Advertisement

ಪರವಾನಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನ್ಯಾಯಾಲಯ; ಚುನಾವಣೆ ಸಂದರ್ಭ ಕೋವಿ ಠೇವಣಿ ಬೇಕಿಲ್ಲ

11:51 PM May 14, 2024 | Team Udayavani |

ಸುಳ್ಯ: ಚುನಾವಣೆ ಕಾಲದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ಬಗ್ಗೆ ಕಾನೂನು ಹೋರಾಟಕ್ಕೆ ಇಳಿದಿದ್ದ ಕೋವಿ ಪರವಾನಿಗೆದಾರರಿಗೆ ಜಯ ಸಿಕ್ಕಿದ್ದು, ಇನ್ನು ಮುಂದೆ ಚುನಾವಣೆ ಸಂದರ್ಭದಲ್ಲಿ ಕೋವಿಗಳನ್ನು ಎಲ್ಲರೂ ಠೇವಣಿ ಇಡಬೇಕೆಂದಿಲ್ಲ.

Advertisement

ಚುನಾವಣೆ ಕಾಲದಲ್ಲಿ ಶಸ್ತ್ರಾಸ್ತ್ರ ಠೇವಣಿ ಇಡುವ ಪದ್ಧತಿಯಿಂದ ವಿನಾಯಿತಿ ಕೋರಿ ಬೆಳೆಗಾರರು ಸಲ್ಲಿಸಿದ ಅರ್ಜಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದ್ದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿದಾರರ ಪರ ನ್ಯಾಯಾಲಯ ಎ. 24ರಂದು ಆದೇಶ ನೀಡಿದೆ.

ಪರವಾನಿಗೆ ನೀಡುವಾಗಲೇ ಸೂಕ್ತ ತನಿಖೆ ನಡೆಸಿ ಅರ್ಹರಿಗೆ ಮಾತ್ರ ನೀಡಲಾಗುತ್ತದೆ. ಆದ್ದರಿಂದ ಎಲ್ಲರೂ ಶಸ್ತ್ರಾಸ್ತ್ರ ಠೇವಣಿ ಇಡಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ತಪ್ಪು. ಚುನಾವಣೆ ಆಯೋಗ ಮಾರ್ಗಸೂಚಿಗಳ ಪ್ರಕಾರ ಕ್ರಿಮಿನಲ್‌ ಹಿನ್ನೆಲೆಯವರಿಂದ ಮಾತ್ರ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳಬೇಕು. ಅಧಿಕಾರಿಗಳು ಕೋರ್ಟ್‌ ಆದೇಶಗಳ ಪ್ರಕಾರ ನಡೆಯದೇ ಸುಲಭ ದಾರಿಯನ್ನು ಅನುಸರಿಸಿದ್ದಾರೆ ಎಂದು ಅಭಿಪ್ರಾಯಿಸಿದೆ.

ವನ್ಯಜೀವಿಗಳಿಂದ ಅಪಾಯ ಎದುರಿಸುತ್ತಿರುವ ದುರ್ಬಲ ಸಮುದಾಯ ಗಳು ಮತ್ತು ಅವರ ಬೆಳೆಗಳ, ಜಾನುವಾರುಗಳಿಗೆ ಆಗಾಗ್ಗೆ ಆಗುವ ಹಾನಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಆದ್ದರಿಂದ ಇದರ ಪರಿಹಾರಕ್ಕೆ ಸ್ಕ್ರೀನಿಂಗ್‌ ಸಮಿತಿಯು ಅರಣ್ಯ ಬಳಿಯ ರೈತರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ ಸೂಕ್ತವಾದ ಕ್ರಮ ಅನುಸರಿಸಬೇಕು. ಅಧಿಕಾರಿಗಳು ಚುನಾವಣೆ ಸಮಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜತೆಗೆೆ ಅರಣ್ಯದಂಚಿನ ರೈತರು, ದುರ್ಬಲ ಸಮುದಾಯಗಳು ಮತ್ತು ವನ್ಯ ಮೃಗಗಳ ಮಧ್ಯೆ ನಡೆಯುವ ತಿಕ್ಕಾಟ ಪರಿಗಣಿಸಿ ಎರಡರ ಮಧ್ಯೆ ಸಮತೋಲನ ನಿಲುವು ತಳೆಯಬೇಕು ಎಂದು ಕೋರ್ಟ್‌ ಸೂಚಿಸಿದೆ.

ಯಾವುದೇ ಚುನಾವಣೆ ಆರಂಭಿಸುವ ಮೊದಲೇ ಅಧಿಕಾರಿಗಳು ಆಯುಧ ಪರವಾನಿಗೆ ಹೊಂದಿದವರ ವ್ಯಾಪಕ ಮೌಲ್ಯ ಮಾಪನ ಮಾಡಬೇಕು. ಈ ಪ್ರಕ್ರಿಯೆ ಕ್ರಿಮಿನಲ್‌ ಹಿನ್ನಲೆ, ಅದರಲ್ಲೂ ಆ ಹಿಂದೆ ಚುನಾವಣೆ ಅವಧಿಯಲ್ಲಿ ಗಲಭೆ ನಡೆಸಿದವರನ್ನು ಒಳಗೊಂಡಿರಬೇಕು. ಈ ಕ್ರಮಗಳು ಸಂಭಾವ್ಯ ಅಪಾಯ ಗುರುತಿಸಲು ಮತ್ತು ಅಗತ್ಯ ಮುಂಜಾಗರೂಕ ಕ್ರಮಗಳನ್ನು ಕೈಗೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶ ಹೊಂದಿರಬೇಕು ಎಂದೂ ನ್ಯಾಯಾಲಯ ಹೇಳಿದೆ.

Advertisement

ಪ್ರತಿ ಚುನಾವಣೆಗೆ ಮುನ್ನ ಚುನಾವಣೆಯಲ್ಲಿ ತೊಡಗಿಸಿದ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳು, ಸಂಕ್ಷಿಪ್ತವಾದ ಸೂಚನೆಗಳು ಬಗ್ಗೆ ಉಪಯೋಗ ಸ್ನೇಹಿ ಮಾರ್ಗಸೂಚಿಗಳನ್ನು ಆಯೋಗವು ಪ್ರಸ್ತುತ ಪಡಿಸಬೇಕು ಎಂದು ಕೋರ್ಟ್‌ ಹೇಳಿತಲ್ಲದೇ, ಪ್ರತಿ ಚುನಾವಣೆ ನಂತರ ಮಾರ್ಗಸೂಚಿಗಳು ಜಾರಿಯಾಗಿದ್ದರ ಬಗ್ಗೆ ಮೌಲ್ಯಮಾಪನ ನಡೆಸಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.

ನ್ಯಾಯಾಲಯದ ಆದೇಶದಂತೆ ಮುಂದಿನ ದಿನಗಳಲ್ಲಿ ಎಲ್ಲ ಶಸ್ತ್ರಾಸ್ತ್ರ ಪರವಾನಿಗೆ ದಾರರು ಶಸ್ತ್ರಾಸ್ತ್ರ ಠೇವಣಿ ಇರಿಸಬೇಕಾದ ಅಗತ್ಯ ಇಲ್ಲ ಎಂದು ಅರ್ಜಿದಾರರಲ್ಲಿ ಓರ್ವರಾದ ಜಯಪ್ರಸಾದ್‌ ಜೋಶಿ ಬೆಳ್ಳಾರೆ ತಿಳಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಕೋವಿ ಠೇವಣಿ ಇಡಬೇಕೆಂಬ ಜಿಲ್ಲಾಡಳಿತದ ಆದೇಶದ ವಿರುದ್ಧ ಸುಳ್ಯ ಸೇರಿದಂತೆ ಜಿಲ್ಲೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು, ಕೋವಿ ವಿನಾಯಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಹಲವರು ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಸಲ್ಲಿಸಿದವರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಇದು ಎಲ್ಲಾ ಚುನಾವಣೆ ಸಂದರ್ಭದಲ್ಲಿ ಜಾರಿಯಾಗಬೇಕು ಎಂದು ನ್ಯಾಯಾಲಯದಲ್ಲಿ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next