Advertisement

ವಿನಾಶ ಸೃಷ್ಟಿಸಿ, ಕ್ಷೀಣಿಸಿದ ಅಂಫಾನ್‌

01:32 AM May 24, 2020 | Sriram |

ಕೋಲ್ಕತಾ: ವಿನಾಶಕಾರಿ ಅಂಫಾನ್‌ ಚಂಡಮಾರುತದ ಅಬ್ಬರ ಸಂಪೂರ್ಣವಾಗಿ ಕ್ಷೀಣಿಸಿದೆಯಾದರೂ, ಅದು ಉಂಟು ಮಾಡಿರುವ ಅಲ್ಲೋಲ ಕಲ್ಲೋಲದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಮೃತರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ಸುಮಾರು 1 ಲಕ್ಷ ಮನೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ.

Advertisement

ಕೋಲ್ಕತಾ, ಹೂಗ್ಲಿ, ಹೌರಾ ಸೇರಿದಂತೆ ದಕ್ಷಿಣದ 24 ಪರಗಣ ಜಿಲ್ಲೆಗಳು ಹೆಚ್ಚು ಬಾಧೆಗೊಳಗಾಗಿರುವ ಪ್ರಾಂತ್ಯಗಳು. ಈ ಪ್ರದೇಶಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು, ಮೊಬೈಲ್‌ ಟವರ್‌ಗಳು ನೆಲಕ್ಕುರುಳಿದ್ದರಿಂದ ಜನಜೀವನ ಅಸ್ತವ್ಯಸ್ತ ವಾಗಿದೆ ಹಾಗೂ ಸಂಚಾರ ಸ್ಥಗಿತವಾಗಿದೆ. ಲಕ್ಷಾಂತರ ಮನೆಗಳಲ್ಲಿ ವಿದ್ಯುತ್‌ ಕಡಿತವಾಗಿದೆ. ಚಂಡಮಾರುತ, ಮಳೆ ನಿಂತು ಮೂರ್‍ನಾಲ್ಕು ದಿನ ಕಳೆದರೂ ಜನಜೀವನವನ್ನು ಸಹಜ ಸ್ಥಿತಿಗೆ ತರಲು ಸ್ಥಳೀಯ ಆಡಳಿತ ವಿಫ‌ಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲವೆಡೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.

ವಿಶ್ವದ ಅತಿ ದೊಡ್ಡ ಆಲದ ಮರಕ್ಕೆ ಹಾನಿ
ಚಂಡಮಾರುತದಿಂದ ಹೌರಾ ಜೈವಿಕ ಉದ್ಯಾನದಲ್ಲಿರುವ ವಿಶ್ವದ ಅತಿ ದೊಡ್ಡ ಆಲದ ಮರಕ್ಕೆ ಹಾನಿಯಾಗಿದೆ. ಈ ಆಲದ ಮರ ಸುಮಾರು 342 ವರ್ಷಗಳಷ್ಟು ಹಳೆಯದ್ದಾಗಿದ್ದು, 49.2 ಅಡಿಯಷ್ಟು ದಪ್ಪದಾದ ಕಾಂಡವನ್ನು ಹೊಂದಿದೆ. ಮರದ ರೆಂಬೆ-ಕೊಂಬೆಗಳು 1.08 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಚಂಡಮಾರುತದಿಂದ ರೆಂಬೆಗಳು ಮುರಿದು ಬಿದ್ದಿವೆ. ಭಾರತೀಯ ಜೈವಿಕ ಸರ್ವೆ ಇಲಾಖೆಯು, ಈ ಆಲದ ಮರವನ್ನು ತನ್ನ ಲಾಂಛನವನ್ನಾಗಿ ಬಳಸಿಕೊಳ್ಳುತ್ತಿದೆ.

ಸಂತ್ರಸ್ತರ ಭೇಟಿಗೆ ಅಡ್ಡಿ: ಬಿಜೆಪಿ ಆರೋಪ
ಅಂಫಾನ್‌ ಬಾಧಿತ ಪ್ರದೇಶಗಳ ಪರಿಶೀಲನೆ ಹಾಗೂ ಪರಿಹಾರ ಸಾಮಗ್ರಿ ವಿತರಿಸಲು ತೆರಳಿದ ತಮ್ಮನ್ನು ಪೊಲೀಸರು ತಡೆದಿದ್ದಾರೆಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಆರೋಪಿಸಿದ್ದಾರೆ. ತಮ್ಮನ್ನು ತಡೆದಿರುವ ಪೊಲೀಸರು, ಸಂತ್ರಸ್ಥರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿರುವ ಆಡಳಿತಾರೂಢ ಟಿಎಂಸಿ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿದ್ದಾರೆ. ಈ ತಾರತಮ್ಯ ಧೋರಣೆ ಮುಂದುವರಿದರೆ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next