Advertisement

ಅಮೂಲ್ಯ ನಡೆಗೆ ಬಹುಮಾನ್ಯರ ಖಂಡನೆ

10:20 AM Feb 23, 2020 | Lakshmi GovindaRaj |

ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ನಡೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಯುವತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯದ ಹಲವೆಡೆ ಹಿಂದೂಪರ, ಕನ್ನಡಪರ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು. ಇದೇ ವೇಳೆ, ರಾಜಕೀಯ ಪಕ್ಷಗಳ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಸೇರಿ ಬಹುಮಾನ್ಯ ಮುಖಂಡರೆಲ್ಲಾ ಆಕೆಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೂಲ್ಯಳ ದೇಶದ್ರೋಹಿ ಹೇಳಿಕೆ ವಿರುದ್ಧ ವ್ಯಕ್ತವಾಗಿರುವ ಆಕ್ರೋಶದ ಕಿಡಿಗಳಿವು.

Advertisement

ಅಮೂಲ್ಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಹಿಂದೂಪರ, ಕನ್ನಡಪರ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು. ಮಡಿಕೇರಿಯಲ್ಲಿ ಜನರಲ್‌ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ಅಮೂಲ್ಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅರಸಿಕೆರೆ, ಬೇಲೂರು, ಹಾಸನ ಸೇರಿ ಹಾಸನ ಜಿಲ್ಲೆಯ ವಿವಿಧೆಡೆ, ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಕುಮಾರ್‌ ಶೆಟ್ಟಿ ಬಣ), ಎಐಡಿಎಸ್‌ಒ (ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ)ಯ ಕಾರ್ಯಕರ್ತರು, ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹಿ ಧೋರಣೆ ತೋರಿರುವ ಅಮೂಲ್ಯರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಕೋಲಾರದಲ್ಲಿ ನಗರಠಾಣೆ ಎದುರು ಪ್ರತಿಭಟನೆ ನಡೆಸಿದ ಭಜರಂಗದಳದ ಕಾರ್ಯಕರ್ತರು, ಆರಕ್ಷಕ ಉಪನಿರೀಕ್ಷಕರಿಗೆ ದೂರು ಸಲ್ಲಿಸಿ, ಅಮೂಲ್ಯ ಹಾಗೂ ಅವರಿಗೆ ಪ್ರೇರಣೆ ನೀಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಇದೇ ವೇಳೆ, ಬೆಂಗಳೂರು, ಚಿಕ್ಕಬಳ್ಳಾಪುರ, ಕಲಬುರಗಿ, ರಾಮನಗರ, ಹುಬ್ಬಳ್ಳಿ, ಶಿವಮೊಗ್ಗ, ಉಡುಪಿ, ಮಂಡ್ಯ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು. ಈ ಮಧ್ಯೆ, ಅಮೂಲ್ಯ ಲಿಯೋನಾ ಮತ್ತು ಆರಿದ್ರಾ ಹಾಗೂ ಕಾರ್ಯಕ್ರಮ ಸಂಘಟಕರ ಗಡಿಪಾರಿಗೆ ಒತ್ತಾಯಿಸಿ ಹೂವಿನಹಡಗಲಿಯಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪಾಕಿಸ್ತಾನ ಪರ ಘೋಷಣೆ ಕೂಗುವುದು ದೇಶದ್ರೋಹದ ಕೆಲಸ. ಕಾನೂನಿನ ದೃಷ್ಟಿಯಿಂದ ಈ ರೀತಿಯ ಹೇಳಿಕೆ ಕೊಡುವುದು ತಪ್ಪು. ಕೆಲವರು ಯುವ ಜನರಿಗೆ ಈ ರೀತಿ ಪ್ರಚೋದನೆ ನೀಡುತ್ತಿದ್ದಾರೆ. ಈ ರೀತಿ ಪ್ರಚೋದನೆ ನೀಡುವುದೂ ಕೂಡ ದೇಶದ್ರೋಹದ ಕೆಲಸ. ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರಿಗೆ ಬಿಟ್ಟ ವಿಚಾರ. ಕಾಶ್ಮೀರದಲ್ಲಿ ಕೂಡ ಯುವಕರನ್ನು ಇದೇ ರೀತಿಯಲ್ಲಿ ಪ್ರಚೋದನೆ ಮಾಡುತ್ತಿದ್ದರು. 370ನೇ ವಿಧಿ ರದ್ದುಪಡಿಸುವ ಮೂಲಕ ಕೇಂದ್ರ ಸರ್ಕಾರ ಅದಕ್ಕೆಲ್ಲ ಬ್ರೇಕ್‌ ಹಾಕುವ ಕೆಲಸ ಮಾಡಿದೆ.
-ಬಿ.ಸಿ.ಪಾಟೀಲ್‌, ಕೃಷಿ ಸಚಿವ

Advertisement

ಪಾಕಿಸ್ತಾನದ ಬಗ್ಗೆ ಪ್ರೀತಿಯಿದ್ದರೆ ಅಲ್ಲಿಗೆ ಹೋಗಲಿ. ಪೌರತ್ವ ತಿದ್ದುಪಡಿ ವಿರುದ್ಧ ಎಂದು ಹೇಳಿಕೊಂಡು ಸಮಾಜವನ್ನು ದಿಕ್ಕು ತಪ್ಪಿಸುವ ಕೃತ್ಯಗಳಿಗೆ ಕೊನೆಯಾಡಲು ಪಾಕ್‌ ಪರ ಘೋಷಣೆ ಕೂಗುವವರನ್ನು ಗಡಿಪಾರು ಮಾಡಬೇಕು. ಇನ್ನು ಮುಂದೆ ಇಂತಹ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಸರ್ಕಾರ ಅನುಮತಿ ನೀಡಬಾರದು.
-ಎಸ್‌.ಮುನಿಸ್ವಾಮಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next