Advertisement

ಮಣಿಪಾಲ: ಹಳೆ ಬಟ್ಟೆಗಳಿಗೆ ಕಲಾತ್ಮಕ ಸ್ಪರ್ಶ ಸಾರುವ ಸಾರಿಕಾ

11:49 AM Sep 06, 2022 | Team Udayavani |

ಉಡುಪಿ: ಕಾಲಕ್ಕೆ ತಕ್ಕಂತೆ ಜನರ ಅಭಿರುಚಿಗಳು ಬದಲಾಗುತ್ತಿರುತ್ತದೆ. ವಿಶೇಷವಾಗಿ ಬಟ್ಟೆಗಳ ವಿಷಯದಲ್ಲಂತೂ ದಿನಕ್ಕೊಂದು ಟ್ರೆಂಡ್‌ ಹುಟ್ಟಿಕೊಳ್ಳುತ್ತದೆ. ನಿನ್ನೆ ತೆಗೆದುಕೊಂಡ ಬಟ್ಟೆಗಳು ಇಂದು ಹಳೆಯದಾಗುತ್ತದೆ. ಪ್ರಸ್ತುತ ಹಳೆಯ ಬಟ್ಟೆಗಳ ವಿಲೇವಾರಿಯಂತೂ ದೊಡ್ಡ ಸವಾಲು ಎನಿಸಿದೆ. ಈ ಎಲ್ಲದರ ನಡುವೆ ಹಳೆಯ ಬಟ್ಟೆಗಳನ್ನೇ ಆಧಾರವಾಗಿಟ್ಟುಕೊಂಡು ಅದಕ್ಕೆ ಸಾಂಪ್ರದಾಯಿಕ ನೆಲೆಯಲ್ಲಿ ಕಲಾತ್ಮಕ ಸ್ಪರ್ಶ ನೀಡುವ ಮೂಲಕ ಗಮನ ಸೆಳೆದಿದ್ದಾರೆ ಕಲಾವಿದೆ ಮಣಿಪಾಲದ ಸಾರಿಕಾ ಕಾಮತ್‌.

Advertisement

ಕೌದಿ ಕುಸುರಿ ಮೂಲಕ ಹಳೆ ಬಟ್ಟೆಗಳಿಗೆ ಮರು ಜೀವ ನೀಡಿ ಸುಂದರಗಾಣಿಸುತ್ತಾರೆ. ಹಳೆಯ ಜೀನ್ಸ್‌ ಪ್ಯಾಂಟ್‌, ಸೀರೆ, ಟಿ-ಶರ್ಟ್‌, ಶರ್ಟ್ಸ್, ಮಕ್ಕಳ ಬಟ್ಟೆಗಳಿಂದ ವಿವಿಧ ವಿನ್ಯಾಸದಲ್ಲಿ ಬೆಡ್‌ಶೀಟ್‌ ಗಳು, ಸೋಫ‌ ಕವರ್ಸ್‌, ಡೈನಿಂಗ್‌ ಕವರ್‌, ಡೋರ್‌ ಮ್ಯಾಟ್‌, ವಿಂಡೋ ಕವರ್ಸ್‌, ಮಕ್ಕಳು ಮಲಗುವ ಹಾಸಿಗೆ, ನೆನಪಿನ ಹೊದಿಕೆಗಳು, ಕುಪ್ಪಸಗಳನ್ನು ಆಕರ್ಷಕವಾಗಿ ರೂಪಿಸಿದ್ದಾರೆ. ಮನೆಯ ಅಂದ ಹೆಚ್ಚಿಸಲು ಹಳೆಯ ಬಟ್ಟೆಗಳ ತುಂಡುಗಳಿಂದ ರೂಪಿಸಿದ ಫ್ಯಾಬ್ರಿಕ್‌ ಮೊಸೈಕ್‌ ಆರ್ಟ್‌ಗಳು ಇವರ ಕುಸುರಿಯಿಂದ ಸೊಗಸಾಗಿ ಮೂಡಿವೆ.

ಮದ್ಯದ ಬಾಟಲಿಗೂ ಕಲೆಯ ಸ್ಪರ್ಶ

ಬೀದಿಯಲ್ಲಿ ಬಿದ್ದ ಮದ್ಯದ ಗಾಜಿನ ಬಾಟಲಿಗಳನ್ನು ತ್ಯಾಜ್ಯವೆಂದು ಪರಿಗಣಿಸದೆ ಆಕರ್ಷಕ ಸ್ವರೂಪ ನೀಡಿ, ಮನೆಯ ಒಳಾಂಗಣ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ವಿವಿಧ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಸಾಲಿಗ್ರಾಮದ ಚೇಂಪಿ ರಂಗನಾಥ್‌ ಪುರುಷೊತ್ತಮ್‌ ಭಟ್‌, ಸುಮತಿ ದಂಪತಿಯ ಪುತ್ರಿ. ಮಣಿಪಾಲ ಎಂಐಟಿಯಲ್ಲಿ ಪ್ರಿಂಟಿಂಗ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಮಾಡಿದ್ದಾರೆ. ಕೆಲವು ವರ್ಷ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿ ಅನಂತರ ಜಾಹೀರಾತು, ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಅಧ್ಯಯನ ನಡೆಸಿ ಜತೆಗೆ ಫ್ಯಾಶನ್‌ ಡಿಸೈನಿಂಗ್‌ ಕೋರ್ಸ್‌ ಅನ್ನು ಮಾಡಿದ್ದಾರೆ.

ಪ್ಯಾನ್‌ಇಂಡಿಯಾ ಸೀರೆ

Advertisement

ಸಾರಿಕಾ ಅವರ ಪ್ಯಾನ್‌ ಇಂಡಿಯಾ ಪರಿಕಲ್ಪನೆಯಡಿಯಲ್ಲಿ ಸೀರೆಯೊಂದನ್ನು ರೂಪಿಸಿದ್ದಾರೆ. ಕೇರಳ ಸಾಂಪ್ರದಾಯಿಕ ಕಸವು ಸೀರೆಗೆ ರಾಜಸ್ಥಾನ ಬಂದನಿಯ ಸಾಂಪ್ರದಾಯಿಕ ಸ್ಪರ್ಶ ನೀಡಿದ್ದಾರೆ. ಉತ್ತರ, ದಕ್ಷಿಣ ಉಡುಗೆಯ ಸಾಂಸ್ಕೃತಿಕ ಸೊಗಡನ್ನು ಒಂದು ಸೀರೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಸಫ‌ಲವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸೀರೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಎಂಬ್ರಾಯ್ಡರಿ, ಕೌದಿ, ಫ್ಯಾಬ್ರಿಕ್‌ ಪೈಂಟಿಂಗ್‌ ಅತ್ಯಂತ ಸೂಕ್ಷ್ಮ ಕುಸುರಿಯಾಗಿದೆ. ಸಾಕಷ್ಟು ಶ್ರದ್ಧೆ, ತಾಳ್ಮೆಯಿಂದ ತೊಡಗಿಸಿಕೊಂಡಲ್ಲಿ ಉತ್ತಮ ಫ‌ಲಿತಾಂಶ ಸಿಗಲಿದೆ ಎನ್ನುತ್ತಾರೆ ಸಾರಿಕಾ.

Advertisement

Udayavani is now on Telegram. Click here to join our channel and stay updated with the latest news.

Next