ಬೆಂಗಳೂರು: ಬೆಳಕಿನ ವಿವರ್ತನೆ, ಲೇಸರ್ ಇಂಟರ್‌ಪ್ಯಾರಮೀಟರ್, ಚಲನೆಯ ವರ್ಗಾವಣೆ, ಇದ್ದರೂ ಇರದ ಕಪ್ಪೆ… ಹೀಗೆ ವಿಜ್ಞಾನದ ವಿವಿಧ ವಿಸ್ಮಯಗಳನ್ನು ಅತ್ಯಂತ ಆಕರ್ಷಕ ರೀತಿಯಲ್ಲಿ ರೂಪಿಸುವಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳು, ಅಷ್ಟೇ ಸೊಗಸಾಗಿ ತಮ್ಮ ಪ್ರಯೋಗಗಳನ್ನು ವಿವರಿಸುವ ಮೂಲಕ ಗಮನಸೆಳೆದಿದ್ದಾರೆ.
ಅಂದಹಾಗೆ ಈ ಮಕ್ಕಳು ಹೀಗೆ ಗಮನಸೆಳೆದದ್ದು ಕಸ್ತೂರಬಾ ರಸ್ತೆಯಲ್ಲಿನ ಜವಾಹರ್‌ಲಾಲ್ ನೆಹರು ತಾರಾಲಯವು ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೈನ್ಸ್ ಇನ್ ಆ್ಯಕ್ಷನ್ ವಿಜ್ಞಾನ ಪ್ರದರ್ಶನದಲ್ಲಿ. ನೆಹರು ತಾರಾಲಯದಲ್ಲಿ ಆಯೋಜಿಸಿರುವ ಈ ಅತ್ಯಾಕರ್ಷಕ ವಿಜ್ಞಾನ ಪ್ರಯೋಗಗಳ ಪ್ರದರ್ಶನ ಡಿ.3ರವರೆಗೆ ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆಯಲಿದೆ.
ಬೆಳಕಿನ ಚಲನೆ, ನೀರಿನ ಮೇಲೆ ತೇಲುವ ಸೋಪಿನ ದ್ರಾವಣ, ಗೋಡೆಯ ಮೇಲೆ ಲೇಸರ್ ನರ್ತನ, ಚಲನೆಯ ವರ್ಗಾವಣೆ, ಸೊಲಿನಾಯ್ಡ ಎಂಜಿನ್ ಹೀಗೆ ವಿಜ್ಞಾನದ ಹಲವು ಕೌತುಕಗಳನ್ನು ಶಾಲೆ ವಿದ್ಯಾರ್ಥಿಗಳು ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶಿಸಿದ್ದಾರೆ. ನಗರದ 16 ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನದ 16 ಬಗೆಯ ಹೊಸ ಪ್ರಯೋಗಗಳಲ್ಲಿ ಇಲ್ಲಿ ಪ್ರದರ್ಶನಕ್ಕೆ ಇರಿಸಿದ್ದು, ತಮ್ಮ ಪ್ರಯೋಗದ ಕುರಿತು ತಾವೇ ವಿವರಿಸುತ್ತಿದ್ದಾರೆ. ಇದರೊಂದಿಗೆ ವಿಜ್ಞಾನದ ಮಾದರಿ ಕುರಿತ ಮಾಹಿತಿ ಹಾಗೂ ರೂಪಿಸುವ ವಿಧಾನವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ.
ವಿಜ್ಞಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕ ಕೆ.ಜಿ.ಕುಮಾರ್, ವಿಜ್ಞಾನದಲ್ಲಿ ವಿಷಯವನ್ನು ಗ್ರಹಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಒಂದೇ ವಿಧಾನದ ಮೂಲಕ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ವಿಜ್ಞಾನದ ಒಂದು ಪ್ರಯೋಗಕ್ಕೆ ಮೂರ್‍ನಾಲ್ಕು ಮಾರ್ಗಗಳು ಇರುತ್ತವೆ ಎಂಬುದನ್ನು ಉದಾಹರಣೆ ಸಹಿತ ವಿದ್ಯಾರ್ಥಿಗಳಿಗೆ ವಿವರಿಸಿದರು.
ತಾರಾಯಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ಮಾತನಾಡಿ, ತಾರಾಯಲಯದಲ್ಲಿ ವರ್ಷಕ್ಕೆ ಎರಡು ಬಾರಿ ವಿಜ್ಞಾನ ಪ್ರದರ್ಶನ ಆಯೋಜಿಸುತ್ತೇವೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಜತೆಗೆ ಹೊಸ ಪ್ರಯೋಗಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು. ತಾರಾಯಲಯದ ಹಿರಿಯ ಅಧಿಕಾರಿ ಎಚ್.ಆರ್.ಮಧುಸೂಧನ್ ಸೇರಿ ಅನೇಕರು ಉಪಸ್ಥಿತರಿದ್ದರು.