Advertisement

ವೆಂಟಿಲೇಟರ್‌ ರಹಿತ ಆಂಬ್ಯುಲೆನ್ಸ್‌ ಜೀವಕ್ಕೆ ಕಂಟಕ!

02:48 PM Aug 29, 2022 | Team Udayavani |

ಬೀದರ: ಗಡಿ ಜಿಲ್ಲೆ ಬೀದರನಲ್ಲಿ ತುರ್ತು ಚಿಕಿತ್ಸೆಗಾಗಿ ನೆರವಾಗುವ ಆಂಬ್ಯುಲೆನ್ಸ್‌ಗಳು ವೆಂಟಿಲೇಟರ್‌ (ಕೃತಕ ಉಸಿರಾಟ)ಗಳ ವ್ಯವಸ್ಥೆ ಇಲ್ಲದೇ ಅಪಾಯಕಾರಿ ಸ್ಥಿತಿಯಲ್ಲಿವೆ. ಹಾಗಾಗಿ ರೋಗಿಗಳು ಜೀವಕ್ಕೆ ಕವಚ ಆಗಬೇಕಾದ ಆಂಬ್ಯುಲೆನ್ಸ್‌ಗಳೇ ಒಮ್ಮೊಮ್ಮೆ ಪ್ರಾಣಕ್ಕೆ ಕಂಟಕ ಆಗುತ್ತಿರುವ ಘಟನೆಗಳು ನಡೆಯುತ್ತಿದ್ದು, ಆತಂಕ ಹೆಚ್ಚಿಸಿದೆ.

Advertisement

ಇದು ಆಶ್ಚರ್ಯ ಎನಿಸಿದರೂ ಸತ್ಯ. ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಆಂಬ್ಯುಲೆನ್ಸ್‌ಗಳಲ್ಲಿ ಸಾಕಷ್ಟು ದೋಷಗಳು ಮಾತ್ರವಲ್ಲ ಕೃತಕ ಉಸಿರಾಟದ ವ್ಯವಸ್ಥೆ ಸಹ ಇಲ್ಲ. ಹಾಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲು ಆಗುವವರೆಗೆ ಆಂಬ್ಯುಲೆನ್ಸ್‌ನಲ್ಲಿ ತಮ್ಮ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ.

ಆಂಬ್ಯುಲೆನ್ಸ್‌ಗಳ ನಿರ್ವಹಣೆಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಆಂಬ್ಯುಲೆನ್ಸ್‌ಗಳ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಈಗಲೂ ಓಬಿರಾಯನ ಕಾಲದ ವಾಹನಗಳ ಮೇಲೆ ಅವಲಂಬಿಸಿ ರೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ 2008ರಲ್ಲಿ “ಆರೋಗ್ಯ ಕವಚ- 108′ ಯೋಜನೆ ಆರಂಭಿಸಿದೆ. ಅದರಂತೆ ಒಡಂಬಡಿಕೆ ಮಾಡಿಕೊಂಡಿರುವ ಜಿವಿಕೆ ಸಂಸ್ಥೆ ಜಿಲ್ಲೆಯಲ್ಲಿ 19 ಆರೋಗ್ಯ ಕವಚನ- 108 ವಾಹನಗಳನ್ನು ಓಡಿಸುತ್ತಿದೆ. ಇನ್ನೂ ಆರೋಗ್ಯ ಇಲಾಖೆಯಿಂದ ಜಿಲ್ಲೆಯ ವಿವಿಧ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು ಒಟ್ಟು 50 ಆಂಬ್ಯುಲೆನ್ಸ್‌ಗಳು ಸೇವೆ ಸಲ್ಲಿಸುತ್ತಿವೆ. ಇವುಗಳಲ್ಲಿ ಕೆಲವು ವಾಹನಗಳು ಕೆಟ್ಟು ನಿಂತಿದ್ದು, ದುರಸ್ತಿಗಾಗಿ ಕಾದು ಕುಳಿತಿವೆ.

ಬ್ರಿಮ್ಸ್‌ ಆಸ್ಪತ್ರೆಯ ಆಂಬ್ಯುಲೆನ್ಸ್‌ಗಳು ಹೊರತುಪಡಿಸಿ ಜಿಲ್ಲೆಯಲ್ಲಿರುವ ಒಟ್ಟು 69 ತುರ್ತು ವಾಹನಗಳ ಪೈಕಿ ಕೇವಲ 10 ವಾಹನಗಳು ವೆಂಟಿಲೇಟರ್‌ (ಎಎಲ್‌ಎಸ್‌) ವ್ಯವಸ್ಥೆಗಳನ್ನು ಹೊಂದಿವೆ. ಆರೋಗ್ಯ ಇಲಾಖೆಯ 50 ವಾಹನಗಳ ಪೈಕಿ ಹುಮನಾಬಾದ್‌, ಬೀದರ, ಭಾಲ್ಕಿ ಮತ್ತು ಮನ್ನಾಎಖ್ಳೆಳ್ಳಿಯ ತಲಾ ಒಂದು ವಾಹನ ಎಎಲ್‌ಎಸ್‌ ಸೌಲಭ್ಯ ಹೊಂದಿವೆ. ಔರಾದ ತಾಲೂಕಿನಲ್ಲಿ ಒಂದೂ ವೆಂಟಿಲೇಟರ್‌ ಸಹಿತ ಆಂಬ್ಯುಲೆನ್ಸ್‌ಗಳು ಇರದಿರುವುದು ವಿಪರ್ಯಾಸ.

Advertisement

ಇನ್ನೂ ಆರೋಗ್ಯ ಕವಚದ 19 ವಾಹನಗಳ ಪೈಕಿ ಕೇವಲ 6 ವೆಂಟಿಲೇಟರ್‌ ಅಳವಡಿಸಲಾಗಿದ್ದರೂ ಕೆಲವೊಂದು ಬಳಕೆ ಸ್ಥಿತಿಯಲ್ಲಿ ಇಲ್ಲ. ಜತೆಗೆ ಸೂಕ್ತ ವ್ಯವಸ್ಥೆ ಮತ್ತು ತಜ್ಞರ ಕೊರತೆ ಇದೆ ಎಂಬ ಆರೋಪ ಹೆಚ್ಚಿವೆ. ರಾಷ್ಟ್ರೀಯ ಹೆದ್ದಾರಿ-9ಕ್ಕೆ ಹೊಂದಿಕೊಂಡಿರುವುದರಿಂದ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ರೋಗಿಗಳನ್ನು ಚಿಕಿತ್ಸೆಗಾಗಿ ಆಸ್ಪತೆಗೆ ಸಾಗಿಸುವಾಗ ಉಸಿರಾಟದ ತೊಂದರೆ ಸಹಜ. ಪ್ರಥಮ ಚಿಕಿತ್ಸೆ ವೇಳೆ ಆಂಬ್ಯುಲೆನ್ಸ್‌ಗಳಲ್ಲಿ ವೆಂಟಿಲೇಟರ್‌ ಅಗತ್ಯವಾಗಿದೆ. ಅಷ್ಟೇ ಅಲ್ಲ, ಹಾವು ಕಡಿತಕ್ಕೆ ಒಳಗಾದವರು ಮತ್ತು ಹೆರಿಗೆಗಾಗಿ ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲು ಮಾಡುವಾಗ ಕೃತಕ ಉಸಿರಾಟ ಬೇಕು. ಆದರೆ, ಬಹುತೇಕ ವಾಹನಗಳಲ್ಲಿ ಈ ವ್ಯವಸ್ಥೆ ಕೊರತೆಯಿಂದ ರೋಗಿಗಳು ಮಾರ್ಗ ಮಧ್ಯೆಯೇ ಜೀವ ಕಳೆದುಕೊಳ್ಳುವಂತಾಗಿದೆ.

ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಕೆ ಬೀದರ ಜಿಲ್ಲೆಯಲ್ಲಿ 108 ಆರೋಗ್ಯ ಕವಚ 19 ಸೇರಿ ಒಟ್ಟು 69 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 10 ವಾಹನಗಳಲ್ಲಿ ವೆಂಟಿಲೇಟರ್‌ ವ್ಯವಸ್ಥೆ ಅಳವಡಿಸಲಾಗಿದೆ. ಬ್ರಿಮ್ಸ್‌ ಆಸ್ಪತ್ರೆ ತುರ್ತು ವಾಹನಗಳಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಇದೆ. ಔರಾದನಲ್ಲಿ ಕೃತಕ ಉಸಿರಾಟ ಸಹಿತ ಒಂದು ಆಂಬ್ಯುಲೆನ್ಸ್‌ಗಳು ಇಲ್ಲ. ಅತ್ಯಾಧುನಿಕ ಸೌಲಭ್ಯಗಳುಳ್ಳ ಆಂಬ್ಯುಲೆನ್ಸ್‌ಗಳನ್ನು ಖರೀದಿಸಲು ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಾ| ರತಿಕಾಂತ ಸ್ವಾಮಿ, ಡಿಎಚ್ ಬೀದರ

-ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next