ಗೌರಿಬಿದನೂರು: ದೇಶದಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆಗಳನ್ನು ಜಾರಿಗೊಳಿಸಿ ದೇಶದ ದಲಿತರು, ಆದಿವಾಸಿಗಳು, ಮುಸ್ಲಿಮರಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಶಾಸಕ ಶಿವಶಂಕರ ರೆಡ್ಡಿ ಕಿಡಿಕಾರಿದರು.
ನಗರದಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ವಿರುದ್ಧ ಸಿಐಟಿಯು, ಡಿಎಸ್‌ಎಸ್, ಯುವ ಕಾಂಗ್ರೆಸ್, ರೈತಸಂಘ, ವಿಶ್ವಮಾನವ ಕುವೆಂಪು ವಿಚಾರ ವೇದಿಕೆ ಮುಂತಾದ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಬಡವರ ಪರವಾದ ಹಾಗೂ ಯುವಜನರಿಗೆ ಉದ್ಯೋಗ, ರೈತರಿಗೆ ಅನುಕೂಲಕರವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸದೆ ವಿವಾದಿತ ಕಾನೂನುಗಳನ್ನು ಜಾರಿ ಮಾಡಲು ಹೊರಟಿದೆ ಎಂದು ದೂರಿದರು. ಇಂತಹ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿದ್ದು, ಅಧಿಕಾರಿಗಳು ಜನಗಣತಿಗೆ ಬಂದಾಗ ಯಾವುದೇ ದಾಖಲೆಗಳನ್ನು ನೀಡುವುದಿಲ್ಲ. ಬೇಕಾದರೆ ನನ್ನನ್ನು ಜೈಲಿಗೆ ಹಾಕಲಿ ಎಂದು ಸಭೆಯಲ್ಲಿ ಸವಾಲೆಸೆದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕರ್ನಾಟಕ ಜನಶಕ್ತಿ ವೇದಿಕೆ ಮುಖ್ಯಸ್ಥ ಡಾ.ಹೆಚ್.ವಿ.ವಾಸು ಮಾತನಾಡಿ, ದೇಶದ ಮೂಲ ವಾರಸುದಾರರ ದಾಖಲೆಗಳನ್ನು ಕೇಳಲು ಹೊರಟಿರುವವರಿಗೆ ದಾಖಲೆ ನೀಡಬಾರದು. ಸಿಎಎ, ಎನ್‌ಆರ್‌ಸಿ ಕಾಯ್ದೆಗಳ ವಿರುದ್ಧ ಮುಂದಿನ ಏ.15ರಂದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಡಾ.ಅನಿಲ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ಸಿದ್ದಗಂಗಪ್ಪ, ಮೌಲಾನಾ ಜಮದ್ ಅಲಿ ಜವಾದ್ ಮಾತನಾಡಿದರು. ಸಿ.ಜಿ.ಗಂಗಪ್ಪ ಸ್ವಾಗತಿಸಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕಾರ್ಯಕ್ರಮ ನಿರೂಪಿಸಿದರು. ಆನೂಡಿ ನಾಗರಾಜ್ ಸಂವಿಧಾನದ ಹಕ್ಕುಗಳ ಬಗ್ಗೆ ಬೋಧಿಸಿದರು.