Advertisement

ಸೂರ್ಯಕಾಂತಿ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು

07:09 AM Jun 25, 2019 | Lakshmi GovindaRaj |

ಗುಂಡ್ಲುಪೇಟೆ: ತಾಲೂಕಿನಲ್ಲಿ ಈ ಬಾರಿ ಉತ್ತಮವಾಗಿ ಮುಂಗಾರು ಮಳೆ ಆಗಿರುವ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಬೆಳೆ ನಳನಳಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಜಮೀನಿನಲ್ಲಿ ಬೆಳೆದಿರುವ ಸೂರ್ಯಕಾಂತಿ ಹೂವು ಎಲ್ಲರೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ.

Advertisement

ತಾಲೂಕಿನ ಬೇಗೂರು, ರಾಘವಾಪುರ, ಮಾಡ್ರಹಳ್ಳಿ, ಹಂಗಳ, ಕಗ್ಗಳದಹುಂಡಿ ಹಾಗೂ ಶಿಂಡನಪುರ ಗ್ರಾಮಗಳ ಬದಿಯ ಜಮೀನಿನಲ್ಲಿ ಸೂರ್ಯಕಾಂತಿ ಉತ್ತಮವಾಗಿ ಬೆಳೆದಿದ್ದು, ಈ ಭಾಗದಲ್ಲಿ ಓಡಾಡುವ ಪ್ರವಾಸಿಗರನ್ನು ಸೂರ್ಯಕಾಂತಿ ಬೆಳೆ ಕೈಬೀಸಿ ಕರೆಯುತ್ತಿದೆ.

ಶನಿವಾರ ಭಾನುವಾರಗಳಂದು ಊಟಿ, ಬಂಡೀಪುರ ಮುಂತಾದ ಕಡೆ ಕುಟುಂಬ ಸಮೇತರಾಗಿ ತೆರಳುವ ಪ್ರವಾಸಿಗರು ಮಾರ್ಗ ಮಧ್ಯೆ ಚೆನ್ನಾಗಿ ಬೆಳೆದಿರುವ ಸೂರ್ಯಕಾಂತಿ ಜಮೀನಿನಲ್ಲಿ ವಾಹನ ನಿಲ್ಲಿಸಿ ಕುಟುಂಬದೊಡನೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಈಗಷ್ಟೇ ಸೂರ್ಯಕಾಂತಿ ಹೂ ಅರಳುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲೆಡೆಯೂ ಕಣ್ಮನ ಸೆಳೆಯಲಿದೆ. ಕಳೆದ ವರ್ಷ ಬೇಸಿಗೆಯಲ್ಲಿಯೂ ಬೇಗೂರು ಸಮೀಪ ಚೆನ್ನಾಗಿ ಬೆಳೆದಿದ್ದ ಸೂರ್ಯಕಾಂತಿ ಜಮೀನಿನಲ್ಲಿ ಸೆಲ್ಫಿ ತೆಗೆದುಕೊಳ್ಳುವವರಿಂದ ಆಗುತ್ತಿದ್ದ ಬೆಳೆನಾಶಕ್ಕೆ ಪ್ರತಿಯೊಬ್ಬರಿಂದಲೂ 10 ರೂ. ಪಡೆದು ಫೋಟೋ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.

ಇದರಿಂದ ಪ್ರೇರಿತರಾದ ಹಲವಾರು ರೈತರು ಸಹಾ ಇದನ್ನೇ ಅನುಸರಿಸಿದ್ದರು. ಆದರೆ, ಈ ಬಾರಿ ಯಾರೂ ಸಹ ಸೆಲ್ಫಿ ತೆಗೆದುಕೊಳ್ಳಲು ದುಡ್ಡು ನೀಡಿ ಎನ್ನುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಹಂಗಳ, ಬೇಗೂರು ಹೋಬಳಿಯ ಹಲವು ಕಡೆಗಳಲ್ಲಿ ಚೆಂಡು ಮಲ್ಲಿಗೆ ಹೂವುಗಳು ಅರಳಲಿದ್ದು 3-4 ತಿಂಗಳು ರಸ್ತೆ ಬದಿಯ ರೈತರಿಗೆ ಸಣ್ಣಪ್ರಮಾಣದ ಆದಾಯ ತರಲಿದೆ.

Advertisement

ಏನೇ ಆಗಲಿ ಸೂರ್ಯಕಾಂತಿ ಸೌಂದರ್ಯಕ್ಕೆ ಮರುಳಾದ ಜನ ತಮ್ಮ ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಒಂದು ಫೋಟೋ ತೆಗೆದುಕೊಂಡೇ ಮುಂದೆ ಹೋಗುತ್ತಿರುವುದು ಗ್ರಾಮಸ್ಥರಲ್ಲಿ ಖುಷಿ ತರುತ್ತಿದೆ.

ಸಾವಿರಾರು ಸಂಖ್ಯೆಯಲ್ಲಿ ಊಟಿಗೆ ಪ್ರಯಾಣಿಸುವ ಪ್ರವಾಸಿಗರು ಜಮೀನಿನಲ್ಲಿ ಬೆಳೆದಿರುವ ಸೂರ್ಯಕಾಂತಿಯ ಹೂವಿನೊಂದಿಗೆ ತಮ್ಮ ಕುಟುಂಬ ಸಮೇತ ಫೋಟೋ ತೆಗೆದುಕೊಂಡು ಸಂತಸ ಪಡುತ್ತಿದ್ದಾರೆ. ಇದು ನಮಗೂ ಸಂತೋಷ ತರಿಸುತ್ತಿದೆ.
-ಪ್ರಣಯ್‌, ಹಂಗಳ

ಪ್ರಕೃತಿ ಮಾತೆ ಮಡಿಲಲ್ಲಿ ಏನೆಲ್ಲಾ ಸೊಬಗು ಇದೆ ಎಂಬುದಕ್ಕೆ ಈ ಸೂರ್ಯಕಾಂತಿಯೂ ಸಾಕ್ಷಿ. ಸೂರ್ಯ ಉದಿಸುವ ದಿಕ್ಕಿಗೆ ಮುಖಮಾಡಿ ನಗುತ್ತಿರುವ ಹೂವಿನ ಮಧ್ಯೆ ನಿಂತು ಫೋಟೋ ತೆಗೆದುಕೊಳ್ಳುವುದೇ ಒಂದು ಖುಷಿ. ಆ ಫೋಟೋಗಳನ್ನು ಸ್ನೇಹಿತರೊಂದಿಗೆ ಶೇರ್‌ ಮಾಡಿಕೊಂಡು ಸಂತಸ ಪಡುವುದು ಮತ್ತೂಂದು ಖುಷಿ.
-ಜಿ.ಎಸ್‌.ದರ್ಶನ್‌, ಪ್ರವಾಸಿಗ, ಗುಂಡ್ಲುಪೇಟೆ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next