ರಾಯಚೂರು: ಬಯನ್ ಬೆಂಗಾಲದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಜೋರು ಮಳೆ ಸುರಿಯುತ್ತಿದೆ. 15ರವರೆಗೆ ನಿರೀಕ್ಷಿಸಿದ್ದ ಮಳೆ ಇನ್ನೂ ಮೂರ್‍ನಾಲ್ಕು ದಿನ ಸುರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರಿದ್ರಾ ಮಳೆಯಿಂದ ಕೃಷಿ ಚಟುವಟಿಕೆಗಳು ಆಗಲೇ ಚುರುಕು ಪಡೆದಿದ್ದವು. ಆದರೆ, ಈ ತೂಫಾನ್ ನಿಂದ ನೀರಿಲ್ಲದೇ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಮಳೆ ಅಗತ್ಯಕ್ಕಿಂತ ಹೆಚ್ಚಾದರೂ ಬೆಳೆ ಕೊಳೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಸೋಮವಾರ ಸಂಜೆಯಿಂದಲೇ ಜಿಲ್ಲೆಯಲ್ಲಿ ಮಳೆ ಶುರುವಾಗಿದೆ. ಮಂಗಳವಾರ, ಬುಧವಾರ ಜೋರಾಗಿದೆ. ಮಂಗಳವಾರ ಒಂದೇ ದಿನ 12 ಮಿ.ಮೀ ಮಳೆ ಸುರಿದಿದೆ. ಬುಧವಾರ ಕೂಡ ಉತ್ತಮ ಮಳೆ ಸುರಿದಿದೆ. ಆದರೆ, ಇಡೀ ಜಿಲ್ಲಾದ್ಯಂತ ಏಕ ರೂಪದಲ್ಲಿ ಮಳೆಯಾಗಿಲ್ಲ. ಕೆಲವೆಡೆ ಸಣ್ಣ ಪ್ರಮಾಣದಲ್ಲಿದ್ದರೆ ಕೆಲವೆಡೆ ಜೋರಾಗಿದೆ.
ಮೂರ್‍ನಾಲ್ಕು ದಿನ ಮಳೆ: ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಗುರುವಾರದ ಬಳಿಕ ಮಳೆ ಪ್ರಮಾಣ ತಗ್ಗಬೇಕಿತ್ತು. ಆದರೆ, ಈಗಿನ ಮಾಹಿತಿ ಇನ್ನೂ ಮೂರ್‍ನಾಲ್ಕು ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಬಹುತೇಕ ಮುಂಗಾರು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಮಳೆಗಾಗಿ ಕಾದಿದ್ದ ರೈತರಿಗೆ ಇದು ವರವಾಗಿ ಪರಿಣಮಿಸಿದೆ. ಹತ್ತಿ, ತೊಗರಿ ಬಿತ್ತನೆ ಹೆಚ್ಚಾಗಿದೆ. ಈ ಕಾರಣಕ್ಕೆ ರೈತರು ಮಳೆಯಲ್ಲೇ ಹೊಲದ ಚಟುವಟಿಕೆ ಮುಂದುವರಿಸಿದ್ದು, ಬದು ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದು, ಕಳೆ ಕೀಳುವ ಕಾಯಕದಲ್ಲಿ ತೊಡಗಿದ್ದಾರೆ.
ಜನಜೀವನ ಅಸ್ತವ್ಯಸ್ತ: ಈಗ ತಾನೆ ಲಾಕ್ ಡೌನ್ ತೆರವುಗೊಂಡಿದ್ದು ಎಲ್ಲೆಡೆ ಮಾರುಕಟ್ಟೆ ವ್ಯಾಪಾರ-ವಹಿವಾಟಿಗೆ ಮುಕ್ತವಾಗಿತ್ತು. ಆದರೆ, ಜಿಟಿ ಜಿಟಿ ಮಳೆ ಸುರಿಯುತ್ತಿರುವುದು ವ್ಯಾಪಾರ-ವಹಿವಾಟು ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಜನ ಎಂದಿನಂತೆ ಹೊರಗೆ ಓಡಾಡುವುದು ಕಡಿಮೆಯಾಗಿದೆ. ಇದರಿಂದ ವ್ಯಾಪಾರ-ವಹಿವಾಟು ಕೂಡ ಮಂಕಾಗಿದೆ ಎನ್ನುತ್ತಾರೆ ವರ್ತಕರು. ಇನ್ನೂ ಮೂರ್‍ನಾಲ್ಕು ಮಳೆ ಮುಂದುವರಿದರೆ ನಮಗೆ ಲಾಕ್‌ಡೌನ್‌ನಲ್ಲೇ ಇದ್ದ ಸ್ಥಿತಿ ಅನುಭವಕ್ಕೆ ಬರುತ್ತಿದೆ ಎನ್ನುತ್ತಿದ್ದಾರೆ.
ಮಲೆನಾಡಿನ ವಾತಾವರಣ ನಿರ್ಮಾಣಗೊಂಡಿದೆ. ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಈ ಮಳೆ ಮುಂದಿನ ಮೂರ್‍ನಾಲ್ಕು ದಿನಗಳವರೆಗೆ ಬರುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯಲ್ಲೂ ಸರಾಸರಿ 12 ಮಿ.ಮೀ ಮಳೆಯಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಡಾ| ಶಾಂತಪ್ಪ, ಹವಾಮಾನ ತಜ್ಞ
ರಾಯಚೂರು ವಿವಿ