Advertisement

Amrita Someshwara; ಒಲುಮೆಯ ಅಮೃತ ಉಣಿಸಿ ಸಾಗರದ ಕಡೆ ನಡೆದರು

12:39 AM Jan 07, 2024 | Team Udayavani |

ಪ್ರೊ| ಅಮೃತ ಸೋಮೇಶ್ವರರು ಇನ್ನಿಲ್ಲ ಎಂಬ ಸುದ್ದಿಯನ್ನು ಜ. 6 ರ ಶನಿವಾರ ಬೆಳಗ್ಗೆ ಕೇಳಿದಾಗ ಕರಾವಳಿ ಕರ್ನಾಟಕದ ಬಹುರೂಪಿ ವಿದ್ವಾಂಸರು, ಹಿರಿಯ ಆಪ್ತ ಸ್ನೇಹಿತರನ್ನು ಕಳೆದುಕೊಂಡು ಮನಸ್ಸು ಭಾರವಾಯಿತು. ಕಳೆದ ಸುಮಾರು ಐವತ್ತೈದು ವರ್ಷಗಳಿಂದ ಅಮೃತ ಸೋಮೇಶ್ವರರ ಜತೆಗೆ ಸಂಬಂಧ,ಆತ್ಮೀಯತೆ, ನಿರಂತರ ಒಡನಾಟವನ್ನು ಇಟ್ಟುಕೊಂಡು ಬಂದ ನನಗೆ ನನ್ನ ಬದುಕಿನ ಭಾಗವೊಂದು ಕಳಚಿಕೊಂಡ ನೋವಿನ ಅನುಭವ ಆಯಿತು.

Advertisement

1968ರಲ್ಲಿ ನಾನು ಕನ್ನಡ ಎಂಎ ವಿದ್ಯಾರ್ಥಿ ಆಗಿದ್ದ ಕಾಲದಿಂದ ಸುಮಾರು ಒಂದು ತಿಂಗಳ ಹಿಂದೆ ಬಹುಮಟ್ಟಿಗೆ ನಿಸ್ತೇಜಿತರಾಗಿ ಮಲಗಿದ್ದ ಅಮೃತರನ್ನು ಅವರ ಮನೆಯಲ್ಲಿ ಕಂಡ ನೆನಪುಗಳು ನೂರಾರು ಇವೆ. ಕೊನೆಯ ಬಾರಿ ಮನೆಯಲ್ಲಿ ಅವರನ್ನು ಕಂಡಾಗ ಕಣ್ಣು ಅರಳಿಸಿ ನಕ್ಕಿದ್ದರು. ಎಂಬತ್ತೆಂಟು ವರ್ಷಗಳ ಬದುಕಿನ ಪಯಣದಲ್ಲಿ ಐವತ್ತು ವರ್ಷಗಳಿಗೂ ಮಿಕ್ಕಿದ ಅವಧಿಯಲ್ಲಿ ನಾನು ಅವರ ಆಪ್ತ ಒಡನಾಡಿಯಾಗಿದ್ದೆ ಎನ್ನುವ ಧನ್ಯತೆ ನನ್ನದು. ಕನ್ನಡ, ತುಳು ಮತ್ತು ಜಾನಪದ -ನಮ್ಮನ್ನು ಮತ್ತೆ ಮತ್ತೆ ಒಟ್ಟು ಸೇರಿಸುತ್ತಾ ಬಂದಿತ್ತು. ಅದಕ್ಕಿಂತಲೂ ಮಿಗಿಲಾಗಿ ಅವರ ಒಳಗೆ ಇರುವ ಮಾನವೀಯ ವ್ಯಕ್ತಿತ್ವವೊಂದು ನನ್ನ ಮತ್ತು ಅವರ ನಡುವಿನ ಬಂಧುತ್ವದ ಅನುಬಂಧವನ್ನು ನಿರಂತರ ಕಾಪಾಡಿಕೊಂಡು ಬಂದಿದೆ.

ಪ್ರೊ| ಅಮೃತ ಸೋಮೇಶ್ವರರು ವಿವೇಕಾನಂದ ಕಾಲೇಜು ಪುತ್ತೂರಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ¨ªಾಗ ಅಲ್ಲಿನ ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಾನು ಖಾಯಂ ಅತಿಥಿಯಾಗಿದ್ದೆ. 1993 ರಲ್ಲಿ ನಿವೃತ್ತರಾದಾಗ ನಾನು ಅವರ ಮನೆಗೆ ಹೋಗಿ ಪ್ರೀತಿಯಿಂದ ಕೇಳಿಕೊಂಡಾಗ ಒಪ್ಪಿಕೊಂಡು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ನನ್ನ ಸಹೋದ್ಯೋಗಿಯಾಗಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ತುಳು ಜಾನಪದದ ಪಾಠ ಮಾಡುತ್ತಿದ್ದರು. ಅದರ ಜತೆಗೆ ಕನ್ನಡ ವಿಭಾಗದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಆರಂಭಿಸಲು ಬುನಾದಿ ಹಾಕಿದರು. ಅವರೇ ಯಕ್ಷಗಾನ ಕಮ್ಮಟಗಳನ್ನು ನಡೆಸಿದರು, ಹಿರಿಯ ಕಲಾವಿದರನ್ನು ಆಮಂತ್ರಿಸಿದರು. ಯಕ್ಷಗಾನ ದಾಖಲೀಕರಣಕ್ಕೆ ನಾಂದಿ ಹಾಡಿದರು. ತಮ್ಮ ವ್ಯಾಪಕ ಯಕ್ಷಗಾನ ಕಲಾವಿದರ ಸಂಪರ್ಕವನ್ನು ವಿವಿಗೆ ಧಾರೆ ಎರೆದರು.

ಪ್ರೊ| ಕು.ಶಿ ಹರಿದಾಸ ಭಟ್ಟರ ಮಾರ್ಗದರ್ಶನದಲ್ಲಿ ಡಾ| ಯು. ಪಿ. ಉಪಾಧ್ಯಾಯ ದಂಪತಿಯ ಸಂಪಾದಕತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ 1979ರಿಂದ 1997ರ ವರೆಗೆ ನಡೆದ ತುಳು ನಿಘಂಟು ಯೋಜನೆಯ ಸಲಹಾ ಸಮಿತಿಯಲ್ಲಿ ಪ್ರೊ|ಅಮೃತರು ದೀರ್ಘ‌ ಕಾಲ ಸದಸ್ಯರಾಗಿದ್ದರು. ಅವರ ಬಹುಭಾಷಾ ಜ್ಞಾನದಿಂದಾಗಿ ತುಳು ನಿಘಂಟುವಿನ ಆರು ಸಂಪುಟಗಳಿಗೆ ಬಹಳ ಪ್ರಯೋಜನವಾಗಿದೆ. ಸಮಿತಿಯ ಒಬ್ಬ ಸದಸ್ಯನಾಗಿ ನಾನು ಅಮೃತರು ಸಭೆಗಳಲ್ಲಿ ಭಾಗವಹಿಸಿ ವಿಷಯ ಮಂಡಿಸುವ ಕ್ರಮ, ಜತೆಗೆ ಅನೇಕ ಪದಗಳ ಅರ್ಥ ನಿಷ್ಕರ್ಷೆಗೆ ಕೊಡುತ್ತಿದ್ದ ನಿದರ್ಶನಗಳಿಂದ ಪ್ರಭಾವಿತನಾಗಿದ್ದೆ. ಅವರಲ್ಲಿ ವಿದ್ವತ್ತು ಮತ್ತು ಹಾಸ್ಯಪ್ರವೃತ್ತಿಗಳ ಸೊಗಸಾದ ಬೆಸುಗೆ ಇತ್ತು. ಅವರದ್ದು ಅಪಾರ ಅನುಭವದ ಕೊಪ್ಪರಿಗೆ.

ಅಮೃತರ ಮನೆಮಾತು ಮೋಯ ಮಲೆಯಾಳ. ಅವರ ವಿಶೇಷ ಸಾಧನೆ ಸಿದ್ಧಿಗಳು ಕಾಣಿಸಿಕೊಂಡದ್ದು ತುಳು ಮತ್ತು ಕನ್ನಡದಲ್ಲಿ. ತಮ್ಮ ಮಾತೃಭಾಷೆಯಲ್ಲಿ ಅವರು ರಚಿಸಿದ “ಮೋಯ ಮಲಯಾಳ ಕನ್ನಡ ಶಬ್ದಕೋಶ ‘ ಒಂದು ವಿದ್ವತ್‌ ಅರ್ಥಕೋಶ. ಅಮೃತರದ್ದು ಸ್ವಭಾತಃ ಕವಿ ಹೃದಯ. ವ್ಯಕ್ತಿಯಾಗಿ ಅವರದ್ದು ಮಾತೃಹೃದಯ.

Advertisement

ಅಮೃತ ಸೋಮೇಶ್ವರರು ಕರಾವಳಿಯ ಆಧುನಿಕ ಕಾಲಘಟ್ಟದ ಜಾನಪದ ವಿದ್ವಾಸರಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುವವರು. ಅವರು 1960ರ ಕಾಲಕ್ಕೆಯೇ ತುಳು ಪಾಡನಗಳನ್ನು ಸಂಗ್ರಹಿಸಿದ್ದರು. ಅವರ “ತುಳು ಪಾಡªನದ ಕಥೆಗಳು’, 1962 ರಲ್ಲಿ ಪ್ರಕಟವಾಯಿತು . ನಾನು ಮೈಸೂರು ವಿವಿಯಲ್ಲಿ ಡಾ|ಹಾ ಮಾ ನಾಯಕರ ಮಾರ್ಗದರ್ಶನದಲ್ಲಿ “ತುಳು ಜನಪದ ಸಾಹಿತ್ಯ’ ದ ಬಗ್ಗೆ ಪಿಎಚ್‌. ಡಿ. ಪದವಿಗಾಗಿ 1973-78ರಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಸಮಾಲೋಚನೆಗಾಗಿ ಕೋಟೆಕಾರು ಬಳಿಯ ಅಡ್ಕದ ಅವರ ಮನೆಗೆ ಹೋಗುತ್ತಿದ್ದೆ. ಆಗ ಅವರು ತಾವು ಸಂಗ್ರಹಿಸಿದ್ದ ತುಳು ಪಾಡನಗಳ ಕೈಬರಹದ ಸಂಪುಟವನ್ನು ನನಗೆ ಕೊಡುವ ಔದಾರ್ಯವನ್ನು ಪ್ರಕಟಿಸಿದ್ದರು . ಮುಂದೆ ಅದು ಕನ್ನಡ ವಿಶ್ವವಿದ್ಯಾನಿಲಯ ಹಂಪಿಯಿಂದ 1997ರಲ್ಲಿ ಪ್ರಕಟವಾಯಿತು.
ತುಳು ಜಾನಪದದ ಬಗ್ಗೆ ಅಧ್ಯಯನ ಮಾಡುವ ವಿದೇಶಿ ವಿದ್ವಾಂಸರೂ ಅಮೃತ ಸೋಮೇಶ್ವರರನ್ನು ಭೇಟಿಯಾಗಿ ಸಮಾಲೋಚಿಸುತ್ತಿದ್ದರು. ಅಮೆರಿಕದ ಪೀಟರ್‌ ಜೆ. ಕ್ಲಾಸ್‌, ಮಾರ್ಕ್‌ -ಮಿಮಿ ನಿಕ್ಟರ್‌, ಜರ್ಮನಿಯ ಹೈಡ್ರೂನ್‌ ಬ್ರುಕ್ನರ್‌, ಫಿನ್ಲಂಡಿನ ಲೌರಿ ಹಾಂಕೊ -ಹೀಗೆ ಜಾಗತಿಕ ವಿದ್ವಾಂಸರಿಗೆ ಕೂಡ ಅಮೃತರ ಮನೆಯ ಬಾಗಿಲು ತೆರೆದಿರುತ್ತಿತ್ತು. 1985ರಲ್ಲಿ ಉಡುಪಿಯಲ್ಲಿ ಫಿನ್ಲಂಡ್‌ನ‌ ಕಲೆವಲ ರಾಷ್ಟ್ರೀಯ ಮಹಾಕಾವ್ಯದ 150ನೆಯ ಉತ್ಸವವನ್ನು ಏರ್ಪಡಿಸಿದಾಗ ಕು. ಶಿ. ಹರಿದಾಸ ಭಟ್ಟರ ಪ್ರೇರಣೆಯಿಂದ ಅಮೃತರು ಆ ಕಾವ್ಯದ ಒಂದು ಅಧ್ಯಾಯವನ್ನು “ಮೋಕೆದ ಬೀರೆ ಲೆಮಿಂಕಾಯೆ ‘ ಎಂದು ಅನುವಾದ ಮಾಡಿಕೊಟ್ಟರು. ಅದು ಸುಶೀಲಾ ಉಪಾಧ್ಯಾಯರ ನೇತೃತ್ವದಲ್ಲಿ ರಂಗದಲ್ಲಿ ಜನಮೆಚ್ಚುಗೆ ಪಡೆಯಿತು.

ಅಮೃತರು ಸರಳತೆ ಸಜ್ಜನಿಕೆಯ ಸಾಕಾರ ಮೂರ್ತಿ. ಪದವಿ, ಅಧಿಕಾರಗಳಿಗಿಂತ ಮಾನವೀಯ ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡುತ್ತಿದ್ದರು. ಅವರ ಇನ್ನೊಂದು ಪ್ರೀತಿಯ ರಂಗ “ಯಕ್ಷಗಾನ’. ಅದರಲ್ಲಿ ಅವರದ್ದು ಸರ್ವಾಂಗೀಣ ತಿಳಿವಳಿಕೆ. ಅವರು ಯಕ್ಷಗಾನದ ಹಾಡುಗಳನ್ನು ಹಾಡಿದ್ದನ್ನು ನಾನು ಕೇಳಿದ್ದೇನೆ. ಅವರು ಒಬ್ಬ ಒಳ್ಳೆಯ ವರ್ಣಚಿತ್ರ ಕಲಾವಿದ ಎನ್ನುವುದು ಅನೇಕರಿಗೆ ಗೊತ್ತಿಲ್ಲ.

ವೇಷಭೂಷಣಗಳ ಪರಂಪರೆಯ ಬಗ್ಗೆ ಅವರದ್ದು ಬಹಳ ವಿಸ್ತಾರವಾದ ನೆನಪಿನ ಉಗ್ರಾಣ. ಪರಂಪರೆಯ ಯಕ್ಷಗಾನದ ಬಗ್ಗೆ ಗೌರವ ಇರುವ ಹಾಗೆಯೇ ಆಗಬೇಕಾದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಅವರದ್ದು ಸ್ಪಷ್ಟ ಧ್ವನಿ. ತುಳು ಯಕ್ಷಗಾನದ ಪರವಾಗಿ ಧ್ವನಿ ಎತ್ತಿದ ಹಿರಿಯ ವಿದ್ವಾಂಸರು ಅಮೃತರು. ಪುರಾಣದ ವಸ್ತುಗಳಿಗೆ ಆಧುನಿಕ ಧ್ವನಿಯನ್ನು ಕೊಟ್ಟು ಅವರು ರಚಿಸಿದ “ಕಾಯಕಲ್ಪ’, “ಸಹಸ್ರ ಕವಚ ಮೋಕ್ಷ’, “ತ್ರಿಪುರದಹನ’ ದಂತಹ ಅನೇಕ ಪ್ರಸಂಗಗಳು ಆಧುನಿಕ ರಂಗ ವಿಮರ್ಶಕರ ಗಮನವನ್ನು ಅಷ್ಟಾಗಿ ಸೆಳೆದಿಲ್ಲ. ಕಲ್ಕುಡ, ಸಿರಿಯಂತಹ ಜಾನಪದ ಹೋರಾಟದ ಪಾತ್ರಗಳಿಗೆ ಯಕ್ಷಗಾನ ಪ್ರಸಂಗಗಳ ಮೂಲಕ ಅಮೃತರು ನ್ಯಾಯ ಸಲ್ಲಿಸಿದ್ದಾರೆ.

ಅಮೃತರ ಮನೆಯ ಹೆಸರು “ಒಲುಮೆ ‘. ಅದು ಅಡ್ಕದ ಅವರ ಹಿರಿಯರ ಇರಬಹುದು, ರಾಷ್ಟ್ರೀಯ ಹೆದ್ದಾರಿಯ ಮನೆ ಇರಬಹುದು, ಕೊಂಚ ಕಾಲ ವಾಸವಾಗಿದ್ದ ಕಡಲತಡಿಯ ಮನೆ ಇರಬಹುದು, ಈಗಿನ “ಒಲುಮೆ’ಯ ಮನೆ ಆಗಿರಬಹುದು. ಎಲ್ಲ ಕಡೆಯೂ ನನ್ನ ಹಾಗೆ ಎಲ್ಲರಿಗೂ ತೆರೆದುಕೊಂಡ ಮನೆ ಅಮೃತರದ್ದು . ನಾನು ಅಲ್ಲಿಗೆ ಯಾವಾಗ ಹೋದಾಗಲೂ ಮೊದಲು ಬರಮಾಡಿಕೊಂಡು ಮಾತಾಡಿಸುತ್ತಿದ್ದದ್ದು ಅಮೃತರ ಶ್ರೀಮತಿ ನರ್ಮದಾ ಟೀಚರ್‌. ಅಮೃತರ ಬದುಕಿನ ಜೀವನಾಡಿ ನರ್ಮದಾ ಟೀಚರ್‌. ಕಳೆದ ಕೆಲವು ವರ್ಷಗಳಲ್ಲಿ ಅವರು ಅಮೃತರ ಆರೋಗ್ಯದ ಬಗ್ಗೆ ಮಾಡುತ್ತಿದ್ದ ಆರೈಕೆಯ ಮಾಹೇಶ್ವರ ನಿಷ್ಠೆಯನ್ನು ಅನೇಕ ಬಾರಿ ಕಣ್ಣಾರೆ ಕಂಡಿದ್ದೆ.
ಇವತ್ತು “ಒಲುಮೆ’ ಗೆ ಹೋದಾಗ ನರ್ಮದಾ ಟೀಚರ್‌ ಜತೆಗೆ ಯಾವ ಸಾಂತ್ವನದ ಮಾತುಗಳನ್ನು ಆಡಿದರೂ ಅದು ಕೃತಕ ಆಗುತ್ತದೆ ಎಂದು ಗೊತ್ತು. ಈಗ ನಾವು ಕಳೆದುಕೊಂಡದ್ದು ಸರಿಸಾಟಿ ಇಲ್ಲದ, ಪರಂಪರೆಯನ್ನು ಹೊಸತನಕ್ಕೆ ಜೋಡಿಸುತ್ತಾ ಬಂದ, ಅದ್ಭುತ ಕತೃತ್ವ ಶಕ್ತಿಯ ಕರಾವಳಿಯ ಅಮೃತ ಚೇತನವನ್ನು.

-  ಡಾ| ಬಿ. ಎ. ವಿವೇಕ ರೈ , ವಿಶ್ರಾಂತ ಕುಲಪತಿಗಳು ಹಂಪಿ ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next