Advertisement
1976ರಿಂದ 1996ರವರೆಗೆ ಸುಮಾರು 20ವರ್ಷಗಳ ಸಿನಿ ಪ್ರಯಾಣದಲ್ಲಿ ಮಾಧವಿ 300 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಕನ್ನಡ ಸಿನಿ ಪ್ರೇಕ್ಷಕರಿಗೆ ಮಾಧವಿ ಚಿರಪರಿಚಿತ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗೆ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಮಾಧವಿ ದಿಢೀರನೆ ಮದುವೆ ನಿರ್ಧಾರಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮೇಲೆ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದವರು ಇಂದಿಗೂ ನಟನೆಯಿಂದ ದೂರ ಉಳಿದುಬಿಟ್ಟಿದ್ದಾರೆ. ಸುಮಾರು 21 ವರ್ಷಗಳಿಂದ ಬೆಳ್ಳಿಪರದೆಯಿಂದ ದೂರವಾಗಿರುವ ಚೆಂದುಳ್ಳಿ ನಟಿ ಮಾಧವಿ ಈಗೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಿನಿಮಾಸಕ್ತರಲ್ಲಿ ಸಹಜವಾಗಿಯೇ ಮೂಡುವ ಪ್ರಶ್ನೆಯಾಗಿದೆ.
Related Articles
Advertisement
ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಜತೆ ಹಲವು ಸಿನಿಮಾಗಳಲ್ಲಿ ಮಾಧವಿ ನಟಿಸಿದ್ದರು. ಚಿರಂಜೀವಿ ಜತೆಗಿನ ಮೊದಲ ಸಿನಿಮಾ 1982ರ ಇಂಟ್ಲೋ ರಾಮಯ್ಯ ವೀಧಿಲೂ ಕೃಷ್ಣಯ್ಯ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದು. ತದನಂತರ ಕೈದಿ ಚಿತ್ರದಲ್ಲಿ ನಟಿಸಿದ್ದು ಇದು ಸೂಪರ್ ಹಿಟ್ ಆಗಿತ್ತು. 1978ರಲ್ಲಿ ಕೆ.ಚಾಲಚಂದಿರ ಅವರ ಮರೋ ಚರಿತ ಚಿತ್ರದಲ್ಲಿ ಮಾಧವಿಗೆ ಪೋಷಕ ಪಾತ್ರ ನೀಡಿದ್ದರು. ಈ ಸಿನಿಮಾ 1981ರಲ್ಲಿ ಬಾಲಿವುಡ್ ನಲ್ಲಿ ಏಕ್ ದುಜೆ ಕೇ ಲಿಯೇ ಹೆಸರಿನಲ್ಲಿ ರಿಮೇಕ್ ಆಗಿತ್ತು. 1981ರಲ್ಲಿ ತೆರೆಕಂಡಿದ್ದ ಕೆ.ಬಾಲಚಂದಿರ್ ಅವರ ತಿಲ್ಲು ಮುಲ್ಲು ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿ ಜತೆ ಮಾಧವಿ ನಟಿಸಿದ್ದರು. 1990ರಲ್ಲಿ ಬಾಲಿವುಡ್ ನ ಅಗ್ನಿಪಥ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಜತೆ ಅಭಿನಯಿಸಿದ್ದರು.
ಡಾ.ರಾಜ್ ಜತೆ ಹಲವು ಸಿನಿಮಾಗಳಲ್ಲಿ ನಟನೆ:
ತಮಿಳು, ತೆಲುಗಿನಲ್ಲಿ ಹೆಸರು ಮಾಡಿದ್ದ ಮಾಧವಿ ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅದರಲ್ಲಿಯೂ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಜತೆ ಮಾಧವಿ ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಹಾಲು ಜೇನು ಮತ್ತು ಮಲಯ ಮಾರುತ ಸಿನಿಮಾ ಮಾಧವಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಅಲ್ಲದೇ ಡಾ.ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್ ಜತೆಯೂ ಮಾಧವಿ ನಟಿಸಿದ್ದರು.
ಮಲಯಾಳಂನಲ್ಲಿಯೂ ಖ್ಯಾತ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್ ಜತೆ ನಟಿಸಿದ್ದ ಹೆಗ್ಗಳಿಕೆ ಮಾಧವಿ ಅವರದ್ದಾಗಿದೆ.ತಮ್ಮ ಅದ್ಭುತ ನಟನೆಗಾಗಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಯನ್ನು ಮಾಧವಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸ್ವಾಮಿ ರಾಮ ಅನುಯಾಯಿ ಜತೆ ವಿವಾಹ:
ಬರೋಬ್ಬರಿ ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ತಮ್ಮ ಕುಟುಂಬ ಸದಸ್ಯರೊಡನೆ ಚರ್ಚಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಅದರಂತೆ ತಮ್ಮ ಧಾರ್ಮಿಕ ಗುರು ಸ್ವಾಮಿ ರಾಮ ಅವರ ನಿರ್ದೇಶನದಂತೆ ಅವರ ಅನುಯಾಯಿ, ಔಷಧೀಯ ವಸ್ತುಗಳ ಮಾರಾಟ ಉದ್ಯಮಿ ರಾಲ್ಫಾ ಶರ್ಮಾ ಅವರ ಜತೆ 1996ರ ಫೆಬ್ರುವರಿ 14ರಂದು ಹಸೆಮಣೆ ಏರಿದ್ದರು.
ಮದುವೆ ನಂತರ ನ್ಯೂಜೆರ್ಸಿಗೆ:
ರಾಲ್ಫಾ ಶರ್ಮಾ ಜತೆ ವಿವಾಹವಾದ ನಂತರ ಮಾಧವಿ ಪತಿ ಜತೆ ನ್ಯೂಜೆರ್ಸಿಗೆ ತೆರಳಿದ್ದರು. ಅಲ್ಲಿಯೇ ವಾಸವಾಗಿದ್ದ ದಂಪತಿಗೆ ಟಿಫಾನಿ (13), ಪ್ರಿಸಿಲ್ಲಾ (9) ಹಾಗೂ ಎವೆಲಿನ್ (6) ಸೇರಿ ಮೂವರು ಮಕ್ಕಳು. ಮಾಧವಿ ಈಗ ಆಧ್ಯಾತ್ಮಿಕದತ್ತ ಒಲವು ಹೊಂದಿದ್ದು, ಆಂಧ್ರಪ್ರದೇಶದ ಅದೋನಿಯಲ್ಲಿ ಗುರು ಸ್ವಾಮಿ ರಾಮ ಅವರ ಸ್ಮರಣಾರ್ಥ ವೃದ್ಧಾಶ್ರಮ ಕಟ್ಟುವ ಯೋಚನೆಯಲ್ಲಿದ್ದಾರೆ. ನೀವು ಮತ್ತೆ ಸಿನಿಮಾದಲ್ಲಿ ನಟಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ತಾನು ಮತ್ತೆ ಚಿತ್ರರಂಗಕ್ಕೆ ಮರಳುವುದಿಲ್ಲ ಎಂದು ಮಾಧವಿ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.