ಹಾವೇರಿ: ಹಾವೇರಿಯಲ್ಲಿ ನಡೆಯುವ 86ನೇ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿ ಧಿಗಳ ನೋಂದಣಿ, ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ಆ್ಯಪ್ ಮೂಲಕವೇ ನೋಂದಣಿ ಮಾಡಲು ನಿರ್ಧರಿಸಲಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ಆ್ಯಪ್ ಬಿಡುಗಡೆ ಮಾಡಿ ಈ ಬಗ್ಗೆ ಪ್ರಚಾರ ಕೈಗೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿದ್ದು, ಈ ಹಿಂದೆ ಗೊತ್ತು ಮಾಡಿದ್ದ ಸಮ್ಮೇಳನದ ಸ್ಥಳ ಬದಲಾವಣೆ ಮಾಡಲಾಗಿದೆ. ಹಾವೇರಿ ನಗರದ ಹೊರವಲಯದ ಅಜ್ಜಯ್ಯನ ಗದ್ದುಗೆ ಎದುರಿನ ವಿಶಾಲ ಜಾಗ ಗುರುತಿಸಲಾಗಿದ್ದು, ಈ ಜಾಗದ ಬಗ್ಗೆ ಯಾವುದೇ ತಕರಾರಿಲ್ಲ.
ಎಲ್ಲ ಜಿಲ್ಲೆಗಳಿಂದ ಕಲಾ ತಂಡ, ಸ್ತಬ್ಧಚಿತ್ರಗಳನ್ನು ಆಹ್ವಾನಿಸಲಾಗುತ್ತಿದೆ. ಸಮ್ಮೇಳನದಲ್ಲಿ ಕನ್ನಡದ 86 ಸಾಧಕರನ್ನು ಗೌರವಿಸಲಾಗುತ್ತಿದೆ ಎಂದರು.
ಡಿ. 1ರಂದು ಕನ್ನಡ ರಥಕ್ಕೆ ಭುವನಗಿರಿಯಲ್ಲಿ ಚಾಲನೆ ಸಮ್ಮೇಳನದ ಅಂಗವಾಗಿ ಕನ್ನಡ ರಥದ ಮೆರವಣಿಗೆ ನಡೆಯಲಿದ್ದು, ಜಾನಪದ ವಿಶ್ವವಿದ್ಯಾಲಯದಲ್ಲಿ ರಥದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಡಿ. 1ರಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಅಲ್ಲಿ ಬೆಳಗಿಸಿದ ಜ್ಯೋತಿಯನ್ನು ಕನ್ನಡ ರಥದಲ್ಲಿಟ್ಟು ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಮ್ಮೇಳನದ ಮರು ವಿನ್ಯಾಸ ಲಾಂಛನ ಬಿಡುಗಡೆ ಹಾವೇರಿಯಲ್ಲಿ ಜ. 6ರಿಂದ ಮೂರು ದಿನಗಳ ಕಾಲ ನಡೆಯಲಿರುವ 86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನಕ್ಕಾಗಿ ಮಾರ್ಪಾಟು ಮಾಡಿದ ಲಾಂಛನವನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಬಿಡುಗಡೆಗೊಳಿಸಿದರು.
ಸಮಗ್ರ ಕನ್ನಡ ಭಾಷಾ ವಿಧೇಯಕ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಿದ್ದು, ಅದು ಕಾನೂನಾಗಿ ಅನುಷ್ಠಾನಕ್ಕೆ ಬರಬೇಕು. ಅದಕ್ಕಾಗಿ ಎಸ್.ಎಲ್. ಭೈರಪ್ಪ ನೇತೃತ್ವದಲ್ಲಿ ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಲಾಗುತ್ತಿದೆ. ಬೆಳಗಾವಿ ಅ ಧಿವೇಶನದಲ್ಲೇ ವಿಧೇಯಕ ಅನುಷ್ಠಾನಕ್ಕೆ ತರಬೇಕು.
– ಡಾ| ಮಹೇಶ ಜೋಶಿ, ಕಸಾಪ ರಾಜ್ಯಾಧ್ಯಕ್ಷ