Advertisement
ಬುಧವಾರ ಮಧ್ಯಾಹ್ನದ ವೇಳೆಗೆ ಪಶ್ಚಿಮ ಬಂಗಾಲದ ದಿಘಾದಲ್ಲಿ ಅಪ್ಪಳಿಸಿದ ಚಂಡಮಾರುತ ಅನಂತರದಲ್ಲಿ, ಇನ್ನಷ್ಟು ವೇಗ ಪಡೆದುಕೊಂಡಿತು. ಸಂಜೆ ವೇಳೆಗೆ 190 ಕಿ.ಮೀ. ವೇಗ ಪಡೆದುಕೊಂಡ ಪರಿಣಾಮ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಪಶ್ಚಿಮ ಬಂಗಾಲ ಮತ್ತು ಒಡಿಶಾದಲ್ಲಿ ಅಪಾರ ಹಾನಿಯಾಗಿದೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿದ್ದರೆ, ಇನ್ನು ಕೆಲವೆಡೆ ಮರಗಳು ಬುಡಮೇಲಾಗಿವೆ. ಸಾವಿರಾರು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಅತ್ತ ಬಾಂಗ್ಲಾದೇಶದ ಕರಾವಳಿಯಲ್ಲೂ ಚಂಡಮಾರುತದ ಅಬ್ಬರದಿಂದಾಗಿ ಭಾರೀ ಹಾನಿಯುಂಟಾಗಿದೆ. ಚಂಡಮಾರುತದ ಪರಿಣಾಮ ಅಸ್ಸಾಂ ಮತ್ತು ಮೇಘಾಲಯಗಳಿಗೂ ವ್ಯಾಪಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಲದ ದಿಘಾದಲ್ಲಿ ಚಂಡಮಾರುತ ಅಪ್ಪಳಿಸಿದಾಗ ವೇಗ ಗಂಟೆಗೆ 160-170 ಕಿ.ಮೀ.ನಷ್ಟಿತ್ತು. ಆದರೆ ಸಂಜೆ 7 ಗಂಟೆ ವೇಳೆಗೆ ಕೋಲ್ಕತಾಕ್ಕೆ ಪ್ರವೇಶಿಸುವ ಹೊತ್ತಿಗೆ ವೇಗ 190 ಕಿ.ಮೀ.ಗೆ ಹೆಚ್ಚಳವಾಗಿದೆ. ಇದರಿಂದಾಗಿ ಕೋಲ್ಕತಾ ಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ ಮುಖ್ಯಸ್ಥ ಎಸ್. ಎನ್. ಪ್ರಧಾನ್, ಎನ್‌ಡಿಆರ್‌ಎಫ್ 20 ತಂಡಗಳು ಒಡಿಶಾದಲ್ಲಿ ರಸ್ತೆಯಲ್ಲಿ ಬಿದ್ದಿರುವ ಮರಗಳನ್ನು ತೆರವು ಮಾಡುವ ಕೆಲಸದಲ್ಲಿ ನಿರತ ವಾಗಿವೆ ಎಂದು ಹೇಳಿದರು. ಹಾಗೆಯೇ ಪಶ್ಚಿಮ ಬಂಗಾಲದಲ್ಲಿ 19 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದು ತಿಳಿಸಿದರು.
Related Articles
ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಲ ಮತ್ತು ಒಡಿಶಾ ರಾಜ್ಯಗಳ ಜನಜೀವನ ತತ್ತರಿಸಿದೆ. ಪಶ್ಚಿಮ ಬಂಗಾಲದ ಕೋಲ್ಕತಾ, ಉತ್ತರ ಮತ್ತು ದಕ್ಷಿಣ 24 ಪರಗಣ, ಈಸ್ಟ್ ಮಿಡ್ನಾಪುರ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಇಲ್ಲಿ ಎಲ್ಲಿ ನೋಡಿದರೂ ಛಾವಣಿ ಹಾರಿಹೋಗಿರುವ ಮನೆಗಳು, ಬುಡಮೇಲಾಗಿರುವ ಮರಗಳು ಮತ್ತು ಮುರಿದುಬಿದ್ದಿರುವ ವಿದ್ಯುತ್ ಕಂಬಗಳೇ ಕಾಣಸಿಗುತ್ತಿವೆ ಎಂದು ಸ್ಥಳೀಯ ಸರಕಾರದ ಮೂಲಗಳು ತಿಳಿಸಿವೆ.
Advertisement
ಅತ್ತ ಒಡಿಶಾದ ಪುರಿ, ಖುರ್ದಾ, ಜಗತ್‌ಸಿಂಗ್‌ಪುರ, ಕಟಕ್, ಕೇಂದ್ರಪಾರ, ಜೈಪುರ, ಗಂಜಾಮ್, ಭದ್ರಕ್ ಮತ್ತು ಬಾಲಸೋರ್‌ನಲ್ಲಿ ಅಪಾರ ಪ್ರಮಾಣದ ಗಾಳಿ, ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ರಾಜ್ಯದಲ್ಲಿ ಬೆಳೆದು ನಿಂತಿರುವ ಬೆಳೆ, ಮೂಲಸೌಕರ್ಯಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ ಎಂದು ಒಡಿಶಾ ಸರಕಾರದ ಮೂಲಗಳು ಹೇಳಿವೆ. ಇದಷ್ಟೇ ಅಲ್ಲ, ಚಂಡಮಾರುತ ಬೀಸುತ್ತಿರುವುದರಿಂದ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು, ಈಸ್ಟ್ ಮಿಡ್ನಾಪುರ ಜಿಲ್ಲೆಗಳಕರಾವಳಿಯಲ್ಲಿ 5 ಮೀಟರ್‌ಗಳಷ್ಟು ಎತ್ತರಕ್ಕೆ ಸಮುದ್ರದ ಅಲೆಗಳು ಬರಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಲಕ್ಷಾಂತರ ಮಂದಿ ಸ್ಥಳಾಂತರ
ಪಶ್ಚಿಮ ಬಂಗಾಲದಲ್ಲಿ 5 ಲಕ್ಷ, ಒಡಿಶಾದಲ್ಲಿ 1.6 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸ ಲಾಗಿದೆ. ಪಶ್ವಿಮ ಬಂಗಾಲದಲ್ಲಿ ಮುನ್ನೆಚ್ಚರಿಕೆ ಕ್ರಮ ವಾಗಿ 24 ಪರಗಣ ಜಿಲ್ಲೆಗಳ ಹಲವು ಹಳ್ಳಿಗಳ ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಒಡಿಶಾ ದಲ್ಲಿ 20 ಹಾಗೂ ಪ.ಬಂಗಾಲದಲ್ಲಿ 19 ರಕ್ಷಣಾ ಪಡೆಗಳು ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸುತ್ತಿವೆ. ವಾಯು, ನೌಕಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಎಲ್ಲೆಲ್ಲೂ ಕತ್ತಲು
ಇಲ್ಲಿನ ಪರಿಸ್ಥಿತಿ ಯುದ್ಧ ಮುಗಿದ ಬಳಿಕದ ರಣಾಂಗಣದಂತಾಗಿದೆ. ಎಲ್ಲಿ ನೋಡಿದರೂ ಮನೆ, ಮರಗಳು ಉರುಳಿ ಬಿದ್ದಿವೆ. ಸಾವಿರಾರು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಎಲ್ಲೆಲ್ಲೂ ಕತ್ತಲು ಆವರಿಸಿರುವುದರಿಂದ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಮುಂಗಾರು ಪ್ರವೇಶ ವಿಳಂಬ
ಚಂಡಮಾರುತದ ಪ್ರಭಾವದಿಂದಾಗಿ ಪಶ್ಚಿಮ ಬಂಗಾಲ ಮತ್ತು ಒಡಿಶಾದಲ್ಲಿ ಗುರುವಾರವೂ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಅಂಫಾನ್‌ನಿಂದಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸುವುದು ವಿಳಂಬವಾಗಲಿದೆ. ಹವಾಮಾನ ಇಲಾಖೆ ಪ್ರಕಾರ ಜೂ.5ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ. ರೈಲು, ವಿಮಾನ ಸ್ಥಗಿತ
ಅಂಫಾನ್ ಚಂಡಮಾರುತದ ಪ್ರಭಾವದಿಂದ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ. ಹೌರಾ-ಹೊಸದಿಲ್ಲಿ ಎಸಿ ವಿಶೇಷ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.