ಕುಷ್ಟಗಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ತಾಲೂಕಿನ 23 ಕೆರೆಗಳನ್ನು ಸುಂದರ ಸರೋವರಗಳನ್ನಾಗಿ ರೂಪಿಸಲು ಅಮೃತ ಸರೋವರ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆ. 15ರ ಸ್ವಾತಂತ್ರ್ಯೋತ್ಸವದ ವೇಳೆಗೆ ಮೊದಲ ಆದ್ಯತೆಯಾಗಿ ತಾಲೂಕಿನ ಕಾಟಾಪೂರ ಕೆರೆ, ಅಂಟರಠಾಣದ ಯಲ್ಲಮ್ಮನ ಕೆರೆ, ಮುದೇನೂರು ಗ್ರಾಪಂ ವ್ಯಾಪ್ತಿಯ ಮಾದಾಪೂರ ಕೆರೆ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.
ಅಮೃತ ಸರೋವರ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ಅಮೃತ ಸರೋವರಗಳನ್ನಾಗಿ ರೂಪಿಸುವುದು ಈ ಯೋಜನೆ ಉದ್ದೇಶವಾಗಿದೆ. ಕೊಪ್ಪಳ ಜಿಲ್ಲೆಯ 75 ಕೆರೆಗಳ ಪೈಕಿ ಕುಷ್ಟಗಿ ತಾಲೂಕಿನಲ್ಲಿ 23 ಕೆರೆ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಆಯ್ದ ಮೂರು ಕೆರೆಗಳ ಪ್ರದೇಶದಲ್ಲಿ ಕಾಮಗಾರಿ ಭರದಿಂದ ಸಾಗಿದ್ದು, ಸದರಿ ಕಾಮಗಾರಿ ಸ್ಥಳಕ್ಕೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ ಭೇಟಿ ನೀಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು.
ಪಿಡಿಒಗಳಿಗೆ ನಿರ್ದೇಶನ: ಅಮೃತ ಸರೋವರ ಯೋಜನೆಯ ಉದ್ದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸುಂದರವಾದ ಕೆರೆಗಳು ನಿರ್ಮಾಣವಾಗಬೇಕು. ವಿಶ್ರಾಂತಿ ಪಡೆಯುವ ಬೆಂಚ್‌ಗಳು, ವಾಕಿಂಗ್ ಟ್ರ್ಯಾಕ್, ಐಲ್ಯಾಂಡ್, ಸುತ್ತಲೂ ತಂತಿ ಬೇಲಿ ಹಾಕಿ ಆಕರ್ಷಣೀಯ ಕೇಂದ್ರಗಳಾಗಿ ಕಾಣುವಂತೆ ನಿರ್ಮಿಸಬೇಕೆಂದು ಹಾಜರಿದ್ದ ಪಿಡಿಒಗಳಿಗೆ ಮುಖ್ಯ ಲೆಕ್ಕಾಧಿಕಾರಿ ಅಮೀನ ಅತ್ತಾರ್ ನಿರ್ದೇಶನ ನೀಡಿದರು. ತಾಂತ್ರಿಕ ಸಹಾಯಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುತುವರ್ಜಿ ವಹಿಸಿ ವಿವಿಧ ಇಲಾಖೆಗಳ ಅನುದಾನದ ಸಹಯೋಗದಲ್ಲಿ ಪರಿಣಾಮಕಾರಿಯಾಗಿ ಸರೋವರ ಕೆರೆಗಳನ್ನು ಅನುಷ್ಠಾನಗೊಳಿಸಿ ಕೆರೆಯ ಸೌಂದರ್ಯ ಹೆಚ್ಚಿಸಬೇಕೆಂದು ಸೂಚಿಸಿದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಕಾಟಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಎಂ., ಅಂಟರಠಾಣ ಪಿಡಿಒ ಹನುಮಂತಪ್ಪ ನಿಂಬಾಕ್ಷಿ, ಶಿವಪ್ಪ ಛಲವಾದಿ, ಹನುಮಗೌಡ ಪೊಲೀಸಪಾಟೀಲ್ ಹಾಜರಿದ್ದರು.
ಅಮೃತ ಸರೋವರ ಯೋಜನೆ: ಅಂಟರಠಾಣ ಕೆರೆ ಸರ್ವೇ ನಂಬರಿನಲ್ಲಿರುವುದು ನಂತರ ಗೊತ್ತಾಗಿದೆ. ಹೀಗಾಗಿ ಕೆರೆಯನ್ನು ಅಮೃತ ಸರೋವರ ಯೋಜನೆ ಅಡಿಯಲ್ಲಿ ಬಾಕಿ ಉಳಿಸಲಾಗಿದೆ. ಹೀಗಾಗಿ ಬದಲಿ ಕೆರೆಯನ್ನು ಅಭಿವೃದ್ಧಿ ಪಡಿಸಲು ನಿರ್ದೇಶನ ನೀಡಲಾಗಿದೆ. ಆಗಸ್ಟ್ 15ರ ಹೊತ್ತಿಗೆ ತಾಲೂಕಿನಲ್ಲಿ ಮೂರು ಕೆರೆಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. –
ಅಮೀನ್ ಅತ್ತಾರ, ಜಿಪಂ ಮುಖ್ಯ ಲೆಕ್ಕಾಧಿಕಾರಿ