ಸುರತ್ಕಲ್: ಇಲ್ಲಿನ ಕುಳಾಯಿಯ ಬಳಿಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅಮೋನಿಯಾ ಸೋರಿಕೆಯಾಗಿ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಇಲ್ಲಿನ ವಿಜಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅವಗಢ ನಡೆದಿದ್ದು, ಸ್ಥಳಕ್ಕೆ ಹಲವು ಅಗ್ನಿ ಶಾಮಕ ದಳಗಳು ದೌಡಾಯಿಸಿದೆ.
ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಘಟನೆ ನಡೆದಿದ್ದು, ಸ್ಥಳೀಯರಿಗೆ ಉಸಿರು ಕಟ್ಟಿದ ಅನುಭವವಾಗಿದೆ. ಕೂಡಲೇ ಸ್ಥಳೀಯ ನಿವಾಸಿಗಳನ್ನು ಮನೆಯಿಂದ ಹೊರಗೆ ದೂರದ ಪ್ರದೇಶಕ್ಕೆ ಕಳುಹಿಸಲಾಯಿತು. ಹಲವರಿಗೆ ಉಸಿರಾಟದ ಸಮಸ್ಯೆ ಮತ್ತು ಕಣ್ಣುಉರಿಯಂತಹ ಅನುಭವವಾಗಿದೆ.
ಮಂಜುಗಡ್ಡೆ ತಯಾರಿಕೆಗೆ ಬಳಸುವ ಅಮೋನಿಯಾ ಇದಾಗಿದ್ದು, ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಅಮೋನಿಯಾ ಸೋರಿಕೆಯ ಪರಿಣಾಮ ಪರಿಸರದ ಮರಗಿಡಗಳು ಬಾಡಿ ಹೋಗಿವೆ.
ಸ್ಥಳಕ್ಕೆ ರಾಜ್ಯ ಅಗ್ನಿ ಶಾಮಕ ದಳ, ಎಂಸಿಎಫ್ ಮತ್ತು ಎನ್ ಎಂಪಿಟಿಯ ಅಗ್ನಿ ಶಾಮಕ ದಳಗಳು ಆಗಮಿಸಿದೆ. ಎಂಸಿಎಫ್ ನ ತುರ್ತು ರಕ್ಷಣಾ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದೆ.