Advertisement

Udupi ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವದ ಸಂಭ್ರಮ

12:17 AM Sep 23, 2023 | Team Udayavani |

ಉಡುಪಿ: ಮಣಿಪಾಲದ ಶಿಲ್ಪಿ ದಿ|ಡಾ| ತೋನ್ಸೆ ಮಾಧವ ಅನಂತ ಪೈ ಅವರ ಪ್ರಯತ್ನದಿಂದ 1949ರ ಜೂನ್‌ 27ರಂದು ಉಡುಪಿ ಶ್ರೀಕೃಷ್ಣನ ಭೂಮಿಯಲ್ಲಿ ಬೆಳಗಿದ ಮಹಾತ್ಮಾ ಗಾಂಧಿ ಮೆಮೋರಿಯಲ್‌ ಕಾಲೇಜು ಎಂಬ ಜ್ಞಾನ ದೀಪ ಅಮೃತ ಮಹೋತ್ಸವಕ್ಕೆ ಸಿದ್ದಗೊಳ್ಳುತ್ತಿದೆ.

Advertisement

ಸ್ವಾತಂತ್ರ್ಯಪೂರ್ವದಲ್ಲಿಯೇ ಡಾ| ಟಿಎಂಎ ಪೈಯವರು ಶೈಕ್ಷಣಿಕ ಸ್ವಾವಲಂಬನೆಯ ಕನಸು ಕಾಣುತ್ತಿದ್ದರು. 1942ರಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ ಸಂಸ್ಥೆ ಸ್ಥಾಪಿಸಿ ಸ್ವದೇಶಿ ಸ್ವಾವಲಂಬನೆಯ ಶಿಕ್ಷಣಕ್ಕೆ ಪ್ರೇರಣೆ ನೀಡಿದರು. 1947ಕ್ಕೂ ಪೂರ್ವದಲ್ಲಿ ಕರಾವಳಿ ಕರ್ನಾಟಕದಲ್ಲಿ ಮಂಗಳೂರಿನಲ್ಲಿ ಮಾತ್ರ ಮೂರು ಕಾಲೇಜುಗಳಿದ್ದವು. ಅಲ್ಲಿಂದ ಬೈಂದೂರುವರೆಗೆ ಕಾಲೇಜು ಇರಲಿಲ್ಲ.

ಮದ್ರಾಸು ವಿ.ವಿ. ಸೆಕೆಂಡ್‌ ಗ್ರೇಡ್‌ (ಇಂಟರ್ಮೀಡಿಯೇಟ್‌) ಕಾಲೇಜನ್ನು ಮಂಜೂರು ಮಾಡಿದಾಗ ಸ್ವಂತ ಕಟ್ಟಡವಿಲ್ಲದೆ ನಗರಸಭೆಯ ಪ್ರಾಥಮಿಕ ಶಾಲೆಯಲ್ಲಿ ಸಮೀಪದ ಕ್ಲಬ್‌ ಕಟ್ಟಡ ಸೇರಿಸಿಕೊಂಡು ಕಾಲೇಜು 79 ಹುಡುಗರು, 10 ಹುಡುಗಿಯರು, 10 ಪ್ರಾಧ್ಯಾಪಕರು, 7 ಸಿಬಂದಿಯೊಂದಿಗೆ ಅಸ್ತಿತ್ವಕ್ಕೆ ಬಂದಿತು. ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ದಾರಿಯ ಎಡದಲ್ಲಿದ್ದ ಸಗ್ರಿ ಗುಡ್ಡದಲ್ಲಿ 1949ರ ಅ. 25ರಂದು ಮದ್ರಾಸ್‌ ಮುಖ್ಯಮಂತ್ರಿ ಪಿ.ಎಸ್‌.ಕುಮಾರಸ್ವಾಮಿ ರಾಜಾ ಕಾಲೇಜಿನ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸಗೈದರು. ಕಟ್ಟಡ ನಿರ್ಮಾಣಕ್ಕೆ ಊರವರೊಂದಿಗೆ ಅಷ್ಟ ಮಠಗಳ ಯತಿಗಳೂ ಕೈಜೋಡಿಸಿದರು.

1952ರಲ್ಲಿ ವಿಜ್ಞಾನ, 1953ರಲ್ಲಿ ಬಿಎ ತರಗತಿಯೊಂದಿಗೆ ಪ್ರಥಮ ದರ್ಜೆ ಕಾಲೇಜು, 1954ರಲ್ಲಿ ಪ್ರತ್ಯೇಕ ಗ್ರಂಥಾಲಯ, 1956ರಲ್ಲಿ ಬಿಕಾಂ., ಬಿ.ಎಸ್ಸಿ ತರಗತಿ ಆರಂಭ, 1958ರಲ್ಲಿ ಮೈಸೂರು ವಿ.ವಿ. ಕಕ್ಷೆಗೆ (1980ರಿಂದ ಮಂಗಳೂರು ವಿ.ವಿ. ಅಧೀನದಲ್ಲಿದೆ), 1963ರಲ್ಲಿ 46 ಎಕರೆ ವಿಸ್ತೀರ್ಣವುಳ್ಳ ಕಾಲೇಜು ಕ್ಯಾಂಪಸ್ಸಿಗೆ ಯುಜಿಸಿಯಿಂದ ಮಾನ್ಯತೆ, 1966ರಲ್ಲಿ ಮಾಧವ ಪೈ ವಿಜ್ಞಾನ ಮಂದಿರ, 1972ರಲ್ಲಿ ವಿಕ್ರಮಶಿಲಾ ಕಟ್ಟಡದ ಉದ್ಘಾಟನೆಯೊಂದಿಗೆ ಕಟ್ಟಡಗಳು, ಚಟುವಟಿಕೆಗಳು ವಿಸ್ತರಿಸಿದವು.

ನವೀಕೃತ ನೂತನ ರವೀಂದ್ರ ಮಂಟಪ, ಗೀತಾಂಜಲಿ, ಮುದ್ದಣ ಮಂಟಪಗಳಲ್ಲಿ ಸದಾ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಯಕ್ಷಗಾನ ಕೇಂದ್ರ, ಕನಕದಾಸ ಅಧ್ಯಯನ -ಸಂಶೋಧನ ಪೀಠ, ಗಾಂಧಿ ಅಧ್ಯಯನ ಕೇಂದ್ರ, ಟೀಚಿಂಗ್‌ ಲರ್ನಿಂಗ್‌ ಸೆಂಟರ್‌, ಸ್ವಾಮಿ ವಿವೇಕಾನಂದ ಚಿಂತನ ವೇದಿಕೆಗಳ ಕೊಡುಗೆ ಅಪಾರ. ಬಳಿಕ ಡಾ| ಪೈಯವರು ವಿವಿಧೆಡೆ ಆರಂಭಿಸಿದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಶೈಕ್ಷಣಿಕ ಸಾಧನೆಗೆ ಎಂಜಿಎಂ ಕಾಲೇಜು ಪ್ರೇರಣೆಯಾಗಿದೆ.

Advertisement

2010ರಲ್ಲಿ ವಜ್ರಮಹೋತ್ಸವದ ಸವಿ ನೆನಪಿಗಾಗಿ ಕಂಪ್ಯೂಟರ್‌ ವಿಜ್ಞಾನ ಹಾಗೂ ಸ್ನಾತಕೋತ್ತರ ತರಗತಿಗಳ ಅತ್ಯಾಧುನಿಕ ಸೌಲಭ್ಯ ಗಳನ್ನೊಳಗೊಂಡಿರುವ ವಜ್ರಸೌಧ ಕಟ್ಟಡ ನಿರ್ಮಾಣ, ವಾದಿರಾಜ ವಿದ್ಯಾರ್ಥಿನಿ ನಿಲಯದ ವಿಸ್ತರಣೆ, ಆಧುನಿಕ ಶೈಲಿಯ ಒಳಾಂಗಣ ಕ್ರೀಡಾಂಗಣ, ಹವಾನಿಯಂತ್ರಿತ ಆಡಿಯೋ ವೀಡಿಯೋ ಹಾಲ್ , ಎಲ್ಲಾ ಕಟ್ಟಡಗಳ ಮೇಲ್ಛಾವಣಿಗಳ ನವೀಕರಣ, ತರಗತಿ ಕೋಣೆಗಳಿಗೆ ನೆಲಹಾಸು ಇತ್ಯಾದಿ ಅಭಿವೃದ್ದಿ ಯೋಜನೆಗಳಾದವು.

ನೂತನ ಗ್ರಂಥಾಲಯದಲ್ಲಿ ಲಕ್ಷಕ್ಕೂ ಅಧಿಕ ಗ್ರಂಥಗಳು, ಡಾ| ಟಿ.ಎಂ.ಎ. ಪೈ ಜನ್ಮ ಶತಮಾನೋತ್ಸವ ಭವನ ಮಾಧವ ರಕ್ಷಾ, ವಿಸ್ತಾರ ಎ.ಎಲ್.ಎನ್‌. ರಾವ್‌ ಆಟದ ಮೈದಾನ, ಅತ್ಯಾಧುನಿಕ ಸೌಲಭ್ಯಗಳಿರುವ ಕಂಪ್ಯೂಟರ್‌ ವಿಜ್ಞಾನ ತರಗತಿಗಳು ಮತ್ತು ಲ್ಯಾಬ್‌, ಪ್ರಾಣಿ ಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಭಾಗದ ಅಪೂರ್ವವೆನಿಸುವ ಮ್ಯೂಸಿಯಂ, ಅಪರೂಪದ ಬೃಹತ್‌ ತಿಮಿಂಗಿಲದ ಅಸ್ಥಿಪಂಜರ, ರಸಾಯನ, ಭೌತಶಾಸ್ತ್ರದ ಸುಸಜ್ಜಿತ ಪ್ರಯೋಗಾಲಯಗಳು, ಪತ್ರಿಕೋದ್ಯಮ ವಿಭಾಗದ ನೂತನ ಸ್ಟುಡಿಯೋ, ಅಪರೂಪದ ಸಸ್ಯಗಳ ನ್ನೊಳಗೊಂಡಿರುವ ಬೊಟಾನಿಕಲ್‌ ಗಾರ್ಡನ್‌, ಟಿಶ್ಯು ಕಲ್ಚರ್‌ ಲ್ಯಾಬ್‌, ಕ್ಯಾಂಪಸ್‌ ಪ್ಲೇಸ್ಮೆಂಟ್ ಘಟಕ, ಇಂಡಸ್ಟ್ರಿಯಲ್‌ ಇಂಟರ್‌ಫೇಸ್‌ ಲ್ಯಾಬ್ , ಬಟರ್‌ ಫ್ಲೈಪಾರ್ಕ್‌, ಪ.ಪೂ. ವಿಜ್ಞಾನ ವಿಭಾಗಗಳ ಸುಸಜ್ಜಿತ ಪ್ರಯೋಗಾಲಯಗಳಿವೆ.

ಪದವಿ ಮತ್ತು ಪ.ಪೂ. ವಿಭಾಗದಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಕಂಪ್ಯೂಟರ್‌ ವಿಜ್ಞಾನ, ಪತ್ರಿಕೋದ್ಯಮ, ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ ಕಂಪ್ಯೂಟರ್‌ ವಿಜ್ಞಾನ, ಕಳೆದ ವರ್ಷ ಆರಂಭಗೊಂಡು ಉತ್ತಮ ಪ್ರಗತಿ ಪಥದಲ್ಲಿದಲ್ಲಿರುವ ಎಂಜಿಎಂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಂಪ್ಯೂಟರ್‌ ವಿಜ್ಞಾನ ವಿಷಯ ಸೇರಿದಂತೆ ಒಟ್ಟಾರೆ 3,170 ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ನ್ಯಾಕ್‌ ಮೌಲ್ಯಾಂಕನದಲ್ಲಿ ಕಾಲೇಜು ಎ+ (ಸಿಜಿಪಿಸಿಎ 3.36) ಶ್ರೇಣಿಯೊಂದಿಗೆ ವಿಶಿಷ್ಟ ಸ್ಥಾನಮಾನ ಪಡೆದಿದ್ದು, ನ್ಯಾಕ್‌ ತಂಡವು ಕಾಲೇಜನ್ನು ಅಕಾಡೆಮಿಕ್‌ ಆ್ಯಂಡ್‌ ಕಲ್ಚರಲ್‌ ಹಬ್‌ ಎಂದು ಗುರುತಿಸಿದೆ. ಹಳೆಯ ವಿದ್ಯಾರ್ಥಿ ಮಾಹೆ ವಿ.ವಿ. ಕುಲಾಧಿಪತಿ ಡಾ| ಟಿ. ರಾಮದಾಸ್‌ ಪೈ, ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷರಾಗಿ ಟಿ.ಸತೀಶ್‌ ಯು. ಪೈ, ಅಕಾಡೆಮಿಯ ರಿಜಿಸ್ಟ್ರಾರ್‌ ಆಗಿ ಡಾ| ಟಿ.ರಂಜನ್‌ ಪೈಯವರು ಮಾರ್ಗದರ್ಶನ ನೀಡುತ್ತಿದ್ದಾರೆ.

ಸ್ಥಾಪಕ ಪ್ರಾಂಶುಪಾಲ ಪ್ರೊ| ಸುಂದರರಾಯರು ಕಾಲೇಜನ್ನು ಕಟ್ಟಿ ಬೆಳೆಸಿದರು. ಬಳಿಕ ಪ್ರೊ| ಕು.ಶಿ. ಹರಿದಾಸ ಭಟ್ಟರು ಕಾಲೇಜಿನ ಘನತೆ ಗೌರವ ಹೆಚ್ಚಿಸಿದರು. ಅನಂತರದ ಪ್ರಾಂಶುಪಾಲರೂ ಕಾಲೇಜನ್ನು ಉತ್ತುಂಗಕ್ಕೇರಿಸಲು ಕೊಡುಗೆಗಳನ್ನು ನೀಡಿದ್ದು ಪ್ರಸ್ತುತ ಪ್ರೊ| ಸಿ. ಲಕ್ಷ್ಮೀನಾರಾಯಣ ಕಾರಂತ ಕಾಲೇಜಿನ, ಮಾಲತಿ ದೇವಿ ಪ.ಪೂ. ಕಾಲೇಜಿನ, ಡಾ| ದೇವಿದಾಸ ನಾಯ್ಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ.

ಇಂದು ಅಮೃತ ಮಹೋತ್ಸವ ಉದ್ಘಾಟನೆ
ಅಮೃತ ಮಹೋತ್ಸವದ ಸ್ಮರಣಾರ್ಥ ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷರಾಗಿದ್ದ, ಕಾಲೇಜಿನ ಹಳೆಯ ವಿದ್ಯಾರ್ಥಿ ದಿ| ಟಿ. ಮೋಹನದಾಸ ಪೈಯವರ ಹೆಸರಿನಲ್ಲಿ ಪ್ಲಾಟಿನಂ ಜುಬಿಲಿ ಕಟ್ಟಡ ನಿರ್ಮಾಣ, ಕೌಶಲಾಭಿವೃದ್ಧಿ ಕೇಂದ್ರದ ಸ್ಥಾಪನೆ, ಮುದ್ದಣ ಮಂಟಪದ ನವೀಕರಣ, 75 ಕಾರ್ಯಕ್ರಮಗಳ ಆಯೋಜನೆಗೆ ಸಂಕಲ್ಪಿಸಲಾಗಿದೆ. ಕಾಲೇಜಿನ ಅಮೃತ ಮಹೋತ್ಸವದ ಉದ್ಘಾಟನೆಯು ಸೆ. 23ರ ಬೆಳಗ್ಗೆ 11 ಗಂಟೆಗೆ ನೆರವೇರಲಿದ್ದು ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮಾಹೆ ವಿ.ವಿ. ಸಹಕುಲಾಧಿಪತಿ, ಅಕಾಡೆಮಿ ಅಧ್ಯಕ್ಷ ಡಾ| ಎಚ್‌.ಎಸ್‌.ಬಲ್ಲಾಳ್‌, ಬೆಂಗಳೂರಿನ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಅಧ್ಯಕ್ಷ ಡಾ| ಎಚ್‌. ಸುದರ್ಶನ ಬಲ್ಲಾಳ್‌ ಭಾಗವಹಿಸುವರು.

– ಡಾ| ಪುತ್ತಿ ವಸಂತ ಕುಮಾರ

 

Advertisement

Udayavani is now on Telegram. Click here to join our channel and stay updated with the latest news.

Next