ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಉಗ್ರರ ಮಾದಕ ದ್ರವ್ಯ ಜಾಲವನ್ನು ಭಾನುವಾರ ರಾತ್ರೋರಾತ್ರಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಭೇದಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, 10 ಕೆಜಿ ಬ್ರೌನ್ ಶುಗರ್, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ದ್ರವ್ಯಗಳ ಕಳ್ಳಸಾಗಣೆ ಕುರಿತು ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ತಂಗ್‌ಧಾರ್‌ನ ಸಾಧನಾ ಪಾಸ್ ಬಳಿ ಸೇನೆಯ ಶ್ವಾನ ದಳದ ಸಹಾಯದಿಂದ ದಾಳಿ ನಡೆಸಲಾಯಿತು. ವಾಹನವೊಂದರಲ್ಲಿ ಅಡಗಿಸಿಡಲಾಗಿದ್ದ ಮಾದಕ ದ್ರವ್ಯಗಳ ಪ್ಯಾಕೆಟ್‌ಗಳನ್ನು ಮೊದಲಿಗೆ ವಶಕ್ಕೆ ಪಡೆಯಲಾಯಿತು. ನಂತರ ಮೂವರನ್ನು
ಬಂಧಿಸಲಾಗಿದ್ದು, ಅವರ ಬಳಿಯಿದ್ದ ಎರಡು ವಾಹನಗಳು, 1 ಎಕೆ 56 ಗನ್, 2 ಪಿಸ್ತೂಲುಗಳು, 20 ಗ್ರೆನೇಡ್‌ಗಳು, 50 ಕೋಟಿ ರೂ. ಮೌಲ್ಯದ 10
ಕೆಜಿಯಷ್ಟು ಡ್ರಗ್‌ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಲಾಯಿತು ಎಂದು ಸೇನೆಯ ಮೂಲಗಳು ತಿಳಿಸಿವೆ.