Advertisement

ಪರ್ಯಾಯ ಮಾರ್ಗದಲ್ಲಿದೆ ಆರ್ಥಿಕ ಹಿತರಕ್ಷಣೆ

12:30 AM Jul 19, 2018 | |

ಸಾಲದ ಮೊತ್ತ ರೈತರ ಖಾತೆಗೆ ಜಮಾ ಆಗಿ ಪೂರ್ತಿ ಸಾಲ ತೀರದ ಹೊರತು ಬ್ಯಾಂಕ್‌ಗಳು ಋಣಮುಕ್ತ ಪತ್ರ (ಎನ್‌ಡಿಸಿ) ನೀಡಲು ಸಾಧ್ಯವಿಲ್ಲ. ಅಷ್ಟಕ್ಕೂ ಕೇವಲ ಸಾಲ ಮನ್ನಾದಿಂದ ರೈತರ ಬಾಳು ಹಸನಾಗುತ್ತದೆ ಎಂದು ಕಲ್ಪಿಸಿಕೊಳ್ಳುವುದು ಸರಿಯಲ್ಲ. ಸಾಲ ಮನ್ನಾ ನಂತರ ರೈತರು ಮತ್ತೂಂದು ಸಾಲ ಪಡೆದು ಪುನಃ ಸಾಲದ ಶೂಲಕ್ಕೆ ಸಿಲುಕಿ ಕೊನೆಯವರೆಗೂ ನರಳುವುದು ತಪ್ಪುವುದಿಲ್ಲ.

Advertisement

ವಿಧಾನಸಭಾ ಚುನಾವಣೆಗೂ ಮುನ್ನ ಕುಮಾರಸ್ವಾಮಿಯವರು, ತಾವು ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಎಲ್ಲಾ ಮೊತ್ತವನ್ನೂ ಮನ್ನಾ ಮಾಡುವುದು ಅಷ್ಟೇನೂ ಸುಲಭವಲ್ಲ ಎಂಬುದರ ಬಗ್ಗೆ ಆ ಸಂದರ್ಭದಲ್ಲಿ ಅವರು ವಿಚಾರ ಮಾಡಿರಲಿಕ್ಕಿಲ್ಲ. ತಾವು ಮಂಡಿಸಿರುವ ಪ್ರಥಮ ಬಜೆಟ್‌ನಲ್ಲಿ 2017ನೇ ಡಿಸೆಂಬರ್‌ವರೆಗಿನ ಸುಸ್ತಿ ಸಾಲದ ರೂ. 2 ಲಕ್ಷ, 1 ಲಕ್ಷ ರೂಪಾಯಿವರೆಗಿನ ಚಾಲ್ತಿ ಸಾಲ ಮನ್ನಾವಲ್ಲದೇ ಸಮಯಕ್ಕೆ ಸರಿಯಾಗಿ ಮರುಪಾವತಿಸಿದವರಿಗೆ ರೂ. 25,000ಗಳಷ್ಟು ಪ್ರೋತ್ಸಾಹ ಧನವನ್ನು ಕೂಡ ಘೋಷಣೆ ಮಾಡಿದ್ದಾರೆ. ಚಾಲ್ತಿ ಸಾಲಕ್ಕೆ ದಿನಾಂಕ 10.07.2018ರವರೆಗಿನ ಸಾಲ ಎಂದು ಸ್ಪಷ್ಟಪಡಿಸಿದ್ದಾರೆ. 

ಇದರ ಪ್ರಕಾರ ಸಾಲ ಮನ್ನಾಕ್ಕೆ ಅರ್ಹವಾಗುವ ಸಾಲದ ಮೊತ್ತ ಒಟ್ಟಾರೆಯಾಗಿ 44,700 ಕೋಟಿ ರೂ. ಗಳಷ್ಟಾಗುತ್ತದೆ. ಇದಲ್ಲದೇ ಇನ್ನುಳಿದ ಸಾಲ ಮೊತ್ತವನ್ನು ಹಂತಹಂತವಾಗಿ ಕಂತುಗಳಲ್ಲಿ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕಂತುಗಳಲ್ಲಿ ಸಾಲ ಮನ್ನಾ ಮಾಡುವ ವಿಧಾನ (Modus Operandi) ಹೇಗೆ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಿಲ್ಲ. ಮುಖ್ಯಮಂತ್ರಿಗಳು ಪ್ರಸ್ತುತಪಡಿಸಿರುವ ಸಾಲ ಮನ್ನಾ ಸೂತ್ರ ಅತಾರ್ಕಿಕ, ಅವೈಜಾnನಿಕ ಮತ್ತು ಗೊಂದಲಮಯವಾಗಿದೆ. ಸಾಲ ಮನ್ನಾ ತೀರ್ಮಾನ ಕೈಗೊಳ್ಳುವ ಮುನ್ನ ಮುಖ್ಯಮಂತ್ರಿಗಳು ಆರ್ಥಿಕ ಮತ್ತು ಕೃಷಿ ತಜ್ಞರೊಂದಿಗೆ ಚರ್ಚಿಸಬೇಕಿತ್ತು. 

ಎಲ್ಲದಕ್ಕೂ ಮುಖ್ಯವಾಗಿ ಆರ್‌.ಬಿ.ಐ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವೇ ತೀರ್ಮಾನಕ್ಕೆ ಬರಬೇಕಿತ್ತು. ಆರ್‌.ಬಿ.ಐ ಅಂಕಿ ಅಂಶಗಳ ಪ್ರಕಾರ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ (ಎನ್‌ಪಿಎ) ಮೊತ್ತ 2018ರಲ್ಲಿ 10 ಲಕ್ಷ  ಕೋಟಿ ರೂಪಾಯಿಯಷ್ಟಿದೆ. ಇದು ಒಟ್ಟು ಸಾಲದ ಶೇ. 21 ರಷ್ಟಾಗುತ್ತದೆ. ಇದರಲ್ಲಿ ಕೃಷಿ ಸಾಲ ಶೇ. 6.5 ರಷ್ಟಿದೆ. ಇದು ಪ್ರತಿ ವರ್ಷ ಬೆಳೆಯುತ್ತಲೇ ಇದೆ. ಇದೇ ಕಾರಣಕ್ಕೆ ಆರ್‌.ಬಿ.ಐ ಕೃಷಿ ಸಾಲ ಮನ್ನಾಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಮುಖ್ಯಮಂತ್ರಿಗಳು ಬ್ಯಾಂಕ್‌ಗಳು ಋಣಮುಕ್ತ ಪತ್ರ ನೀಡಿದ ನಂತರ ರೈತರು ಹೊಸ ಸಾಲ ಪಡೆಯಲು ಅರ್ಹರಾಗುತ್ತಾರೆಂದು ತಿಳಿಸಿದ್ದಾರೆ. ಆದರೆ ಬ್ಯಾಂಕ್‌ಗಳು ಸಾಲದ ಮೊತ್ತ ರೈತರ ಖಾತೆಗೆ ಜಮಾ ಆಗಿ ಪೂರ್ತಿ ಸಾಲ ತೀರದ ಹೊರತು ಋಣಮುಕ್ತ ಪತ್ರ (ಎನ್‌.ಡಿ.ಸಿ) ನೀಡಲು ಸಾಧ್ಯವಿಲ್ಲ. ಅಷ್ಟಕ್ಕೂ ಕೇವಲ ಸಾಲ ಮನ್ನಾದಿಂದ ರೈತರ ಬಾಳು ಹಸನಾಗುತ್ತದೆ ಎಂದು ಕಲ್ಪಿಸಿಕೊಳ್ಳುವುದು ಸರಿಯಲ್ಲ. ಸಾಲ ಮನ್ನಾ ನಂತರ ರೈತರು ಮತ್ತೂಂದು ಸಾಲ ಪಡೆದು ಪುನಃ ಸಾಲದ ಶೂಲಕ್ಕೆ ಸಿಲುಕಿ ಕೊನೆಯವರೆಗೂ ನರಳುವುದು ತಪ್ಪುವುದಿಲ್ಲ. 

ಸಾಲ ಮನ್ನಾ ನೀತಿ ದೋಷಪೂರಿತವಾಗಿದೆ. ಒಬ್ಬ ರೈತನ ಸಾಲ ಮನ್ನಾ ಆದರೆ ಆತನ ಪಕ್ಕದ ಹೊಲದ ರೈತನ ಸಾಲ ಮನ್ನಾ ಆಗುವುದಿಲ್ಲ ಅಥವಾ ಭಾಗಶಃ ಮನ್ನಾ ಆಗುತ್ತದೆ ಇದು ರೈತರಲ್ಲಿ ಬೇಗುದಿಗೆ ಕಾರಣವಾಗುತ್ತದೆ. ದೊಡ್ಡ ಮೊತ್ತದ ಸಾಲ ಮನ್ನಾವನ್ನು ಸರಿದೂಗಿಸಲು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಹೆಚ್ಚಿನ ಸೆಸ್‌ ವಿಧಿಸಿದ್ದಾರೆ, ಅಬಕಾರಿ ಸುಂಕ ಶೇ. 4ರಷ್ಟು ಹೆಚ್ಚಿಸಿದ್ದಾರೆ, ಅನ್ನಭಾಗ್ಯದಡಿ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು 7 ಕೆ.ಜಿ.ಯಿಂದ 5 ಕೆ.ಜಿ. ಗೆ ಇಳಿಸಿದ್ದಾರೆ. ಅಲ್ಲದೇ ಇಂಧನದ ದರವನ್ನು ಕೂಡ ಹೆಚ್ಚಿಸಲಾಗಿದೆ. ಇಷ್ಟಾದರೂ ಬಂಡಿ ಅನ್ನಕ್ಕೆ ಗಿಂಡಿ ನೀರು ಎಂಬಂತೆ ಸಾಲ ಮನ್ನಾ ಮೊತ್ತವನ್ನು ಸರಿದೂಗಿಸಲಾಗುವುದಿಲ್ಲ. ಇಷ್ಟೆಲ್ಲಾ ಕಸರತ್ತು ಮಾಡುವುದರ ಬದಲಾಗಿ ಕೆಲವು ಸುಲಭಸಾಧ್ಯವಾಗುವ ಕ್ರಮಗಳನ್ನು ಅನುಸರಿಸಬೇಕು. ಪೂರ್ಣ ಸಾಲ ಮನ್ನಾದ ಬದಲಾಗಿ ಬಡ್ಡಿ ಮಾತ್ರ ಮನ್ನಾ ಮಾಡಿ ಸಾಲದ ಮೊತ್ತವನ್ನು ದೀರ್ಘಾವಧಿ ಸಾಲವನ್ನಾಗಿ ಮಾರ್ಪಡಿಸಿ ಸುಲಭ ಕಂತುಗಳಲ್ಲಿ ಮರುಪಾವತಿ ಮಾಡಲು ರೈತರಿಗೆ ಅನುಕೂಲ ಕಲ್ಪಿಸಬೇಕು. ಟ್ರ್ಯಾಕ್ಟರ್‌, ಪೈಪ್‌ ಲೈನ್‌ಗಳಂತಹ ದೀರ್ಘಾವಧಿ ಸಾಲಗಳನ್ನು ರೀಫೇಜ್‌ (ಇನ್ನಷ್ಟು ದೀರ್ಘ‌ ಅವಧಿ ನೀಡಿ) ಮಾಡಬೇಕು. ಕೃಷಿ ಮತ್ತು ನಬಾರ್ಡ್‌ ಇಲಾಖೆಯ ಅಧಿಕಾರಿಗಳು ಕಛೇರಿಗಳಲ್ಲಿ ಕುಳಿತುಕೊಂಡು ಅಂಕಿ ಅಂಶಗಳನ್ನು ಪಟ್ಟಿ ಮಾಡುವುದರಲ್ಲಿಯೇ ಕಾಲ ಕಳೆಯದೇ ರೈತರ ಹೊಲ ಗದ್ದೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು. 

Advertisement

ರೈತರು ಪ್ರತಿ ವರ್ಷ ಒಂದೇ ಬೆಳೆಗೆ ಅಂಟಿಕೊಳ್ಳದೇ ಕನಿಷ್ಠ 3 ವರ್ಷಗಳಿಗೆ ಒಂದು ಬಾರಿಯಾದರೂ ಬೆಳೆಯ ಪ್ರಕಾರವನ್ನು ಬದಲಿಸಬೇಕು. ಕೃಷಿಗೆ ಸಂಬಂಧಪಟ್ಟ ತೋಟಗಾರಿಕೆ, ಹೈನುಗಾರಿಕೆ ಮತ್ತಿತರ ವಿಷಯಗಳ ಬಗ್ಗೆ ತಿಳಿದುಕೊಂಡು ಮುಂದು ವರೆಯಬೇಕು. ಸರ್ಕಾರ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡಬೇಕು. ಕೃಷಿಗೆ ಪೂರಕವಾಗಬಲ್ಲ ಉದ್ಯಮಗಳಿಗೆ (ನೇಕಾರಿಕೆ, ಕಮ್ಮಾರಿಕೆ, ಮರಗೆಲಸಗಳಂತಹ ವೃತ್ತಿಗಳು) ಪ್ರೋತ್ಸಾಹ ನೀಡಬೇಕು.  ಬ್ಯಾಂಕ್‌ಗಳಲ್ಲಿ ರೈತರಿಗೆ ಅರ್ಹತೆಗಿಂತಲೂ ಹೆಚ್ಚು ಸಾಲ ನೀಡುವುದು ಕೂಡ ರೈತರ ಸಾಲ ಬಾಕಿ ಉಳಿಯಲು ಕಾರಣವಾಗುತ್ತದೆ. ಪ್ರತಿ ವರ್ಷ ಆಯಾ ಜಿಲ್ಲೆಗಳಿಗೆ ಸಂಬಂಧಪಟ್ಟ ಲೀಡ್‌ ಬ್ಯಾಂಕ್‌ ಪ್ರತಿ ಬೆಳೆಗೆ ಪ್ರತಿ ಎಕರೆಗೆ ನಿಗದಿಪಡಿಸುವ ಮೊತ್ತ (ಸ್ಕೇಲ್‌ ಆಫ್ ಫೈನಾನ್ಸ್‌ ಮತ್ತು ಯೂನಿಟ್‌ ಕಾಸ್ಟ್‌) ಮೊತ್ತವನ್ನೇ ವಿತರಿಸಬೇಕು. ಬ್ಯಾಂಕ್‌ ಅಧಿಕಾರಿಗಳು ತಮಗೆ ಪ್ರಧಾನ ಕಚೇರಿಯಿಂದ ನಿಗದಿಪಡಿಸಿದ ಟಾರ್ಗೆಟ್‌ ಸಾಧಿಸಲು ಮುಗ್ಧ ರೈತರ ಅಸಹಾಯಕತೆಯನ್ನು ಬಳಸುವುದನ್ನು ನಿಲ್ಲಿಸಬೇಕು. ಯಾವ ಬೆಳೆಯೇ ಸಾಗುವಳಿ ಮಾಡಿದರೂ ಯಾವ ಬೆಳೆಗೆ ಹೆಚ್ಚು ಸ್ಕೇಲ್‌ ಆಫ್ ಫೈನಾನ್ಸ್‌ ಬರುತ್ತಿದೆಯೋ ಆ ಬೆಳೆಯನ್ನು ದಾಖಲಿಸಿ ಮಂಜೂರು ಮಾಡಿ ಭಾಗಶಃ ರೈತರಿಗೆ ಪಾವತಿ ಮಾಡಿ ಉಳಿದ ಮೊತ್ತವನ್ನು ಡಿಪಾಜಿಟ್‌ ರೂಪದಲ್ಲಿರಿಸುತ್ತಾರೆ. ಇದರಿಂದ ಅವರ ಬಜೆಟ್‌ ಸಾಧಿಸಿದಂತಾಗುತ್ತದೆ. ಆದರೆ ರೈತರ ಸಾಲ ಸುಸ್ತಿಯಾಗಲು ಇದು ಕೂಡ ಒಂದು ಕಾರಣವಾಗುತ್ತದೆ. ಸರ್ಕಾರ ಆರ್ಥಿಕ ತಜ್ಞರು ಮತ್ತು ಕೃಷಿ ತಜ್ಞರೊಂದಿಗೆ ಚರ್ಚಿಸಿ ಕೃಷಿ ನೀತಿ ಜಾರಿಗೆ ತರಬೇಕು. ಉತ್ತಮ ಮಟ್ಟದ ಬೀಜ, ಗೊಬ್ಬರವಲ್ಲದೇ ಕೃಷಿ ಪರಿಕರಗಳನ್ನು ನೀಡುವ ವ್ಯವಸ್ಥೆ ಮಾಡಬೇಕು. ಎಲ್ಲದಕ್ಕೂ ಮುಖ್ಯವಾಗಿ ಎಲ್ಲ ಬೆಳೆಗಳಿಗೂ ಸೂಕ್ತ ಮಾರುಕಟ್ಟೆ ಮತ್ತು ಯೋಗ್ಯ ಬೆಲೆ ಅಥವಾ ಬೆಂಬಲ ಬೆಲೆ ದೊರೆಯುವಂತಾಗಬೇಕು. 

ಸರ್ಕಾರ ಕೇವಲ ರಾಜಕಾರಣಕ್ಕೋಸ್ಕರ ಸಾಲ ಮನ್ನಾದ ಮಾರ್ಗವನ್ನು ಹಿಡಿಯದೇ ರೈತರಿಗೆ ಅನುಕೂಲವಾಗಬಲ್ಲ ಬದಲಿ ಮಾರ್ಗಗಳ ಬಗ್ಗೆ ಚಿಂತಿಸಬೇಕು. ಈ ಸಲಹೆಯನ್ನು ಬ್ಯಾಂಕ್‌ಗಳು ಕೂಡ ಒಪ್ಪುವ ಸಾಧ್ಯತೆಯಿದೆ. ರೈತರು ಕೂಡ ಶಾಶ್ವತವಾಗಿ ಸಾಲದ ಕೂಪದಿಂದ ಹೊರಬರುತ್ತಾರೆ. ಸರ್ಕಾರ ಸಾಲ ಮನ್ನಾದ ಬದಲಾಗಿ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಲಿ.

ಪಂಪಾಪತಿ ಹಿರೇಮಠ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next