ಗದಗ: ಪ್ರತಿಯೊಬ್ಬರೂ ತನ್ನ ಸುಖಕ್ಕಾಗಿ ತನ್ನ ಒಳತಿಗಾಗಿ ಧರ್ಮಾಚರಣೆ ಮಾಡಿದರೆ ಧರ್ಮದ ವಿವಿಧ ಅನುಭವವಾಗಿ ಅವನ ಜೀವನ ಚೈತನ್ಯ ಪೂರ್ವಕವಾಗಿರುವುದು. ಅದಕ್ಕಾಗಿ ಶ್ರದ್ಧೆ, ಭಕ್ತಿಯಿಂದ ಧರ್ಮಾಚರಣೆ ಮಾಡಿದರೆ ನಿತ್ಯ ಜೀವನದಲ್ಲಿ ಚೈತನ್ಯ ಕಾಣಬಹುದು ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸ್ವಾಮೀಜಿ ಅಭಿಪ್ರಾಯಪಟ್ಟರು. ಜ. ಪಂಚಾಚಾರ್ಯ ಸೇವಾ ಸಂಘದಿಂದ ನಗರದ ಪಂಚಾಚಾರ್ಯರ ಮಾಂಗಲ್ಯ ಮಂದಿರದಲ್ಲಿ ಇತ್ತೀಚೆಗೆ ನಡೆದ ಅಮೃತ ವಾಹಿನಿ-53ರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಧರ್ಮೋ ರಕ್ಷಿತಿಃ, ರಕ್ಷಿತಾಹಃ’ ಎಂಬಂತೆ ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮದ ಅರ್ಥ ಬಹಳ ವಿಶಾಲವಾಗಿದೆ. ಧರ್ಮ ಎಂದರೆ ಜಾತಿಯಲ್ಲ. ನಮ್ಮ ಜೀವನ, ಸುಖ ಹಾಗೂ ಸಮಾಜದ ಹಿತಕ್ಕಾಗಿ ನಾವೇ ಹಾಕಿಕೊಂಡಿರುವ ಹಲವಾರು ಕಟ್ಟುಪಾಡುಗಳು. ಆಚರಣೆ, ಸಂಪ್ರದಾಯಗಳು ನಮ್ಮನ್ನು ನಿಯಂತ್ರಿಸುತ್ತವೆ. ಇದರಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಸಕಲ ಜೀವಾತ್ಮಕ್ಕೆ ಲೇಸನ್ನೇ ಬಯಸುವ ವೀರಶೈವ ಧರ್ಮ ಮಾನವ ಧರ್ಮವನ್ನು ಎತ್ತಿ ಹಿಡಿದಿದೆ. ಸರ್ವ ಜನಾಂಗಕ್ಕೂ ಅನ್ವಯಿಸುವ ಧರ್ಮದ ಸೂತ್ರಗಳನ್ನು ಸಿದ್ಧಾಂತ ಶಿಖಾಮಣಿಯಲ್ಲಿ ತಿಳಿಸಲಾಗಿದೆ. ನಮ್ಮ ಮನೆ, ಹೊಲಗಳ ರಕ್ಷಣೆಗಾಗಿ ಬೇಲಿಯನ್ನು ಹಾಕಿಕೊಳ್ಳುತ್ತೇವೆ. ಆದರಿಂದ ನಮ್ಮ ಬೌದ್ಧಿಕ ಬದುಕು ರಕ್ಷಣೆಗೆ, ಶಾಂತಿ, ನೆಮ್ಮದಿ ಕಾಣಲು ಧರ್ಮಾಚರಣೆ ಎಂಬ ಬೇಲಿಯನ್ನು ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.
ಶೋಭಾ ಗಾಳಿ ಮಾತನಾಡಿ, ಜೀವನದಲ್ಲಿ ಸದ್ಗುಣ, ಸದಾಚಾರಗಳೊಂದಿಗೆ ಜೀವನ ಕಟ್ಟಿಕೊಳ್ಳಬೇಕು. ಮನುಷ್ಯತ್ವದ ಇತಿಮಿತಿಗಳಿಂದ ಬದುಕುವುದೇ ಧರ್ಮ. ಮಾನವ ನಿರ್ಮಿತ ಜಾತಿ, ಮತ, ಅನಂತ. ಜನರ ಆಚಾರ, ವಿಚಾರ ಹಾಗೂ ಸಂಪ್ರದಾಯ, ಪದ್ಧತಿಗಳು ಭಿನ್ನವಾಗಿದ್ದರೂ, ಎಲ್ಲ ಧರ್ಮಗಳ ಸಾರ ಒಂದೇ ಎಂದು ವಿವರಿಸಿದರು.
ಇದೇ ವೇಳೆ ರೋಟರಿ ಸೆಂಟ್ರಲ್ ಕ್ಲಬ್‌ನ ನೂತನ ಅಧ್ಯಕ್ಷ ಮಂಜುನಾಥ ಬೇಲೇರಿ, ರೋಟರಿ ಸೆಂಟ್ರಲ್ ಕ್ಲಬ್ ಕಾರ್ಯದರ್ಶಿ ದಶರಥರಾಜ ಕೊಳ್ಳಿ, ಉದ್ಯಮಿ ಅಶೋಕ ಹೊನ್ನಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ಮಲ್ಲಯ್ಯಸ್ವಾಮಿ ಹಿರೇಮಠ ಸಂಗಡಿಗರು ಭಕ್ತಿ ಸಂಗೀತ ಸುಧೆ ಹರಿಸಿದರು. ಚನಬಸಯ್ಯ ಹೇಮಗಿರಿಮಠ, ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ, ವಿ.ಕೆ. ಗುರುಮಠ, ಪ್ರಕಾಶ ಬೇಲಿ, ಉಮಾಪತಿ ಭೂಸನೂರಮಠ, ಮಲ್ಲಿಕಾರ್ಜುನ ಶಿಗ್ಲಿ, ಸದಾನಂದ ಹೊನ್ನಳ್ಳಿ, ಎಂ.ಸಿ.ಐಲಿ, ಬಸವರಾಜ ಕೂಗು, ಪಂಚಾಕ್ಷರಯ್ಯ ಹಿರೇಮಠ, ವಿ.ಎಲ್. ಪಾಟೀಲ ಇದ್ದರು.