ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಮೇ 28ರಂದು ಮಂಗಳೂರಿನ ಕೇಂದ್ರ ಮೈದಾನ, ಸುಳ್ಯ ತಾಲೂಕಿನ ಅಮರ ಸುಳ್ಯ ಹಾಗೂ ಉಳ್ಳಾಲದಲ್ಲಿ “ಅಮೃತ ಭಾರತಿಗೆ ಕನ್ನಡದಾರತಿ’ ಎಂಬ ದೇಶಭಕ್ತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ಜಿ. ಪಂ. ನೇತ್ರಾವತಿ ಸಭಾಂಗಣದಲ್ಲಿ ಜರಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶಭಕ್ತಿಯನ್ನು ಸಾರುವ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ಕಿರುಚಿತ್ರಗಳ ಪ್ರದರ್ಶನ ಮೊದಲಾದವುಗಳಿಗೆ ಪೂರಕ ಸಿದ್ಧತೆ ಮಾಡುವಂತೆ ಅವರು ಸೂಚನೆ ನೀಡಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ತಿಳಿಸಿಕೊಡುವ ಅಗತ್ಯವಿದೆ. ಕರ್ನಾಟಕದಲ್ಲಿ ಪ್ರಮುಖವಾಗಿ ಹೋರಾಟ ಮಾಡಿದ ಪ್ರಮುಖ 75 ಸ್ಥಳಗಳನ್ನು ಗುರುತಿಸಿ ಆ ಬಗ್ಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.
ಮೇ 28ರಂದು ಸಾವರ್ಕರ್ ಜಯಂತಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ ಜು. 1ರಿಂದ 15ರ ವರೆಗೆ “ಹೋರಾಟದ ನೆಲದಲ್ಲಿ ಒಂದು ದಿನ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಮುಖ ಹೋರಾಟ ನಡೆದ ರಾಜ್ಯದ ಈಸೂರು, ಸುರಪುರ, ಅಮರ ಸುಳ್ಯ, ವಿಧುರಾಶ್ವತ್ಥ, ಕಿತ್ತೂರು, ನಂದಗಡ ಸೇರಿದಂತೆ ಇತರ ಪ್ರಮುಖ ಸ್ಥಳಗಳಲ್ಲಿ ಪಿಕ್ನಿಕ್ ರೂಪದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೋಗುವಂತಹ ಕಾರ್ಯಕ್ರಮ ಇದಾಗಿರುತ್ತದೆ. ಅಲ್ಲಿ ಸ್ಥಳದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಕಿರುಚಿತ್ರಗಳನ್ನು ತೋರಿಸಲಾಗುವುದು ಎಂದು ವಿವರಿಸಿದರು.
4 ಕಡೆಗಳಿಂದ ರಥಯಾತ್ರೆ
ಆ.1ರಿಂದ 8ರ ವರೆಗೆ ರಾಜ್ಯದ 4 ಕಡೆಗಳಿಂದ ರಥಯಾತ್ರೆ ಆಯೋಜಿಸಲಾಗಿದೆ. ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿಯ ಜಿಲ್ಲಾ ಕೇಂದ್ರದಿಂದ ರಥಯಾತ್ರೆ ಹೊರಟು ರಾಜಧಾನಿ ತಲುಪಲಿದೆ. ಆ. 9ರಿಂದ ಮೂರು ದಿನ ಎಲ್ಲರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ತಿಳಿಸಲಾಗುವುದು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಅಪರ ಜಿಲ್ಲಾಧಿಕಾರಿ ಡಾ| ಕೃಷ್ಣಮೂರ್ತಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ| ಮೋಹನ್ ಆಳ್ವ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಶ್ರೀನಾಥ್, ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ ರೇವಣಕರ್, ಸಾಹಿತಿಗಳು ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿ.ಪಂ. ಸಿಇಒ ಡಾ| ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.