ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ವಿರುದ್ಧದ ಪ್ರಕರಣವನ್ನು ತನಿಖೆಯನ್ನು “ರಾಷ್ಟ್ರೀಯ ತನಿಖಾ ತಂಡ’ (ಎನ್‌ಐಎ)ಗೆ ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ಮಂಡ್ಯ ಮೂಲದ ವಕೀಲರ ವಿಶಾಲ್ ರಘು ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ನಗರ ಪೊಲೀಸ್ ಆಯುಕ್ತ, ಚಿಕ್ಕಪೇಟೆ ಎಸಿಪಿ, ಉಪ್ಪಾರಪೇಟೆ ಇನ್‌ಸ್ಪೆಕ್ಟರ್ ಹಾಗೂ ಅಮೂಲ್ಯ ಲಿಯೋನಾಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಪ್ರಕರಣದ ತನಿಖಾಧಿಕಾರಿಗಳು ನಿಗದಿತ ಸಮಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಹೀಗಾಗಿ, ಗಂಭೀರ ಆರೋಪವಿದ್ದರೂ ಕಾನೂನು ಅವಕಾಶ ಬಳಸಿಕೊಂಡು ಆರೋಪಿ ಜಾಮೀನು ಪಡೆದುಕೊಂಡಿದ್ದಾಳೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ ಸಾಕ್ಷಿಗಳಿದ್ದರೂ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಹಾಗಾಗಿ, ಪ್ರಕರಣದ ತನಿಖಾಧಿಕಾರಿಯನ್ನು ಅಮಾನತುಗೊಳಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ಜಾಮೀನು ರದ್ದು ಕೋರಿ ಸರಕಾರ ಮೇಲ್ಮನವಿ ಸಲ್ಲಿಸಬೇಕು. ಅಮೂಲ್ಯ ಭಯೋತ್ಪಾದಕರ ಸಂಪರ್ಕ ಹೊಂದಿರುವ ಸಾಧ್ಯತೆಯಿರುವುದರಿಂದ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ನಿಗದಿಯಾಗಬೇಕಿದೆ.
ಎಸ್‌ಪಿಪಿ ನೇಮಕ
ಇದೇ ವೇಳೆ ಅಮೂಲ್ಯ ಪ್ರಕರಣದಲ್ಲಿ ಜೆಎಂಎಫ್ಸಿ ಹಾಗೂ ಸೆಷನ್ಸ್ ನ್ಯಾಯಾಲಯಗಳಲ್ಲಿ ಸರಕಾರದ ಪರ ವಾದಿಸಲು ಐ.ಎಸ್. ಪ್ರಮೋದ್‌ಚಂದ್ರ ಅವರನ್ನು ಸರಕಾರ ನೇಮಕ ಮಾಡಿದೆ.