Advertisement

ಹದಿನೇಳು ಗ್ರಾಮಗಳಿಗೆ ಅಮೃತ ಸಿಂಚನ

06:34 PM Sep 30, 2021 | Team Udayavani |

ವರದಿ: ಶಶಿಧರ್‌ ಬುದ್ನಿ

Advertisement

ಧಾರವಾಡ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪಿಗಾಗಿ ರಾಜ್ಯ ಸರಕಾರವು ಗ್ರಾಪಂಗಳ ಮೂಲ ಸೌಕರ್ಯಗಳನ್ನು ಉನ್ನತೀಕರಿಸಲು ಜಾರಿಗೊಳಿಸುತ್ತಿರುವ ಅಮೃತ ಗ್ರಾಪಂ ಯೋಜನೆಗೆ ಜಿಲ್ಲೆಯಲ್ಲಿ 17 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ಧಾರವಾಡ ತಾಲೂಕಿನಿಂದ 4, ಹುಬ್ಬಳ್ಳಿ, ಕಲಘಟಗಿ ಹಾಗೂ ಕುಂದಗೋಳ ತಾಲೂಕಿನಿಂದ ತಲಾ 3, ನವಲಗುಂದ ತಾಲೂಕಿನಿಂದ 2, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕಿನಿಂದ ತಲಾ 1 ಗ್ರಾಪಂಗಳನ್ನು ಅಂತಿಮಗೊಳಿಸಲಾಗಿದೆ. ಈ ಗ್ರಾಪಂಗಳ ಆಯ್ಕೆಗಾಗಿ ಸೆ.11ರಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕೈಗೊಳ್ಳಲಾಗಿತ್ತು. ಶಾಸಕರು ತಮ್ಮ ಕ್ಷೇತ್ರದಲ್ಲಿನ ಅರ್ಹ ಗ್ರಾಪಂಗಳನ್ನು ಆಯ್ಕೆಗೊಳಿಸಿ ನೀಡುವಂತೆ ತಿಳಿಸಲಾಗಿತ್ತು. ಅದರ ಅನ್ವಯ ಈಗ ಗ್ರಾಮಗಳನ್ನು ಅಮೃತ ಗ್ರಾಪಂ ಯೋಜನೆಗೆ ಆಯ್ಕೆಗೊಳಿಸಲಾಗಿದೆ. ಹಿಂದೆ ಸುವರ್ಣ ಗ್ರಾಮ, ಮುಖ್ಯಮಂತ್ರಿಗಳ ಗ್ರಾಮ ಯೋಜನೆ ಸೇರಿದಂತೆ ವಿವಿಧ ರೀತಿಯ ಯೋಜನೆಯ ಪ್ರಯೋಜನ ಪಡೆದ ಗ್ರಾಪಂಗಳನ್ನು ಹೊರತುಪಡಿಸಿ ಗ್ರಾಮಗಳನ್ನು ಆಯ್ಕೆ ಮಾಡಿರುವುದು ವಿಶೇಷ.

ಅಮೃತ ಯೋಜನೆ ಅನುಷ್ಠಾನ: ಯೋಜನೆಯಲ್ಲಿ ಇ-ಲೈಬ್ರರಿಯ ಪರಿಕಲ್ಪನೆ ಹೊಂದಿದ್ದು, ಸೋಲಾರ್‌ ಬೀದಿ ದೀಪಗಳ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವುದು, ಶೇ.100 ಘನ ತ್ಯಾಜ್ಯ ವಿಂಗಡಣೆಗೆ ಹಾಗೂ ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾಪಂ ಕಟ್ಟಡಗಳಿಗೆ ಸೌರ ವಿದ್ಯುತ್‌ ಅಳವಡಿಕೆ, ಅಮೃತ್‌ ಉದ್ಯಾನವನಗಳ ನಿರ್ಮಾಣ ಹಾಗೂ ಗ್ರಾಪಂ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲು ಉದ್ದೇಶಿಸಲಾಗಿದೆ. ಶಾಲೆಗಳು, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯಗಳು ಕಲ್ಪಿಸಲು ಹಾಗೂ ಆಟದ ಮೈದಾನ, ಆವರಣ ಗೋಡೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇದಲ್ಲದೇ ರೈತರ ಉಪಯೋಗಕ್ಕಾಗಿ ಗ್ರಾಮೀಣ ಗೋದಾಮಗಳ ನಿರ್ಮಾಣ ಹಾಗೂ ಕೆರೆಗಳ/ ಕಲ್ಯಾಣಗಳ ಪುನಶ್ಚೇತನಕ್ಕೆ ಆದ್ಯತೆ ಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next