ಚಾಮರಾಜನಗರ: ಕುವೆಂಪು ಅವರು ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ತರಲು ಮುಂದಾದರು. ಕುವೆಂಪು ಅವರ ಕಾವ್ಯ, ನಾಟಕಗಳನ್ನು ಸಾಹಿತ್ಯದ ದೃಷ್ಟಿಯಿಂದ ಅಷ್ಟೇ ನೋಡದೇ, ಅದರಲ್ಲಿರುವ ಗಾಢವಾದ ವಿಚಾರಗಳನ್ನು ಗ್ರಹಿಸಿ, ಪ್ರತಿಯೊಬ್ಬರೂ ಆ ದಾರಿಯಲ್ಲಿಯೇ ನಡೆಯಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವಮಾನವ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಕುವೆಂಪು ಸಾಹಿತ್ಯ ಕನ್ನಡಕ್ಕೆ ಸೀಮಿತವಲ್ಲ: ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಮೂಲಕ ಕನ್ನಡಕ್ಕಷ್ಟೇ ಸೀಮಿತವಾಗದೇ, ಭಾಷೆಗಳ ಎಲ್ಲೆ ಮೀರಿ ಬೆಳೆದವರು. ಅವರ ಕಾವ್ಯ, ನಾಟಕ, ಕವನಗಳಲ್ಲಿ ನೈಜತೆಯ ಛಾಪು ಹಾಸುಹೊಕ್ಕಾಗಿತ್ತು. ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಜಾತಿ ವ್ಯವಸ್ಥೆ, ಮಹಿಳೆಯರ ಸ್ಥಿತಿಗತಿಗಳನ್ನು ಕುವೆಂಪು ಅವರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದರು. ಈ ಮೂಲಕ ಬದಲಾವಣೆಯ ಕ್ರಾಂತಿಗೆ ನಾಂದಿ ಹಾಡಿದವರು. ಇಂಥಹ ವ್ಯಕ್ತಿತ್ವದ ಕುರಿತಾದ ಅರಿವು ಎಲ್ಲರಿಗೂ ಅಗತ್ಯ ಎಂದರು.
ಸಕಾರಾತ್ಮಕ ವಿಚಾರಗಳಿಗೆ ಆದ್ಯತೆ: ಕುವೆಂಪು ಅವರು ಸದಾ ಸಕಾರಾತ್ಮಕ ವಿಚಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ಪಂಚ ಮಂತ್ರದ ಆಧಾರದಲ್ಲಿ ಮಾನವ ಸಂಕುಲ ಬೆಳೆಯಬೇಕು ಎಂಬುದು ಅವರ ಪ್ರತಿಪಾದನೆಯಾಗಿತ್ತು. ಹೀಗಾಗಿ ಕುವೆಂಪು ಅವರು ಬಿಟ್ಟು ಹೋಗಿರುವ ಇಂತಹ ಉದಾತ್ತ ಚಿಂತನೆ ಹಾಗೂ ಅನುಭವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಕೆ. ಗಿರೀಶ್, ವಿವಿಧ ಸಂಘ-ಸಂಸ್ಥೆಗಳ ಮುಖಂಡರಾದ ಶ್ರೀನಿವಾಸಗೌಡ, ಸಿ.ಎನ್.ಗೋವಿಂದರಾಜು, ಸಿ.ಎಂ.ನರಸಿಂಹಮೂರ್ತಿ, ಜಯಕುಮಾರ್, ಅರಕಲವಾಡಿ ನಾಗೇಂದ್ರ, ಸೋಮಶೇಖರ್ ಬಿಸಲವಾಡಿ, ಅಂಬರೀಶ್, ಚಾ.ಗು. ನಾಗರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.