Advertisement

ಜನತಾ ಥಿಯೇಟರ್‌ ಸ್ಥಾಪನೆಗೆ ಪ್ರಯತ್ನ: ಪಾಲೆಮಾರ್ 

11:50 AM Nov 24, 2017 | |

ಸ್ಟೇಟ್‌ಬ್ಯಾಂಕ್‌ : ಒಬ್ಬ ಕಲಾವಿದನು ಪ್ರೇಕ್ಷಕನಿಗೆ ಮನೋರಂಜನೆಯನ್ನು ನೀಡುವ ಮೂಲಕ ಆತನ ನೋವು-ಒತ್ತಡಗಳನ್ನು ಕಡಿಮೆ ಮಾಡುತ್ತಾನೆ. ಹೀಗಾಗಿ ಕಲಾವಿದನ ನೋವುಗಳಿಗೆ ಸ್ಪಂದಿಸುವುದು ಸರಕಾರದ ಕರ್ತವ್ಯವಾಗಿದೆ. ತುಳು ಚಿತ್ರರಂಗದ ಪ್ರಮುಖ ಬೇಡಿಕೆಯಾಗಿರುವ ಜನತಾ
ಥಿಯೇಟರ್‌ ಸ್ಥಾಪನೆಗೆ ಪ್ರಯತ್ನಿಸುವುದಾಗಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಹೇಳಿದರು. ಅವರು ನಗರದ ಎ.ಬಿ.ಶೆಟ್ಟಿ ವೃತ್ತದ ಬಳಿಯ ರಾಘವೇಂದ್ರ ಕಾಂಪ್ಲೆಕ್ಸ್‌ನಲ್ಲಿ ಕೋಸ್ಟಲ್‌ವುಡ್‌ ಕಲಾವಿದರ ಮತ್ತು ತಂತ್ರಜ್ಞರ ಸಾಂಸ್ಕೃತಿಕ ಒಕ್ಕೂಟದ ಕಚೇರಿ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು.

Advertisement

ಕಚೇರಿ ಆರಂಭ ಶ್ಲಾಘನೀಯ
ಕಲೆಯ ಲೋಷದೋಷಗಳು ಹಾಗೂ ತಮ್ಮ ಸಮಸ್ಯೆಗಳನ್ನು ಚರ್ಚಿಸುವುದಕ್ಕೆ ಕಲಾವಿದರಿಗೆ ಸಂಘಟನೆ ಅತಿ ಅಗತ್ಯವಾಗಿದೆ. ಜತೆಗೆ ಪ್ರೇಕ್ಷಕನು ಏನನ್ನು ಬಯಸುತ್ತಾನೆ ಎಂಬುದನ್ನೂ ಕಲಾವಿದರು ಚರ್ಚಿಸಬೇಕಿದೆ. ಅದಕ್ಕಾಗಿ ಇಂತಹ ಸಂಘಟನೆ ಮಾಡಿ ಕಚೇರಿ ತೆರೆದಿರುವುದು ಶ್ಲಾಘನೀಯ ಕಾರ್ಯ ಎಂದರು. ಕಚೇರಿಯನ್ನು ಉದ್ಘಾಟಿಸಿದ ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಯಾವುದೇ ಸಂಘಟನೆಗೆ ಕಚೇರಿ ಅತಿ ಅಗತ್ಯವಾಗಿದೆ ಎಂದರು.

ಕದ್ರಿ ಶ್ರೀ ಮಹಾಗಣಪತಿ ದೇವಸ್ಥಾನದ ಶಂಕರ ಅಲೆವೂರಾಯ ಅವರು ಆಶೀರ್ವಚನ ನೀಡಿದರು. ಒಕ್ಕೂಟದ ಕಾನೂನು ಸಲಹೆಗಾರ, ನ್ಯಾಯವಾದಿ ಮೋಹನ್‌ ದಾಸ್‌ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌, ಕಾರ್ಪೊರೇಟರ್‌ ದಿವಾಕರ್‌ ಪಾಂಡೇಶ್ವರ, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು, ಒಕ್ಕೂಟದ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್‌ ಉಪಸ್ಥಿತರಿದ್ದರು. ಪ್ರಮುಖರಾದ ಪ್ರಕಾಶ್‌ ಧರ್ಮನಗರ ಪ್ರಸ್ತಾವನೆಗೈದರು.

ಸಂಘಟನೆ ಅಗತ್ಯ
ಬೆಳೆಯುತ್ತಿರುವ ತುಳು ಚಿತ್ರರಂಗಕ್ಕೆ ಸಂಘಟನೆ ಅನಿವಾರ್ಯವಾಗಿದ್ದು, ಆ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ಪಾಲಿಕೆಯೂ ಕಲಾವಿದರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ.
ಕವಿತಾ ಸನಿಲ್‌, ಮೇಯರ್

Advertisement

Udayavani is now on Telegram. Click here to join our channel and stay updated with the latest news.

Next