ಮೈಸೂರು: ಜಾತಿ ಧರ್ಮದ ಹೆಸರಿನಲ್ಲಿ ಸಂವಿಧಾನವನ್ನು ಬುಡಮೇಲು ಮಾಡುವ ಯತ್ನ ನಡೆಯುತ್ತಿದೆ. ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರೂ ಸಮಾನರು. ಬುದ್ಧ, ಬಸವ, ಅಂಬೇಡ್ಕರ್‌ರ ಜಾತಿ ರಹಿತ ಸಮಾಜ ನಿರ್ಮಾಣದ ಕನಸು ಈಡೇರಿಸಬೇಕಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ಮೇಗಳಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ ವರುಣಾ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕಾನೂನನ್ನು ನಾವು ಗೌರವಿಸಿದರೆ, ಕಾನೂನು ನಮ್ಮನ್ನು ಗೌರವಿಸಿ, ರಕ್ಷಣೆ ಮಾಡಲಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು. ಜಾತಿಯ ಹೆಸರಿನಲ್ಲಿ ಗಲಾಟೆ ಮಾಡುವುದು, ತಪ್ಪು ತಿಳಿವಳಿಕೆಯಿಂದ ಗಾಳಿಸುದ್ದಿ ಹರಡುವುದು, ಕುಡುಕರ ಬಾಯಿಗೆ ಬೀಗ ಹಾಕುವುದು, ಮಹಿಳೆಯರನ್ನುಗೌರವದಿಂದ ಕಾಣದಿದ್ದರೆ ಅಂತವರಿಗೆ ನೀತಿ ಪಾಠ ಹೇಳಲು ಪೊಲೀಸ್ ಠಾಣೆ ಅಗತ್ಯವಾಗಿ ಬೇಕಾಗಿದೆ ಎಂದರು.
ಜಾತಿ ಹೆಸರಿನಲ್ಲಿ ನಿಂದನೆ ಮಾಡುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು ಅಪರಾಧ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಪೊಲೀಸ್ ಠಾಣೆಗಳಿಗೆ ಬಂದಾಗ ಉಳ್ಳವರಿಗೆ ಒಂದು, ಬಡವರಿಗೆ ಒಂದು ಮಾಡಬಾರದು. ಬಡವರಿಗೆ ಅನ್ಯಾಯ ವಾದರೆ ಪೊಲೀಸರ ಮೇಲೆ ಕ್ರಮ ತೆಗೆದು ಕೊಳ್ಳುವ ಅವಕಾಶವೂ ಇದೆ ಎಂದು ಹೇಳಿದರು.
ಜನಸಂಖ್ಯೆ ಹೆಚ್ಚಾದಂತೆ ಅಭಿವೃದ್ಧಿ ವೇಗ ಕೂಡ ಹೆಚ್ಚಿದೆ. ಆದರೆ, ಮನಸ್ಸು ಗಳು ಮಾತ್ರ ಪರಿವರ್ತನೆ ಆಗುತ್ತಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಸಂವಿಧಾನ ವನ್ನು ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ಮನುಕುಲ ಉಳಿಯ ಬೇಕಾದರೆ ಸಂವಿಧಾನದ ಆಶಯ ಪಾಲನೆ ಯಾಗಬೇಕು. ಇಲ್ಲದಿದ್ದರೆ ಸಮಾಜ ಅಧಃಪತನಕ್ಕೆ ಸಾಗಲಿದೆ ಎಂದರು.
ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಸಾಕ್ಷ ಕೊರತೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ದಲಿತರು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿಗಳ ಕೊರತೆ ಯಿಂದ ಖುಲಾಸೆಯಾಗದಂತೆ ನೋಡಿ ಕೊಳ್ಳಬೇಕಾಗಿದೆ. ಕಂಬಾಲಪಲ್ಲಿ ದಲಿತರ ಸಜೀವದಹನ ಪ್ರಕರಣದಲ್ಲಿ ಸಾಕ್ಷಿಗಳನ್ನು ಒದಗಿಸಲು ಸಾಧ್ಯವಾಗದ ಕಾರಣ ಖುಲಾಸೆಗೊಂಡರು. ಹಾಗಾಗಿ, ಪೊಲೀಸ್ ಅಧಿಕಾರಿಗಳು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ, ಜಿಪಂ ಸದಸ್ಯೆ ಕೆ.ವೈ.ಭಾಗ್ಯ, ತಾಪಂ ಸದಸ್ಯ ಅಂಜಲಿ ಸೋಮಣ್ಣ, ಗ್ರಾಪಂ ಅಧ್ಯಕ್ಷೆ ರಾಜಮ್ಮ, ಐಜಿಪಿ ವಿಪುಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲಾ ಕೃಷ್ಣಸ್ವಾಮಿ, ಡಿವೈಎಸ್ಪಿ ವಿಕ್ರಂ ಆಮ್ಟೆ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಸತ್ಯನಾರಾಯಣ ಇದ್ದರು.