Advertisement

ಅಂಫಾನ್‌ ಪರಿಣಾಮ; ಜಿಲ್ಲಾದ್ಯಂತ ಉತ್ತಮ ಮಳೆ-ಹಲವೆಡೆ ಸಮಸ್ಯೆ

12:18 AM May 19, 2020 | Sriram |

ಮಂಗಳೂರು: ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಮಿಂಚು ಗುಡುಗು ಸಹಿತ ಭಾರೀ ಮಳೆಯಾಗಿದೆ. ಬಂಗಾಲಕೊಲ್ಲಿಯಲ್ಲಿ ಕಾಣಿಸಿಕೊಂಡ ಚಂಡಮಾರುತದ ಪರಿಣಾಮವಾಗಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಮನಪಾ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಪರಿಣಾಮವಾಗಿ ಪಂಪ್‌ವೆಲ್‌, ಕೊಟ್ಟಾರಚೌಕಿ, ಕೂಳೂರು, ಸಹಿತ ಮಂಗಳೂರಿನ ವಿವಿಧ ಭಾಗಗಳಲ್ಲಿ ಮಳೆನೀರು ರಸ್ತೆಯಲ್ಲಿಯೇ ನಿಂತು ಹಲವಾರು ಅನಾಹುತಗಳಿಗೂ ಕಾರಣ ವಾಯಿತು. ನಿರಂತರ ಮಳೆ ಹಾಗೂ ಗಾಳಿಯಿಂದಾಗಿ ನಂತೂರಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ವಿವಿಧೆಡೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದು, ವಿದ್ಯುತ್‌ ಕೈ ಕೊಟ್ಟಿತ್ತು. ನಗರದ ಬಹುತೇಕ ರಸ್ತೆಗಳಲ್ಲಿ ಮಳೆನೀರು ನಿಂತು ಸಂಚಾರವೂ ಅಸ್ತವ್ಯಸ್ತವಾಯಿತು.

ಗುರುಪುರದಲ್ಲಿ ಸೇತುವೆಯ ಕಾಮಗಾರಿಗೆ ಹಾಕಲಾಗಿದ್ದ ಮಣ್ಣು ಕೆಸರುಮಯವಾಗಿ ವಾಹನ ಸಂಚಾರಕ್ಕೂ ಸಮಸ್ಯೆಯಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.ಮಂಗಳೂರಿನಿಂದ ಕೊಟ್ಟಾರಚೌಕಿ ಭಾಗಕ್ಕೆ ತೆರಳುವ ಎಡಭಾಗದಲ್ಲಿ ಮಳೆನೀರು ರಸ್ತೆಯಲ್ಲಿ ನಿಂತು ವಾಹನ ಸಂಚಾ ರಕ್ಕೆ ತೊಂದರೆಯಾಯಿತು. ಈ ಮೂಲಕ ಮೊದಲ ಮಳೆಗೆ ಮಂಗಳೂರಿನ ನಿಜವಾದ ಚಿತ್ರಣ ಹೆದ್ದಾರಿ ಬದಿಯಲ್ಲಿ ಸೋಮವಾರ ದರ್ಶನವಾದಂತಾಯಿತು. ಮೇರಿಹಿಲ್‌ನ ಮೌಂಟ್‌ ಕಾರ್ಮೆಲ್‌ ಸ್ಕೂಲ್‌ನಿಂದ ಕೊಂಚಾಡಿ ವೆಂಕಟ್ರಮಣ ದೇವಸ್ಥಾನದವರೆಗೆ ರಸ್ತೆಯಲ್ಲಿ ಮಳೆನೀರು ನಿಂತು ದ್ವಿಚಕ್ರ ಸವಾರರು ಸಮಸ್ಯೆ ಎದುರಿಸಿದರು.

ಮಳೆನೀರು ನಿಂತು ಸಮಸ್ಯೆ ಎದುರಾದ ಸ್ಥಳಗಳಿಗೆ ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ದಿವಾಕರ ಪಾಂಡೇಶ್ವರ ಅವರು ಭೇಟಿ ನೀಡಿ ಪರಿಶೀಲಿಸಿದರು.

ವಲಸೆ ಕಾರ್ಮಿಕರು ಮಳೆಗೆ ಕಂಗಾಲು
ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಸೋಮ ವಾರ ಸುರಿದ ಭಾರೀ ಮಳೆಗೆ ತಮ್ಮ ಬ್ಯಾಗ್‌ಗಳೊಂದಿಗೆ ಒದ್ದೆಯಾಗಿ ಕಂಗಾಲಾದರು.

Advertisement

ಮಳೆ ಎದುರಿಸಲು ಸಿದ್ಧವಾಗಲಿ ಮಂಗಳೂರು
ಕಳೆದೆರೆಡು ವರ್ಷಗಳಲ್ಲಿ ಸಣ್ಣಪುಟ್ಟ ಮಳೆಗೆ ಮಂಗಳೂರು ಅಕ್ಷರಶಃ ಸಮಸ್ಯೆಯ ಕೂಪವಾದ ಹಲವು ಉದಾಹರಣೆಗಳಿವೆ. ರಾಜಕಾಲುವೆ, ಚರಂಡಿ ಸ್ವತ್ಛ ತೆಯನ್ನು ಪೂರ್ಣಗೊಳಿಸದ್ದ ರಿಂದ ಇಂತಹ ಸಮಸ್ಯೆ ಸೃಷ್ಟಿಯಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ ಅಧಿಕಾರಿಗಳು ಅತ್ತ ಕಡೆಯೇ ವಿಶೇಷವಾಗಿ ಗಮನಹರಿಸಿದ್ದರಿಂದ ರಾಜಕಾಲುವೆ, ಚರಂಡಿ ಸ್ವತ್ಛತೆಗೆ ಒತ್ತುನೀಡಲು ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಈ ಬಾರಿ ಮಳೆಗಾಲ ಮಂಗಳೂರಿಗೆ ಅಪಾಯ ತರುವ ಮುನ್ಸೂಚನೆಯೂ ಇದೆ.

ನೀರಿನ ಮಟ್ಟ ಹೆಚ್ಚಳ; ನದಿ ಪಾತ್ರದ ಜನತೆಗೆ ಎಚ್ಚರಿಕೆ
ಬಂಟ್ವಾಳ: ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕೂಡ ಹೆಚ್ಚಳವಾಗಿದೆ. ಹೀಗಾಗಿ ಶಂಭೂರು ಎಎಂಆರ್‌ಅಣೆಕಟ್ಟಿನಲ್ಲಿ ಸೋಮವಾರ 18.1ಮೀಟರ್‌ (ಗರಿಷ್ಠ ಮಟ್ಟ 18.9 ಮೀ.) ನೀರಿನ ಸಂಗ್ರಹವಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡಲಾಗುತ್ತದೆ. ಹೀಗಾಗಿ ನದಿ ಪಾತ್ರದ ಜನ ಎಚ್ಚರಿಕೆ ವಹಿಸುವಂತೆ ಎಎಂಆರ್‌ಅಣೆಕಟ್ಟಿನವರ ಪ್ರಕಟನೆ ತಿಳಿಸಿದೆ.

ಮಳೆಗಾಲಕ್ಕೆ
ಪ್ರತ್ಯೇಕ ಗ್ಯಾಂಗ್‌
ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು, ಕೊನೆಯ ಹಂತದಲ್ಲಿದೆ. ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಮಳೆಗಾಲದ ಸಂದರ್ಭ ನಿರ್ವಹಣೆಗಾಗಿ ಪ್ರತ್ಯೇಕ ಗ್ಯಾಂಗ್‌ ರಚಿಸಲಾಗುವುದು. ಜತೆಗೆ, ಹೆಲ್ಪ್ಲೈನ್‌ ಕೂಡ ಆರಂಭಿಸಲಾಗುವುದು.
-ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು, ಮನಪಾ

ಕೆಪಿಟಿ ಗೋದಾಮಿನಲ್ಲಿ ಮಳೆ
ನೀರು: ಅಕ್ಕಿ ಚೀಲಗಳ ಸ್ಥಳಾಂತರ
ಮಂಗಳೂರು: ನಗರದ ಕೆಪಿಟಿ ಆವರಣದಲ್ಲಿರುವ ಆಹಾರ ಇಲಾಖೆಯ ಗೋದಾಮಿಗೂ ಮಳೆ ನೀರು ನುಗ್ಗಿದ್ದು, ಗೋದಾಮಿನ ತಳ ಭಾಗದಲ್ಲಿದ್ದ ಅಕ್ಕಿ ಚೀಲಗಳು ನೀರಿನಲ್ಲಿ ತೋಯ್ದಿವೆ. ಅನಂತರ ಅಕ್ಕಿ ಚೀಲಗಳನ್ನು ಸ್ಥಳಾಂತರಿಸಲಾಗಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.

ಮುಡಿಪು-ಮೂಳೂರು ರಸ್ತೆ ಕೆಸರುಮಯ; ಸಂಚಾರ ಸಂಕಷ್ಟ
ಸೋಮವಾರ ಸುರಿದ ಮಳೆಗೆ ವರ್ಷ ದಿಂದ ನಡೆಯುತ್ತಿರುವ ಕೆಐಎಡಿಬಿಐಯ ಮುಡಿಪು-ಮೂಳೂರು ರಸ್ತೆ ಕಾಮಗಾರಿಕಾರ ಣದಿಂದಾಗಿ 1 ಕಿ.ಮೀ. ವ್ಯಾಪ್ತಿ ವಾಹನ ಸಂಚಾರವೇ ದುಸ್ತರವಾಗಿದೆ. ಡಾಮರು ರಸ್ತೆಯನ್ನು ಅಗೆದು ಮಣ್ಣಿನ ರಸ್ತೆ ವಿಸ್ತ ರಣೆ  ಮಾಡಲಾಗುತ್ತಿದೆ. ಮಳೆ ಯಿಂದಾಗಿ ರಸ್ತೆ ಕೆಸರುಮಯವಾಗಿದೆ. ಹಲವು ದ್ವಿಚಕ್ರ ವಾಹನ ಸವಾರರು ಇಲ್ಲಿ ಸ್ಕಿಡ್‌ ಆಗಿ ಬಿದ್ದಿದ್ದಾರೆ. ಒಂದೇ ಮಳೆಗೆ ಈ ಪರಿಸ್ಥಿತಿಯಾದರೆ, ಮುಂದೆ ಕೆಲವೇ ದಿನದಲ್ಲಿ ಎದುರಾಗುವ ಮಳೆ ಸಂದರ್ಭ ಮುಡಿಪು-ಇರಾ-ಮಂಚಿ ಸಂಪರ್ಕ ರಸ್ತೆ ಹಲವು ದಿನ ಸಂಪೂರ್ಣ ಬಂದ್‌ ಆಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೈಕಂಪಾಡಿ ಎಪಿಎಂಸಿ ಯಾರ್ಡ್‌: ಮಳೆ ನೀರಿಗೆ ಕೊಚ್ಚಿ ಹೋದ ತರಕಾರಿ; ಅಪಾರ ನಷ್ಟ
ಮಂಗಳೂರು: ಸೋಮವಾರ ಮುಂಜಾನೆ ಸುರಿದ ಧಾರಾಕಾರ ಮಳೆಯ ಪರಿಣಾಮ ಬೈಕಂಪಾಡಿ ಎಪಿಎಂಸಿ ಯಾರ್ಡ್‌ನಲ್ಲಿ ಸಗಟು ವ್ಯಾಪಾರಿಗಳು ವ್ಯಾಪಾರಕ್ಕಾಗಿ ತಂದಿಳಿಸಿದ್ದ ತರಕಾರಿ ಮತ್ತು ಹಣ್ಣು ಹಂಪಲುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ.

ಸಗಟು ವ್ಯಾಪಾರಿಗಳು ತರಿಸಿದ್ದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಎಪಿಎಂಸಿ ಯಾರ್ಡ್‌ನಲ್ಲಿ ಇಳಿಸಿ ರಿಟೇಲ್‌ ವ್ಯಾಪಾರಿಗಳಿಗೆ ಮಾರಾಟ ಮಾಡಲು ವ್ಯವಹಾರ ಆರಂಭಿಸುತ್ತಿದ್ದಂತೆ ಧಾರಾಕಾರ ಮಳೆ ಮತ್ತು ಗಾಳಿ ಬಂದಿದ್ದು, ಇದರಿಂದ ಲಾರಿಗಳಿಂದ ಇಳಿಸಿದ ಸರಕು ನೀರಿನಲ್ಲಿ ತೊಯ್ದದ್ದಲ್ಲದೆ, ಬಹಳಷ್ಟು ತರಕಾರಿ, ಹಣ್ಣುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಎಪಿಎಂಸಿ ಯಾರ್ಡ್‌ನಲ್ಲಿ ಮೂಲಸೌಕರ್ಯಗಳಿಲ್ಲದೆ ನೆಲದಲ್ಲಿಯೇ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ತಂದು ಸುರಿಯಬೇಕಾಗಿದೆ. ಸಗಟು ವ್ಯಾಪಾರಿಗಳಿಗೆ ಒಟ್ಟು ಸುಮಾರು 50 ಲಕ್ಷ ರೂ. ನಷ್ಟವಾಗಿದೆ. ಮಳೆಯಿಂದ ತರಕಾರಿ ನಷ್ಟದ ಬಗ್ಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮಂಗಳೂರು ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಮುಸ್ತಫಾ ಅವರು ಉದಯವಾಣಿಗೆ ತಿಳಿಸಿದ್ದಾರೆ.

ಮೂಲ ಸೌಲಭ್ಯ ಕಲ್ಪಿಸಲಿ
ಧಾರಾಕಾರ ಮಳೆಯಿಂದ ತರಕಾರಿ, ಹಣ್ಣು ಹಂಪಲುಗಳು ಹಾನಿಯಾದ ಬಗ್ಗೆ ಮತ್ತು ತಾವೂ ತೊಯ್ದು ಸಂಕಷ್ಟ ಅನುಭವಿಸಿದ ಬಗ್ಗೆ ಹಲವಾರು ಮಂದಿ ಸಗಟು ವ್ಯಾಪಾರಸ್ಥರು ನನಗೆ ಫೋನ್‌ ಮಾಡಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಇಲ್ಲವೇ ಬೈಕಂಪಾಡಿಯಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಬೇಕು.
– ಜೆ.ಆರ್‌. ಲೋಬೋ, ಮಾಜಿ ಶಾಸಕ.

ಎಲ್ಲರಿಗೂ ಗೋದಾಮಿನಲ್ಲಿ ವ್ಯವಸ್ಥೆ
ಹಣ್ಣು ಹಂಪಲು ವ್ಯಾಪಾರಿಗಳಿಗೆ ಎಪಿಎಂಸಿ ಯಾರ್ಡ್‌ನ ಕ್ರಾಸ್‌ ರೋಡ್‌ನ‌ಲ್ಲಿರುವ ಗೋದಾಮು ಗಳಲ್ಲಿ ವ್ಯಾಪಾರ ಮಾಡಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ತರಕಾರಿ ವ್ಯಾಪಾರಿಗಳಿಗೂ ಇಲ್ಲಿನ ಗೋದಾಮುಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಲಿಸ್ಟ್‌ ತಯಾರಾಗಿದೆ. ಶೀಘ್ರದಲ್ಲಿಯೇ ಅವರೆಲ್ಲರಿಗೆ ಅಲ್ಲಿಗೆ ಸ್ಥಳಾಂತರಗೊಳ್ಳಲು ಅನುಮತಿ ನೀಡಲಾಗುವುದು.ಅನಂತರ ಈಗಿರುವ ತೆರೆದ ಹರಾಜು ವೇದಿಕೆಯಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥೆಯನ್ನು ಶೀಘ್ರ ಮಾಡಲಾಗುವುದು.
– ಡಾ | ವೈ. ಭರತ್‌ ಶೆಟ್ಟಿ, ಸ್ಥಳೀಯ ಶಾಸಕ.

Advertisement

Udayavani is now on Telegram. Click here to join our channel and stay updated with the latest news.

Next