Advertisement

ಆರ್ಥಿಕ ಬೆಳವಣಿಗೆಗೆ ಎಂಜಿನಿಯರ್‌ ಅವಶ್ಯ

06:15 PM Sep 16, 2021 | Team Udayavani |

ಕಲಬುರಗಿ: ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಬಿ.ಸತ್ಯನಾರಾಯಣ ಹೇಳಿದರು. ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಪ್ರಾದೇಶಿಕ ಕೇಂದ್ರದಲ್ಲಿ ಬುಧವಾರ ಎಂಜಿನಿಯರ್‌ಗಳ ದಿನಾಚರಣೆ ಅಂಗವಾಗಿ ಸರ್‌. ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಾಗೂ ರಕ್ತದಾನ ಶಿಬಿರ, ನೇತ್ರದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಯುವಕರು ದೇಶಾಭಿಮಾನ ಮತ್ತು ತಾಂತ್ರಿಕತೆ ಅವಶ್ಯಕತೆಗಳನ್ನು ಅರಿತುಕೊಂಡು ಅಧ್ಯಯನ ಶೀಲರಾಗಬೇಕು. ಸರ್‌.ಎಂ. ವಿಶ್ವೇಶ್ವರಯ್ಯ ಎಲ್ಲ ಎಂಜಿನಿಯರ್‌ಗಳಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ| ಬಸವರಾಜ ಗಾದಗೆ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಇಂಜಿನಿಯರ್‌ಗಳ ಪಾತ್ರ ಮುಖ್ಯವಾಗಿದೆ. ಯಾವಾಗಲು ತೆಗೆದುಕೊಳ್ಳುವ ನಿರ್ಧಾರಗಳ ಜನಹಿತವಾಗಿರಲಿ. ಮಾನವತೆ ರೂಢಿಸಿಕೊಳ್ಳಬೇಕಾದರೆ ಮೊದಲು ಕೊಡುವ ಗುಣವನ್ನು ಬೆಳೆಸಿಕೊಂಡು ಮಾನವತಾವಾದವನ್ನು ಸಾರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಶಂಭುಲಿಂಗಪ್ಪ, ವಿಶ್ವೇಶ್ವರಯ್ಯನವರ ಜೀವನದ ಘಟನೆಗಳು ಹಾಗೂ ಕೊಡುಗೆಗಳನ್ನು ವಿವರಿಸಿದರು.

ಅಲ್ಲದೇ, ರಕ್ತದಾನ ಮತ್ತು ನೇತ್ರದಾನದ ಅವಶ್ಯತೆಯನ್ನು ತಿಳಿಸಿ ದಾನ ಮಾಡಲು ಮುಂದೆ ಬರುವಂತೆ ಕರೆ ನೀಡಿದರು. ರೆಡ್‌ ಕ್ರಾಸ್‌ ಉಪ ಸಭಾಪತಿ ಅರುಣಕುಮಾರ ಲೋಯಾ ಮಾತನಾಡಿ, ಯುವ ಜನತೆಯಲ್ಲಿ ವಿಶ್ವೇಶ್ವರಯ್ಯನವರ ಗುಣಗಳ ಅಳವಡಿಕೆ ಅವಶ್ಯವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ನೇತ್ರ ತಜ್ಞೆ ಡಾ| ಸಂಗೀತಾ ಪಾಟೀಲ, ನೇತ್ರದಾನ ಹಾಗೂ ರಕ್ತದಾನದ ಮಹತ್ವ ತಿಳಿಸಿಕೊಟ್ಟರು. ಇದೇ ಸದಂರ್ಭದಲ್ಲಿ ಸುಮಾರು 130 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಕೆಸಿಟಿ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಶುಂಪಾಲ ಡಾ| ಖಾದ್ರಿ, ರೆಡ್‌ ಕ್ರಾಸ್‌ ಕಾರ್ಯದರ್ಶಿ ರವೀಂದ್ರ ಶಾಬಾದಿ, ರಕ್ತದಾನ ಉಪ ಸಮಿತಿ ಸಂಚಾಲಕ ಜಿ.ಎಸ್‌.ಪದ್ಮಾಜಿ, ಶಿವರಾಜ ಅಂಡಗಿ, ಸಂಯೋಜಕ ಡಾ| ಶರಣಗೌಡ ಬಿರಾದಾರ, ಡಾ| ಶಂಭುಲಿಂಗಪ್ಪ, ಡಾ| ಕೆ.ಶಿವರಾಮನಗೌಡ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next