Advertisement

ಜೀವರಕ್ಷಕ ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ಗೆ ಅನಾರೋಗ್ಯ!

11:41 AM Oct 31, 2018 | |

ಸುಬ್ರಹ್ಮಣ್ಯ : ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕೇಂದ್ರದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದ್ದ ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ ವಾಹನ ನಾಪತ್ತೆಯಾಗಿದೆ. ವಾಹನ ಕೆಟ್ಟು ಗ್ಯಾರೇಜು ಸೇರಿದೆ. ಸುಬ್ರಹ್ಮಣ್ಯ ಕ್ಷೇತ್ರದ ಮತ್ತು ಸುತ್ತಮುತ್ತಲ ಪ್ರದೇಶಗಳ ಗ್ರಾಮದ ಜನತೆಗೆ ತುರ್ತು ಸೇವೆಗೆ ಲಭ್ಯವಿದ್ದ ಈ ಆ್ಯಂಬುಲೆನ್ಸ್‌ 15 ದಿನಗಳಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಇಲ್ಲಿ ಕಾರ್ಯಾಚರಿಸುತ್ತಿರುವ 108 ಆ್ಯಂಬುಲೆನ್ಸ್‌ ಹಳೆಯದಾಗಿದ್ದು, ತಾಂತ್ರಿಕ ದೋಷವಿತ್ತು.

Advertisement

ರೋಗಿ ಆಸ್ಪತ್ರೆ ತಲುಪುವ ದಾರಿ ಮಧ್ಯೆ ಬಾಕಿ ಆಗುವ ಸ್ಥಿತಿ ಅನೇಕ ಬಾರಿ ನಿರ್ಮಾಣವಾಗಿದೆ. ಆ್ಯಂಬುಲೆನ್ಸ್‌ನ ಟೈರ್‌ ಗಳು ಅಲ್ಲಲ್ಲಿ ಪಂಕ್ಚರ್‌ ಆಗುತ್ತಿರುತ್ತವೆ. ಬಹು ಸಮಯ ಗ್ಯಾರೇಜಲ್ಲಿ ಕಳೆಯುತ್ತಿದ್ದ ಈ ಆ್ಯಂಬುಲೆನ್ಸ್‌ ಇದೀಗ ಟೈರ್‌ ಸಮಸ್ಯೆಯಿಂದ ಶಾಶ್ವತ ಗ್ಯಾರೇಜು ಪಾಲಾಗಿದೆ. ಸುಬ್ರಹ್ಮಣ್ಯ ಕೇಂದ್ರದ ಆ್ಯಂಬುಲೆನ್ಸ್‌ ಪುತ್ತೂರು ಗ್ಯಾರೆಜ್‌ನಲ್ಲಿ ದುರಸ್ತಿಗೆಂದು ನಿಲ್ಲಿಸಲಾಗಿದೆ. ಸುಬ್ರಹ್ಮಣ್ಯ ಭಾಗದಲ್ಲಿ ತುರ್ತು ಸೇವೆಯ ಅಗತ್ಯತೆ ಕಂಡುಬಂದಾಗ ಸುಳ್ಯ, ಕಡಬ ಅಥವಾ ಬೆಳ್ಳಾರೆ ಕೇಂದ್ರದಿಂದ ತರಿಸಿಕೊಳ್ಳಬೇಕಾಗುತ್ತಿದೆ. ಸುಬ್ರಹ್ಮಣ್ಯ ಆಸು ಪಾಸಿನಲ್ಲಿ ಸರಿಯಾದ ಆಸ್ಪತ್ರೆ ಕೂಡ ಇಲ್ಲ.

ಸಂಸ್ಥೆ ಮನವಿ ಮಾಡಿದೆ
ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಹಿತ ನಿತ್ಯವೂ ಅಧಿಕ ಪ್ರಮಾಣದಲ್ಲಿ ಸೇರುವ ನಗರ ಕುಕ್ಕೆ ಸುಬ್ರಹ್ಮಣ್ಯವಾಗಿದೆ. 108 ಸೇವೆ ಜವಾಬ್ದಾರಿ ಹೊತ್ತ ಸಂಸ್ಥೆ ಪ್ರಕಾರ ಇಲ್ಲಿ ನಿರೀಕ್ಷಿತ ಪ್ರಕರಣಗಳು ಬರುತ್ತಿಲ್ಲ. ಅಲ್ಲಿನ 108 ವಾಹನ 28,000 ಕಿ.ಮೀ. ಮಾತ್ರ ಓಡಿದೆ. ತುರ್ತು ಸಂದರ್ಭಗಳಲ್ಲಿ ಜನರು ಅನ್ಯ ವಾಹನಗಳ ಮೊರೆ ಹೋಗಬಾರದು ಎಂದು ಜಿವಿಕೆ ಸಂಸ್ಥೆಯ ಮೇಲ್ವಿಚಾರಕ ಮಹಾಬಲ ಮನವಿ ಮಾಡಿಕೊಂಡಿದ್ದಾರೆ. 2008ರ ನವೆಂಬರ್‌ ತಿಂಗಳಲ್ಲಿ ರಾಜ್ಯದಲ್ಲಿ 108 ಸೇವೆ ಜಾರಿಗೆ ಬಂದಿತ್ತು. ಜಿವಿಕೆ ತುರ್ತು ನಿರ್ವಹಣೆ ಮತ್ತು ಸಂಶೋಧನೆ ಸಂಸ್ಥೆ 108 ಆ್ಯಂಬುಲೆನ್ಸ್‌ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿತ್ತು. ರಾಜ್ಯದ ಜನತೆಗೆ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಅನುಕೂಲ ಇದರಿಂದ ಆಗಿತ್ತು. ಆನಂತರದ ವರ್ಷಗಳಲ್ಲಿ ನಿರ್ವಹಣೆ ಕೊರತೆಯಿಂದ ಸೇವೆ ಸೂಕ್ತವಾಗಿಲ್ಲ.

ಆವಶ್ಯಕತೆ ಇದೆ
ಕುಕ್ಕೆ ಸುಬ್ರಹ್ಮಣ್ಯ ಭಾಗದ ರಸ್ತೆಗಳಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಕಾಡಿನಿಂದ ಆವೃತ ಪ್ರದೇಶ. ಈ ಜನವಸತಿ ಪ್ರದೇಶಗಳಲ್ಲಿ ಸೂಕ್ತ ವೈದ್ಯಕೀಯ ಸೇವೆ, ವಾಹನ, ರಸ್ತೆ ವ್ಯವಸ್ಥೆ ಇಲ್ಲ. ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚು. ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಈ ವೇಳೆ ತುರ್ತು ಸೇವೆಗೆ ಆ್ಯಂಬುಲೆನ್ಸ್‌ ಅವಶ್ಯವಿದೆ. ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ಇತ್ತಂಡಗಳ ನಡುವೆ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ವ್ಯಕ್ತಿಯೊಬ್ಬ ಹಲ್ಲೆಗೊಳಗಾಗಿ ಗಾಯಗೊಂಡಿದ್ದ. ಈ ವೇಳೆಯೂ ಆ್ಯಂಬುಲೆನ್ಸ್‌ ಇರಲಿಲ್ಲ. ದೇವಸ್ಥಾನಕ್ಕೆ ದಾನಿಯೊಬ್ಬರು ಆ್ಯಂಬುಲೆನ್ಸ್‌ ನೀಡಿದ್ದರು. ಅದು ಕೂಡ ನಿರ್ವಹಣೆ ಇಲ್ಲದೆ ಸೇವೆಗೆ ಸಿಗುತ್ತಿಲ್ಲ.

ವಾರದಲ್ಲಿ ಪರಿಹಾರ
ಆ್ಯಂಬುಲೆನ್ಸ್‌ ಟೈರ್‌ ಸಮಸ್ಯೆ ಇದೆ. ವಾರದೊಳಗೆ ಬರುತ್ತವೆ. ಬಳಿಕ ಎಲ್ಲವೂ ಸರಿಹೋಗುತ್ತದೆ. ಸಾರ್ವಜನಿಕರ ಸೇವೆಗಾಗಿ ಇರುವ ಈ ಸೇವೆಯನ್ನು ಜನರು ಹೆಚ್ಚಾಗಿ ಬಳಸಿಕೊಳ್ಳಬೇಕು.
– ಮಹಾಬಲ,
ಜಿವಿಕೆ ಸಂಸ್ಥೆಯ ಮೇಲ್ವಿಚಾರಕ. 

Advertisement

ಸೂಚಿಸಿದ್ದೇನೆ
ಕುಕ್ಕೆಯಲ್ಲಿ ಆ್ಯಂಬುಲೆನ್ಸ್‌ ವಾಹನ ಇಲ್ಲದಿರುವುದರಿಂದ ಪಕ್ಕದ ಕೇಂದ್ರದ 108 ಆ್ಯಂಬುಲೆನ್ಸ್‌ ಇಲ್ಲಿಗೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ. ಅಲ್ಲಿನ ಸಮಸ್ಯೆಯನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸಮಸ್ಯೆ ಶೀಘ್ರ ಬಗೆಹರಿಯಲಿದೆ.
– ಡಾ| ಎಂ. ರಾಮಕೃಷ್ಣ ರಾವ್‌,
ಜಿಲ್ಲಾ ಆರೋಗ್ಯಾಧಿಕಾರಿ, ಮಂಗಳೂರು.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next