ಬೆಂಗಳೂರು ಸುಮಾರು ವರ್ಷ ನಮ್ಮನ್ನು ಕಾಡಿದ ಊರು. ಬಾಲ್ಯದಲ್ಲಿ ಬೆಂಗಳೂರು ನೋಡಬೇಕೆನ್ನುವುದು ನನ್ನ ಊರಿನ ಗೆಳೆಯರ ಬಹುದೊಡ್ಡ ಆಸೆ. ಆದರೆ ಅಂದು ಬೆಂಗಳೂರಿಗೆ ಕೆಲಸದ ನಿಮಿತ ಮನೆಯ ಹಿರಿಯರು ಹೋಗಿಬರುತ್ತಿದ್ದರು.
ನಮ್ಮ ಆಸೆ ಆಸೆಯಾಗಿಯೇ ಉಳಿಯಿತು. ಬೆಂಗಳೂರೆಂದರೆ ನಮಗೆ ಯಾಕೆ ಇಷ್ಟವೆಂದರೆ ಅಲ್ಲಿನ ವಿಧಾನ ಸೌಧ, ಹೈಕೋರ್ಟ್, ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಮುಂತಾದ ಪ್ರದೇಶಗಳನ್ನು ಕನ್ನಡ ಚಲನಚಿತ್ರಗಳಲ್ಲಿ ತೋರಿಸುತ್ತಿದ್ದರು. ಇದನ್ನು ಕಂಡ ನಮಗೆ ಬೆಂಗಳೂರು ಆಕರ್ಷಣೀಯ ಕೇಂದ್ರ. ಮೇಲಾಗಿ ಇದೇ ಊರಲ್ಲಿ ಡಾ| ರಾಜಕುಮಾರ್, ಡಾ| ವಿಷ್ಣುವರ್ಧನ್, ಅಂಬರೀಶ್ ಮೊದಲಾದ ಹೆಸರಾಂತ ಕಲಾವಿದರು ಇಲ್ಲೆ ಇರೋದು ಅನ್ನೊ ಹೆಮ್ಮೆ. ಹೀಗೆ ನಮಗೆ ಕಾಡಿದ ಬೆಂಗಳೂರನ್ನು ದುಡಿಮೆಗಾಗಿ ವೃತ್ತಿ ಪ್ರಾರಂಭಿಸಿದ ಮೇಲೆ ಹಲವಾರು ಬಾರಿ ಬಂದು ಹೋಗಿದ್ದೇವೆ. ಬಾಲ್ಯದ ಕನಸು, ಆಸೆಯ ಬೆಂಗಳೂ ನಮಗೆ ಈಗ ಅಷ್ಟಾಗಿ ಕಾಡುತ್ತಿಲ್ಲ.
ಇಷ್ಟಾಗಿ ಬೆಂಗಳೂರನ್ನು ಮತ್ತು ಅಲ್ಲಿನ ರಂಗುರಂಗಿನ ದುನಿಯಾ, ಎಂ.ಜಿ.ರಸ್ತೆ, ಇವೆಲ್ಲವುಗಳನ್ನು ನೋಡಲಾಗಿಲ್ಲ. ಇವೆಲ್ಲವುಗಳ ಮಧ್ಯೆ ಇತ್ತೀಚಿಗೆ ಅಳಿಯನ ಒತ್ತಾಸೆಯ ಮೇರೆಗೆ, ಮಾವ ಮತ್ತು ಅಕ್ಕನವರೊಂದಿಗೆ ಮಂತ್ರಿ ಮಾಲ್ ಗೆ ಹೋಗಿದ್ದೆ. ಇದು ಇನ್ನೊಂದು ತರಹದ ಲೋಕ. ಇಲ್ಲಿ ಎಲ್ಲವೂ ಸಿಗುತ್ತವೆ ಆದರೆ ಕಿಸೆಯಲ್ಲಿ ಗರಿಗರಿ ನೋಟುಗಳಿರಬೇಕು ಇಲ್ಲದಿದ್ದರೆ ಉಜ್ಜುವ ಕಾರ್ಡ್‌ಗಳಾದರು ಇದ್ದರೆ ಸರಿ. ಬೆಳಕಿನಲ್ಲಿ ಝಗಮಗಿಸುವ ಬಟ್ಟೆಗಳು, ಜುವೆಲರಿ ಶಾಪ್‌ನ ಆಭರಣಗಳು, ಮಕ್ಕಳ ಆಟಿಕೆ, ಹೀಗೆ ಎಲ್ಲ ಬಗೆಯ ಸಾಮಾನು ಪದಾರ್ಥಗಳು ಒಂದೇ ಸೂರಿನಡಿ ಸಿಗುವಂತ ವ್ಯವಸ್ಥೆಯೇ ಮಾಲ್.
ಚಲಿಸುವ ಮೆಟ್ಟಿಲುಗಳು (ಎಸ್ಕಲೇಟರ್), ಹೀಗೆ ಸಾಗುತ್ತಾ ಸಾಗಿದ ನಮಗೆ 3 ನೇ ಮಹಡಿಗೆ ಬಂದಾಗ ಬಗೆಬಗೆಯ ಹೋಟೆಲ್‌ಗಳು, ಕುರುಕಲು ತಿಂಡಿ, ನಮಗೆಲ್ಲಾ ಟಿ.ವಿಯಲ್ಲಿ ಕಾಣುತ್ತಿದ್ದ ಪಿಜ್ಜಾ, ಕೆ.ಎಫ್.ಸಿ ಚಿಕನ್ ಇವೆಲ್ಲವುಗಳನ್ನು ನೋಡಿದ್ದು ಅಲ್ಲಿಯೇ ಇಷ್ಟೆಲ್ಲಾ ತಿರುಗುವ ಹೊತ್ತಿಗೆ ಹೊಟ್ಟೆಯು ಹಸಿದಿತ್ತು ಅಲ್ಲೆ ನಮ್ಮ ಇಷ್ಟದ ತಿಂಡಿಗಳನ್ನೆಲ್ಲಾ ತಿಂದು ಊಟ ಮುಗಿಸಿದೆವು. ಕೊನೆಗೆ ನಮಗೆ ಸಿಕ್ಕಿದ್ದು ಈ ದೆವ್ವದ ಮನೆ. ಇಲ್ಲಿ ಸ್ಕೇರಿ ಹೌಸ್ ಅಂತ ಬೋರ್ಡ್ ಹಾಕಿದ್ದಾರೆ. ಸ್ಕೇರಿ ಅಂದರೆ ಭಯ ಅಂತ ಆಗುತ್ತದೆ. ಆ ಮನೆಯ ಪ್ರವೇಶಕ್ಕೂ ಟಿಕೆಟ್ ಪಡೆದು ಒಳಹೋದ ನಮ್ಮನ್ನು ಸ್ವಾಗತಿಸಿದ್ದು ಅಲ್ಲೆಲ್ಲ ಭಯ ಬಿಳಿಸಿದ್ದು ದೆವ್ವಗಳೇ. ಅಲ್ಲಿಯವರೆಗೂ ಒಳಗಡೆ ಹೋಗಬೇಕೆಂದು ಹಠಹಿಡಿದಿದ್ದ ಅಳಿಯ ಬ್ಯಾಡ ಬಾ ಮಾಮ ಹೊಳ್ಳಿ ಹೋಗೋಣ ಅನ್ನಬೇಕೆ. ಆದರೆ ದೆವ್ವಗಳು ಹೀಗೆ ಹೋಗಿ ಅಂತ ನಮಗೆ ದಾರಿ ತೋರಿಸಿದವು.
ಅಳಿಯನ ಕೈ ಹಿಡಿದು ಕತ್ತಲಲ್ಲಿ ಸಾಗಿದ ನಮಗೆ, ಬಗೆಬಗೆಯ ದೆವ್ವಗಳ ವೇಷ ಹೊತ್ತ ಮನುಷ್ಯರು ಕರ್ಕಶವಾಗಿ ಕೂಗಿ ಭಯ ಬೀಳಿಸುತ್ತಾರೆ. ಇದಕ್ಕೆ ಪೂರಕವಾಗಿ ಕತ್ತಲು ಮತ್ತು ಅಲ್ಲಿನ ಸಲಕರಣೆಗಳು ಒಳ ಹೋದವರಿಗೆ ಭಯ ಹುಟ್ಟಿಸುತ್ತದೆ. ಹ್ಯಾಂಗೂ ಕತ್ತಲ ಐತಲ್ಲ ಅಂತ ಕೈಯಲ್ಲಿರೋ ಮೊಬೈಲಿನಲ್ಲಿನ ಟಾರ್ಚ್ ಹಚ್ಚಿದರೆ ದೆವ್ವಗಳೇ ನಮಗೆ ಆ ಟಾರ್ಚ್ ಆರಿಸಿ ಅನ್ನಬೇಕೆ. ಅವರ ಕತ್ತಲಿನ ಆಟಕ್ಕೆ ನಮ್ಮ ಬೆಳಕನ್ನು ಸಹಿಸಲಾಗಲಿಲ್ಲ. ಮತ್ತೆ ಕೆಳಲಸಾಧ್ಯವಾದ ಕರ್ಕಶವಾದ ಧ್ವನಿಹೊತ್ತ ದೆವ್ವದ ವೇಷ ಹೊತ್ತ ಮನುಷ್ಯ ಹೆದರಿಸಲು ಮುಂದಾದಾಗ ಏ ಇವೆಲ್ಲಾ ನಾವ್ ನೋಡದೆ ಇರದಾ. ಯಾಕೆ ಮಯ್ನಾಗ ಹ್ಯಾಂಗ್ ಅಯ್ತಿà ಅಂದದ್ದೇ ತಡ, ದೆವ್ವಗಳೇ ನಮಗೇ ಹೀಗೆ ಹೋಗಿ ಸರ ಅಂತ ಮನುಷ್ಯರ ಹಾಗೆ ಮಾತನಾಡಿದವು. ಅಲ್ಲಿಯವರೆಗೂ ನನ್ನ ಗಟ್ಟಿಯಾಗಿ ಬಿಗಿದಪ್ಪಿಕೊಂಡ ನನ್ನ ಅಳಿಯ ಸಾಮಾಧಾನದಿಂದ ಮುಂದೆ ನೆಡೆದ. ಹೆದರಿ ಬೆಂಡಾದ ಅಳಿಯ ಕೊನೆಗೆ ದೆವ್ವ ಗಳೇ ದಾರಿ ತೋರಿಸಿದ್ದರಿಂದ ಅಕ್ಕ, ಮಾವನಿಗೆ ಅಪ್ಪಾ ಮೊದಲು ದೆವ್ವ ಹೆದರಿಸಿದ್ರು, ಮಾಮ ಅವುಗಳಿಗೆ ಬೈಯದದ್ದೇ ತಡ ದೆವ್ವಗಳೇ ಮಾತನಾಡಿ ನಮಗೆ ದಾರಿ ತೋರಿಸಿದವು.
ಅಷ್ಟಕ್ಕೂ ಅವು ದೆವ್ವ ಅಲ್ಲ ವೇಷ ಹೊತ್ತ ಕುಳಿತ ನಮ್ಮ ಹಾಗೆ ಇರುವ ಮನುಷ್ಯರು ಅಂತ ನಗುತ್ತಾ ಮಂತ್ರಿಮಾಲ್ ನಿಂದ ಹೊರಬಂದೆವು. ಒಂದೇ ಸಾಮಾಧಾನವೆಂದರೆ ಹೆದರಿದ್ದ ನನ್ನ ಅಳಿಯ ನಗುತ್ತಾ ಹೊರಬಂದಿದ್ದು ಖುಷಿತಂದಿತ್ತು. ದೆವ್ವ ಇಲ್ಲ ಅನ್ನುವುದು ಅವನ ಬಾಯಲ್ಲಿ ಬಂದದ್ದು ಅವನಿಗಿಂತ ಹೆಚ್ಚು ಖುಷಿ ನನಗಾಗಿತ್ತು. ಆದರೂ ಈ ಭಯದ ಮನೆ ಕಲ್ಪನೆಯೆ ಸರಿ ಇಲ್ಲ. ದುಡ್ಡು ಕೊಟ್ಟು ಹೋಗಿ ಹೆದರಿ ಬರಬೇಕಾ. ಮೊದಲೇ ನಾವು ಸಿನಿಮಾನೇ ಆಗಲಿ ಹೆದರೋದು ಅಳ್ಳೋದನ್ನ ಕಂಡ್ರೆ ಆಗದಿರೋರು. ಆ ಕಾರಣಕ್ಕೆ ನಮಗೆ ನಗಿಸುವ ಸಾಧು ಮಹಾರಾಜ, ಚಿಕ್ಕಣ್ಣ, ಶರಣ್, ಜಗ್ಗೇಶ ಅಂದ್ರೆ ಇಷ್ಟ. ಹೀಗಾಗೇ ನಾವು ದುಡ್ಡು ಕೊಟ್ಟು ಹೋಗಿ ಅಳಬೇಕು ಅಂತ ಅಪ್ಪಿತಪ್ಪಿಯೂ ಶೃತಿ ಸಿನಿಮಾಗೆ ಹೋಗಲ್ಲ.
ಆದರೂ ಆ ಶೃತಿನೂ ರಾಮ ಶ್ಯಾಮ ಭಾಮ ಸಿನೆಮಾದಲ್ಲಿ ನಗಿಸಿದಳು.
ಆದರೆ ದುಡ್ಡು ಕೊಟ್ಟು ಹೆದರಿಸೋ ಇವರಿಗೆ ಮಾತ್ರ ಇನ್ನೂ ನಗಿಸಬೇಕೆನಿಸಿಲ್ಲ. ದುಡ್ಡನ್ನು ಹೇಗೆಲ್ಲಾ ಗಳಸ್ತಾರಪ್ಪಾ ದೆವ್ವ ತೋರಿಸಿ, ಹೆದರಸಿ ದುಡ್ಡು ಸಂಪಾದಿಸೊ ಇವರಿಗೆ, ಮಕ್ಕಳನ್ನು ಹೀಗೆಲ್ಲಾ ಹೆದರಿಸಬಾರ್ದು ಅಂತ ಅನಿಸೋದು ಯಾವಾಗ. ಎನೇ ಆಗಲಿ ಬೆಂಗಳೂರಿಗೆ ಹೋದಾಗ ದೆವ್ವದ ಮನೆ ಕಡೆ ಹೋದ್ರೆ ನಮ್ಮ ಗಂಗಾವತಿ ಬೀಚಿ ಪ್ರಾಣೇಶ ಹೇಳೊ ಹಾಗೆ ಸೊಂಟದ ಮೇಲೆ ಕೈ ಇಟ್ಟು ಆ… ಎನು… ಅನ್ನೋ ಕನ್ನಡ ಶಾಲೆ ಮಕ್ಕಳೇ ಸೂಕ್ತ ಅನ್ನೋದು ನನ್ನ ಅಭಿಪ್ರಾಯ. ಯಾಕಂದ್ರೆ ದೆವ್ವಗಳನ್ನು ಮಾತನಾಡಿಸೋದು ನಮ್ಮ ಕನ್ನಡ ಶಾಲೆ ಮಕ್ಕಳೇ. ಮಾತನಾಡಿಸಿದ ನಾನು ಕಲಿತದ್ದು ಕನ್ನಡ ಶಾಲೇಲಿ .
ನಾಗರಾಜನಾಯಕ ಡಿ. ಡೊಳ್ಳಿನ ಕೊಪ್ಪಳ