ಬೆಳಗಾವಿ: ಆಝಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯ ಹುಲಕುಂದ, ಹುದಲಿ, ಬೆಳವಡಿ, ಕಿತ್ತೂರು ಹಾಗೂ ನಂದಗಡದಲ್ಲಿ ದಿ. ಜೂ.25 ರಂದು ನಡೆಯಲಿರುವ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಅಮೃತ ಮಹೋತ್ಸವವನ್ನು ಭಿನ್ನವಾಗಿ ಆಚರಿಸುವ ಉದ್ದೇಶದಿಂದ ವಿವಿಧ ಜಿಲ್ಲೆಗಳಿಂದ ಗುರುತಿಸಲಾದ ಆಯ್ದ 75 ಸ್ಥಳಗಳಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯ 5 ಸ್ಥಳಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಉತ್ಸವ ಮಾದರಿಯ ಕಾರ್ಯಕ್ರಮ ಇದಾಗಿದ್ದು, ಕುಂಭಮೇಳ ನಡೆಯಲಿದೆ. ಮೆರವಣಿಗೆಯಲ್ಲಿ ಕಲಾತಂಡಗಳು, ಯುವಶಕ್ತಿ ಸಂಘಗಳು, ಸ್ವ ಸಹಾಯ ಸಂಘಗಳು, ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ, ದೇಶದ ಸಂಸ್ಕೃತಿ, ದೇಶಾಭಿಮಾನ ಮೂಡಿಸುವ ಕಲಾತ್ಮಕ ಹಾಗೂ ವಿವಿಧ ಸಾಂಸƒRತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ಅಮೃತ ಮಹೋತ್ಸವ ಅಂಗವಾಗಿ ಶಿಲಾಫಲಕಗಳನ್ನು ಅನಾವರಣಗೊಳಿಸಲಾಗುವುದು. ಸ್ವಾತಂತ್ರ್ಯದ ಹೋರಾಟದ ಸ್ಮರಣ ಶಿಲಾಫಲಕ ಪ್ರತಿಷ್ಠಾಪನೆ, ಸಾಕ್ಷ್ಯ ಚಿತ್ರ ಪ್ರದರ್ಶನ, ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತದ ಕೊಡುಗೆ ಕುರಿತು ಉಪನ್ಯಾಸ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಆಶಯವುಳ್ಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ ಎಂದರು.
Related Articles
ಮಳೆಗಾಲ ಇರುವುದರಿಂದ ಪೆಂಡಾಲ್ ಹಾಕುವ ಬದಲಿಗೆ ಸ್ಥಳೀಯ ಕಲ್ಯಾಣ ಮಂಟಪಗಳನ್ನು ಬಳಸಿಕೊಳ್ಳಬೇಕು. ಇದರಿಂದ ಹೆಚ್ಚು ಅನುದಾನ ಅವಶ್ಯವಿರುವ ಸ್ಥಳಗಳ ಕಾರ್ಯಕ್ರಮಗಳಿಗೆ ಅನುದಾನ ಉಪಯೋಗವಾಗಲಿದೆ ಹಾಗೂ ಸಮರ್ಪಕ ಬಳಕೆಗೆ ಅವಕಾಶ ಸಿಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಮಾತನಾಡಿ, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆ ಹಾಗೂ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದರು. ಜಿಲ್ಲೆಯ ಐದು ಸ್ಥಳಗಳಲ್ಲಿ ನಡೆಯಲಿರುವ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ರೂಪ ರೇಷೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದರ್ಶನ್. ಎಚ್ ವಿ, ಅಪರ ಜಿಲ್ಲಾದಿಕಾರಿ ಅಶೋಕ ದುಡಗುಂಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಬೆಳಗಾವಿ ತಹಶೀಲ್ದಾರ್ ಆರ್. ಕೆ ಕುಲಕರ್ಣಿ ಉಪಸ್ಥಿತರಿದ್ದರು.