Advertisement
ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಕಪಿಮುಷ್ಠಿಯಲ್ಲಿ ನಲುಗಿಹೋಗಿದ್ದ ಭಾರತಕ್ಕೆ ಆಗಸ್ಟ್ 15, 1947 ರ ಮಧ್ಯರಾ ತ್ರಿ ಸ್ವಾತಂತ್ರ್ಯ ದೊರಕಿತು. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡುಗಡೆ ಹೊಂದಿದ ದೇಶಕ್ಕೆ ಆಡಳಿತ ನಡೆಸಲು ಸಂವಿಧಾನವೊಂದು ಆವಶ್ಯವಿತ್ತು.
ವಿಶ್ವದ ಶ್ರೇಷ್ಠ ಸಂವಿಧಾನ
ಭಾರತವು ಒಂದು ಸ್ವತಂತ್ರವಾದ ಸಾರ್ವಭೌಮ ರಾಷ್ಟ್ರ, ಇಲ್ಲಿ ನಾಗರಿಕರೇ ಅಧಿಕಾರದ ಮೂಲ. ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಸಂವಿಧಾನ ದೊರಕಿಸಿಕೊಟ್ಟಿದೆ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಸರ್ವರಿಗೂ ಸಮಾನ ಅವಕಾಶಗಳನ್ನು, ಸ್ಥಾನಮಾನಗಳನ್ನು ಕಲ್ಪಿಸಿದೆ. ವ್ಯಕ್ತಿ ಗೌರವ ಮತ್ತು ಸಹೋದರತೆಯನ್ನು ಬೆಳೆಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತಲೆ ಎತ್ತಿ ನಡೆಯುವಂತೆ ಮಾಡಿದೆ. ನಾಲ್ಕು ಗೋಡೆಯ ಮಧ್ಯದಲ್ಲಿ ಜೀವಿಸಬೇಕಾಗಿದ್ದ ಸ್ತ್ರೀಯರನ್ನು ರಾಷ್ಟ್ರಪತಿ ಆಗುವಂಥ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ರಾಷ್ಟ್ರದ ಏಕತೆಯನ್ನು ಹಾಗೂ ಸಮಗ್ರತೆಯನ್ನು ಸಂವಿಧಾನ ಕಾಪಾಡಿದೆ. ಇಂಥಹ ಸಂವಿಧಾನವನ್ನು ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಬಣ್ಣಿಸಲಾಗಿದೆ.
Related Articles
Advertisement
ಸ್ವತಂತ್ರಗೊಂಡ ಭಾರತ ಮುಂದೆ ಹೇಗೆ ನಡೆಯಬೇಕೆಂಬ ದಿಕ್ಸೂಚಿಯನ್ನು ಸಂವಿಧಾನದಲ್ಲಿ ಶಾಸನ ಬದ್ದಗೊಳಿಸಿ, ಈ ದೇಶದ ಪ್ರಜೆಗಳು ಹೇಗಿರಬೇಕು, ಆಡಳಿತ ನಡೆಸುವ ಸರಕಾರ, ಪಕ್ಷ ಹಾಗೂ ಸಂವಿಧಾನದಡಿಯಲ್ಲಿರುವ ಇತರ ಸ್ವಾಯತ್ತ ಸಂಸ್ಥೆಗಳಾದ ಚುನಾವಣ ಪ್ರಾಧಿಕಾರ, ಸವೊìಚ್ಚ ನ್ಯಾಯಾಲಯ ಸಹಿತ ಹಲವಾರು ಸಂಸ್ಥೆಗಳು ಕೂಡ ಹೇಗೆಲ್ಲ ತಮ್ಮ ತಮ್ಮ ಜವಾಬ್ದಾರಿಗಳನ್ನು ಹೊತ್ತು ದೇಶ ಮುನ್ನಡಸಬೇಕೆನ್ನುವುದನ್ನು ಹಾಗೂ ಭಾರತದಲ್ಲಿ ತಮ್ಮದೇ ವೈಶಿಷ್ಯಗಳನ್ನು ಹೊಂದಿರುವ ಹಲವಾರು ಜಾತಿ, ಪಂಗಡ, ಪ್ರಾಂತ್ಯಗಳ ಅಧಿಕಾರ ಕೇಂದ್ರೀಕರಣವನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ.
ಕೇಂದ್ರೀಕೃತ ಸಂಸದೀಯ ರಾಜ್ಯಗಳ ಒಕ್ಕೂಟದ ವ್ಯವಸ್ಥೆ ಇದೆ. ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿಗಳ ಅಡಿಯಲ್ಲಿ ಹೆಚ್ಚು ಅಧಿಕಾರವಿದೆ. ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಎಂಬ ತಣ್ತೀಗಳನ್ನು ಅಳವಡಿಸಿ, ಅವುಗಳಿಂದಲೇ ದೇಶದ ಆಡಳಿತ ಮುನ್ನಡೆಸಲಾಗುತ್ತದೆ.
ನಮ್ಮ ಸಂವಿಧಾನಕ್ಕೆ ತನ್ನದೆ ಆದ ಇತಿಹಾಸ ಮಹತ್ವ ಹಾಗೂ ಲಿಖೀತ ಸ್ವರೂಪವಿದೆ. ಜಗತ್ತಿನಲ್ಲೇ ಅತೀ ದೊಡ್ಡ ಲಿಖೀತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮದ, ವರ್ಗದ, ಸ್ತರದ ಜನರ ಹಿತವಿದೆ. ಸ್ತ್ರೀಯರ, ದಲಿತರ, ಹಿಂದುಳಿದವರಿಗೆ ಅಲ್ಪಸಂಖ್ಯಾಕರ ಸಮಾನತೆ ಕಲ್ಪಿಸಿಕೊಡಲಾಗಿದೆ. ಜತೆಗೆ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ.
ಇಡೀ ಭಾರತದ ಅಧಿಕಾರ ಜನರ ಕೈಯಲ್ಲಿರುವಂತೆ ಮಾಡಿರುವುದು ಡಾ| ಬಾಬಾ ಸಾಹೇಬರ ಸಂವಿಧಾನ. ಅದಕ್ಕಾಗಿಯೇ ಅವರು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ ಎಂದು ಸಾರಿ, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಲೋಕತಾಂತ್ರಿಕ, ಗಣತಂತ್ರವನ್ನಾಗಿ, ವಿಧಿಯುಕ್ತವನ್ನಾಗಿ ಸ್ಥಾಪಿಸಿ, ದೇಶದ ಎಲ್ಲ ಪ್ರಜೆಗಳಿಗೆ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯದ ಹಕ್ಕು, ಸಂವಿಧಾನಾತ್ಮಕ ಪರಿಹಾರಗಳ ಹಕ್ಕು, ಹೀಗೆ ಮೂಲಹಕ್ಕುಗಳು ಮತ್ತು ಮೂಲ ಕರ್ತವ್ಯಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಇವುಗಳು ಪ್ರತಿಯೊಬ್ಬ ದೇಶವಾಸಿಗೆ ಅನ್ವಯವಾಗುತ್ತವೆ.
ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಯಲ್ಲಿ ಸ್ವಾತಂತ್ರ್ಯ ಸಮಾನತೆ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಿ, ವೈಯಕ್ತಿಕ ಘನತೆ, ದೇಶದ ಒಗ್ಗಟ್ಟು ಮತ್ತು ಏಕತೆಗೆ ಎಲ್ಲರಲ್ಲೂ ಭಾತೃತ್ವವನ್ನು ಪ್ರೋತ್ಸಾಹಿಸುವಂತೆ ಮಾಡಿದ್ದಾರೆ. ಆದ್ದರಿಂದಲೇ ಸಂವಿಧಾನದ ದಿಕ್ಸೂಚಿಯಂತೆ ಇಂದು ಎಲ್ಲ ಅಧಿಕಾರಗಳು ನಡೆಯುತ್ತವೆ.
ಎಲ್ಲ ಧರ್ಮ ಗ್ರಂಥಗಳು ಆಯಾ ಧರ್ಮಿಯರು ಹೇಗೆ ಬಾಳಬೇಕೆಂಬುದನ್ನು ಹೇಳಿದರೆ, ಎಲ್ಲ ಧರ್ಮಿಯರು ದೇಶದಲ್ಲಿ ಹೇಗೆ ಬಾಳಬೇಕೆಂಬುದನ್ನು ಸಂವಿಧಾನ ಹೇಳುತ್ತದೆ. ಅದಕ್ಕಾಗಿಯೇ ಬಾಬಾ ಸಾಹೇಬರು ಸಂವಿಧಾನವನ್ನು “ಭಾರತದ ಭವಿಷ್ಯದ ಜೀವನ ವಿಧಾನದ ಕನ್ನಡಿ’ ಎಂದು ಬಣ್ಣಿಸಿದ್ದಾರೆ. ವಿಶ್ವಮಾನ್ಯತೆಯನ್ನು ಪಡೆದ ನಮ್ಮ ಸಂವಿಧಾನವು ಆಧುನಿಕ ಭಾರತದಲ್ಲಿ ಸಮಾನತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ತರ ಮೈಲಿಗಲ್ಲಾಗಿದೆ. ಸ್ವಾತಂತ್ರ್ಯ ಚಳವಳಿಗಾರರು, ಹುತಾತ್ಮರು ಕಂಡ ಕನಸಿನ ಭಾರತವನ್ನು ನನಸು ಮಾಡುವ ನೆಲೆಯಲ್ಲಿ ನಮ್ಮ ಸಂವಿಧಾನ ಹೆಚ್ಚು ಸಶಕ್ತವಾಗಿದೆ.
ಈ ದೇಶದ ನಾಗರಿಕರಾದ ನಾವು ಮಾಡಬೇಕಾದ ಕರ್ತವ್ಯಗಳನ್ನು ಮತ್ತು ನಮಗೆ ಸಂವಿಧಾನವು ದಯಪಾಲಿಸಿರುವ ಹಕ್ಕುಗಳನ್ನು ಮತ್ತು ಸರಕಾರದ ಕಾರ್ಯನಿರ್ವಹಣೆಯನ್ನು ಚೆನ್ನಾಗಿ ತಿಳಿದುಕೊಳ್ಳಲು ಸಂವಿಧಾನದ ಅಧ್ಯಯನ ಆವಶ್ಯಕವಾಗಿದೆ. ಸಂವಿಧಾನವನ್ನು ತಿಳಿದುಕೊಂಡಾಗ ಮಾತ್ರ ನಾವು ನಿಜವಾದ ನಾಗರಿಕರಾಗಿ ನಮ್ಮ ದೇಶದ ಪ್ರಜಾಪ್ರಭುತ್ವವು ಯಶಸ್ವಿಯಾಗಿ ಮುಂದುವರಿಯುವಂತೆ ಮಾಡಲು ನಮಗೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ಅಭ್ಯಸಿಸುವುದು ನಮ್ಮ ಮೊದಲ ಆದ್ಯತೆ ಆಗಬೇಕಾಗಿದೆ.
ಬಸವರಾಜ ಎನ್. ಬೋದೂರು, ಮೈಸೂರು ವಿವಿ (ದೂರ ಶಿಕ್ಷಣ)