ಕಠ್ಮಂಡು: ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ ಅಡಗಿರುವ ಶಂಕೆ ಇದೆ. ಅಮೃತ್‌ಪಾಲ್ ಸಿಂಗ್ ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದ್ದು, ಆತನನ್ನು ಕೂಡಲೇ ಬಂಧಿಸಬೇಕು. ಆತ ಭಾರತದ ಪಾಸ್‌ಪೋರ್ಟ್ ಅಥವಾ ಇತರೆ ನಕಲಿ ಪಾಸ್‌ಪೋರ್ಟ್‌ನಲ್ಲಿ ಬೇರೆ ದೇಶಕ್ಕೆ ಪಲಾಯನವಾಗುವ ಸಾಧ್ಯತೆ ಇದೆ. ಹೀಗಾಗಿ ಆತ ಬೇರೆ ದೇಶಕ್ಕೆ ಹೋಗುವುದನ್ನು ತಡೆದು, ಆತನನ್ನು ಬಂಧಿಸಿಬೇಕು ಎಂದು ನೇಪಾಳ ಸರ್ಕಾರಕ್ಕೆ ಭಾರತ ಪತ್ರ ಬರೆದಿದೆ ಎಂದು ವರದಿಗಳು ಪ್ರಕಟವಾಗಿವೆ.
ಪತ್ರದ ಜತೆಗೆ ಅಮೃತ್‌ಪಾಲ್ ಸಿಂಗ್ ಖಾಸಗಿ ಮಾಹಿತಿಯನ್ನು ಭಾರತದ ಕಾನ್ಸುಲರ್ ಸೇವೆಗಳ ವಿಭಾಗ ಒದಗಿಸಿದೆ. ಇದೇ ವೇಳೆ ವಿಮಾನಯಾನ ಸಂಸ್ಥೆಗಳು, ಹೋಟೆಲ್‌ಗಳು ಸೇರಿದಂತೆ ನೇಪಾಳದ ಸಂಬಂಧಪಟ್ಟ ಇಲಾಖೆಗಳಿಗೆ ಆತನ ವಿವರವನ್ನು ಹಂಚಿಕೊಳ್ಳಲಾಗಿದೆ.
ಮಾ.18ರಂದು ಪಂಜಾಬ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಅಮೃತ್‌ಪಾಲ್ ಸಿಂಗ್ ಪರಾರಿಯಾಗಿದ್ದ. ಬೇರೆ ಬೇರೆ ಹೆಸರಲ್ಲಿ, ಬೇರೆ ಬೇರೆ ವೇಷಗಳಲ್ಲಿ ಈತನ ಬಳಿ ನಕಲಿ ಪಾಸ್‌ಪೋರ್ಟ್‌ಗಳು ಇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಮೃತ್ ಪರ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರತಿಭಟನೆ
ನ್ಯೂಯಾರ್ಕ್: ತಲೆಮರೆಸಿಕೊಂಡಿರುವ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್‌ಪಾಲ್ ಸಿಂಗ್ ಬೆಂಬಲಿಸಿ ದೊಡ್ಡ ಸಂಖ್ಯೆಯ ಖಲಿಸ್ತಾನಿ ಬೆಂಬಲಿಗರು ಅಮೆರಿಕದ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕೇರ್ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ಬಾಬಾ ಮಖಾನ್ ಶಾ ಲುಬಾನ ಸಿಖ್ ಸೆಂಟರ್‌ನಿಂದ ಭಾನುವಾರ ಮಧ್ಯಾಹ್ನ ಹೊರಟ ಕಾರು ರ್ಯಾಲಿ ಮ್ಯಾನ್ಹಾಟನ್ ನಗರದ ಟೈಮ್ಸ್ ಸ್ಕೇರ್ ವೃತ್ತದವರೆಗೂ ಸಾಗಿತು. ಈ ವೇಳೆ ಖಲಿಸ್ತಾನಿ ಬಾವುಟ ಪ್ರದರ್ಶಿಸಲಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.