Advertisement

ಆನಂದಾಮೃತಕರ್ಷಿಣಿ

06:00 AM Oct 05, 2018 | |

ಅಮೃತದಂತೆ ಧಾರೆಧಾರೆಯಾಗಿ ಒಲುಮೆಯಿಂದ ಮಳೆಹರಿಸುವ ಮತ್ತೂಂದು ರಾಗ ಅಮೃತವರ್ಷಿಣಿ ! ದಕ್ಷಿಣಭಾರತದ ಪ್ರಸಿದ್ಧ ಕರ್ನಾಟಕೀ ಶೈಲಿಯ ಈ ಮಳೆರಾಗ, ಅನೇಕ ವೈಶಿಷ್ಟ್ಯ, ಐತಿಹ್ಯಗಳನ್ನು ಒಳಗೊಂಡಿದೆ. ತಮಿಳುನಾಡಿನ ಎತ್ತಯಪುರಂ ಎಂಬಲ್ಲಿ ಪ್ರಖ್ಯಾತ ಸಂಗೀತಕಾರ ಮುತ್ತುಸ್ವಾಮಿ ದೀಕ್ಷಿತರು ಅಂದೊಮ್ಮೆ ಭೇಟಿ ನೀಡುವ ಪ್ರಸಂಗ ಬಂತು. ಆ ಸಮಯ ಆ ಪುಟ್ಟ ಹಳ್ಳಿ ಭೀಕರ ಬರಗಾಲದಿಂದ ತತ್ತರಿಸಿ ಹೋಗಿತ್ತು. ಮೊದಲೇ ಕರುಣಾದ್ರì ಹೃದಯದ ಮುತ್ತುಸ್ವಾಮಿ ದೀಕ್ಷಿತರು, ಪ್ರಕೃತಿ ಸೊರಗಿದ್ದನ್ನು, ಜೀವತಂತು, ಮನುಜರೆನ್ನದೆ ಎಲ್ಲರೂ ಕೊರಗುವುದನ್ನು ಕಂಡಾಗ, ರಾಗ “ಅಮೃತವರ್ಷಿಣಿ’ಯನ್ನು ಹಾಡಿದರು.

Advertisement

ಸಂಗೀತವು ದೈವ ಸಾಕ್ಷಾತ್ಕಾರವನ್ನು , ಒರತೆಯನ್ನು ನಿರಂತರವಾಗಿ ಆಂತರ್ಯದಲ್ಲಿ ಚಿಮ್ಮಿಸುವುದು ಎಷ್ಟು ದಿಟವೋ, ಅಷ್ಟೇ ದಿಟ ಬಾಹ್ಯ ಪ್ರಪಂಚದಲ್ಲಿ ಸಂಗೀತದ ಲಹರಿಯ ಪ್ರಭಾವ! ಮಳೆರಾಗದ ಪ್ರಭಾವ! ಮುತ್ತುಸ್ವಾಮಿ ದೀಕ್ಷಿತರು ರಾಗ ಅಮೃತವರ್ಷಿಣಿಯನ್ನು ಹಾಡತೊಡಗಿದರು… ಆನಂದಾಮೃತಕರ್ಷಿಣಿ ಅಮೃತವರ್ಷಿಣಿ

ಹಾಡುತ್ತಲೇ ಇದ್ದರು. ಒಮ್ಮೆಲೇ ಮಳೆಮೋಡಗಳು ಎಲ್ಲಿಂದಲೋ ಪ್ರತ್ಯಕ್ಷವಾದಂತೆ ಬಂದು ಸೇರಿ, ಮಳೆ ಧಾರೆ ಧಾರೆಯಾಗಿ ಹರಿಯತೊಡಗಿತು. ದೀಕ್ಷಿತರ “ವರ್ಷಯ’ ಎಂಬ ಅಮೃತವರ್ಷಿಣಿಯ ರಾಗದ ಪ್ರಸ್ತುತಿಯಿಂದ ಪ್ರಸನ್ನಗೊಂಡು, ಪ್ರಕೃತಿ ಮುಸಲಧಾರೆಯ ಮಳೆಯಲ್ಲಿ ಮಿಂದಿತು. ಜನರು ಸಂತಸದಿ ನಲಿದಾಡಿದರು. ತದನಂತರ ದೀಕ್ಷಿತರು “ಸ್ತಂಭಯ’ ಹಾಡಿದ ನಂತರ ಮಳೆಯು ನಿಂತು, ಪ್ರಕೃತಿಯಲ್ಲಿ ಶಾಂತಿ ನೆಲೆನಿಂತಿತು.

ದಕ್ಷಿಣಾದಿ ಸಂಗೀತದ ಮಳೆರಾಗವಾಗಿರುವ ಅಮೃತವರ್ಷಿಣಿಯಲ್ಲಿ ತ್ಯಾಗರಾಜರು ಸರಸಿರುಹನಯನೆ ಎಂಬ ಕೃತಿಯನ್ನು ರಚಿಸಿ ಹಾಡಿದ್ದಾರೆ. ಮುತ್ತುಸ್ವಾಮಿ ದೀಕ್ಷಿತರು, ಸರಸಿಜಾಸನಿ ಎಂಬ ಕೃತಿಯನ್ನೂ, ಆನಂದಾಮೃತಕರ್ಷಿಣಿ ಅಮೃತವರ್ಷಿಣಿ ಎಂಬ ಕೃತಿಯೊಂದಿಗೆ ರಚಿಸಿದ್ದಾರೆ.

ಅನ್ನಮಾಚಾರ್ಯರು ಅಗ್ನಿ ಮಂತ್ರಮುಲಿ ಇಂದೇ ಅವಹಿಂಚೆನು ಎಂದು ಅಮೃತವರ್ಷಿಣಿ ಮಳೆರಾಗದಲ್ಲಿ , ಮುತ್ತಯ್ಯ ಭಾಗವತರು ಸುಧಾಮಯಿ ಸುಧಾನಿಧಿ ಎಂದು ಹಾಡಿದ್ದಾರೆ. ಇವು ಅಮೃತವರ್ಷಿಣಿ ಮಳೆರಾಗದ ಕೆಲವು ಮೇರು ಕೃತಿಗಳು.

Advertisement

ಅಜಗಿಯ ಮೇಘಂಗಳ್‌ ಎಂಬ ಗಂಗಾಗೌರಿ ತಮಿಳು ಸಿನೆಮಾ (1973) ಹಾಡು- ಈ ಮಳೆರಾಗದ್ದೇ ಆಗಿದೆ. ಎಂ. ಎಸ್‌. ವಿಶ್ವನಾಥನ್‌ ರಾಗ ಸಂಯೋಜಿಸಿದ ಅಯ್ಯಪ್ಪ ಸ್ವಾಮಿಯ ಭಜನೆ ಉಪಾ ಸಂಧ್ಯಗಳ್‌ ರಾಗ ಅಮೃತವರ್ಷಿಣಿಯ ಮೇಲೆ ಆಧಾರಿತವಾದ ಸುಂದರ ಹಾಡು.
ಈ ರಾಗ ಮನಸ್ಸಿಗೆ ಮುದ ನೀಡುವ, ಆತಂಕ, ಒತ್ತಡ, ತುಮುಲಗಳನ್ನು ನಿವಾರಿಸುವ ರಾಗವೂ ಹೌದು! ಕೆ.ಜೆ. ಜೇಸುದಾಸ್‌ ಹಾಡಿರುವ ಪ್ರಸಿದ್ಧ ಮಲಯಾಳಂ ಸಿನೆಮಾ ಹಾಡು ಒರು ದಲಂ ಮಾತರಂ  ರಾಗ ಅಮೃತವರ್ಷಿಣಿಯ ಮೇಲೆ ಆಧಾರಿತವಾದ ಹಾಡು.

ಪಿ. ಸುಶೀಲಾ ಹಾಗೂ ಟಿ.ಎಂ. ಸುಂದರರಾಜನ್‌ ಹಾಡಿರುವ ಈ ಮಳೆರಾಗದ ಹಾಡು ನಟರಾಜಂ ಎನ್ನ ಸಿವನ್‌ ಮೃದಂಗ ಮೊದಲಾದ ಶಾಸ್ತ್ರೀಯ ವಾದ್ಯಗಳೊಂದಿಗೆ ಶಾಸ್ತ್ರೀಯ ಗಾಯನದ ಇಂಪನ್ನೇ ಹರಿಸುತ್ತದೆ. ಮಳೆಯು ಇಳೆಗೆ ಸಂತಸ ನೀಡುವ ಸಂಜೀವಿನಿಯಲ್ಲವೆ. ಅಂತೆಯೇ ಈ ಮಳೆರಾಗ ಅಮೃತ ವರ್ಷಿಣಿ ಮನಕೆ ಆಮೋದ-ಪ್ರಮೋದಕಾರಕ ಸಂಜೀವಿನಿ.

ಚಿಟ್ಟಿ ಬಾಬು- ಪ್ರಖ್ಯಾತ ವೀಣಾವಾದಕ ಶಾಸ್ತ್ರೀಯವಾಗಿ ಮಳೆರಾಗಗಳನ್ನು ವೀಣೆಯಲ್ಲಿ ನುಡಿಸುವುದರ ಜೊತೆಗೆ, ಜಾನಪದೀಯ “ಬನಿ’ ಶೈಲಿಯಲ್ಲಿ ಮಳೆಗಾಲದ ಸನ್ನಿವೇಶಗಳ ಚಿತ್ರಣವನ್ನು ವೀಣೆಯಲ್ಲಿ ಮೂಡಿಸುತ್ತಿದ್ದರು. ಮಳೆಯ ಸದ್ದು ಮಧುರ ನಿನಾದ, ಹಕ್ಕಿಯ ಇಂಚರ ಇತ್ಯಾದಿಗಳನ್ನು ವೀಣೆಯ ಜೊತೆಗೆ ಇತರ ಪಾಶ್ಚಾತ್ಯ ವಾದ್ಯಗಳಲ್ಲೂ ತಮ್ಮದೇ ಶೈಲಿಯಲ್ಲಿ ನುಡಿಸುತ್ತಿದ್ದರು. ಮಳೆಯ ಮಧುರ ನೆನಪುಗಳನ್ನು ಹೊತ್ತು ತರುವುದು ಅಮೃತವರ್ಷಿಣಿ!

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next