ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದೇವಿಯರಾದ ದ್ಯಾಮವ್ವದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವವು ನಿಜ ಜೇಷ್ಠ ಮಾಸದ ಕಾರಹುಣ್ಣಿಮೆಯ ದಿನ (ಜೂ. 28) ನಡೆಯಲಿದೆ. ಈ ಜಾತ್ರೆ ಪ್ರತಿ 30 ವರ್ಷಗಳಿಗೊಮ್ಮೆ ಜರುಗುತ್ತಿದ್ದು, ಒಮ್ಮೆ ಜಾತ್ರೆ ನಡೆದ ನಂತರ 27ರಿಂದ 30 ವರ್ಷಗಳ ಒಳಗಾಗಿ ಮತ್ತೆ ಜಾತ್ರೆ ನಡೆಯಬೇಕಾಗಿದೆ. ಒಟ್ಟು 11 ದಿನಗಳ ಕಾಲ ನಡೆಯುವ ಜಾತ್ರೆಯ ಅವ ಧಿಯಲ್ಲಿ ಅಮ್ಮಿನಬಾವಿ ಜೊತೆಗೆ ಕರಡಿಗುಡ್ಡ, ತಿಮ್ಮಾಪುರ, ಮರೇವಾಡ ಹಾಗೂ ಕೌಲಗೇರಿ ಗ್ರಾಮಗಳಲ್ಲಿಯೂ ಜಾತ್ರೆಯ ನಿಯಮಗಳನ್ನು ಪಾಲಿಸಲಾಗುತ್ತಿದೆ. 11 ದಿನಗಳ ಕಾಲ ಐದೂ ಗ್ರಾಮಗಳಲ್ಲಿ ರೊಟ್ಟಿ ಸದ್ದು ಕೇಳಿ ಬರುವುದಿಲ್ಲ. ಎಲ್ಲೆಡೆ ಹಬ್ಬದ ವಾತಾವರಣವಿರುತ್ತದೆ.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ಎಲ್ಲ ಪ್ರಮುಖ ಪೂಜಾ ಕೈಂಕರ್ಯಗಳು ನಡೆಯಲಿವೆ. ಜೊತೆಗೆ ಗ್ರಾಮದ ದೇಸಾಯಿ, ದೇಶಪಾಂಡೆ ಹಾಗೂ ಕಟ್ಟಿಮನಿ ಮನೆತನಗಳ ಹಿರಿಯರು ಜಾತ್ರೆಯ ನಿರ್ದಿಷ್ಟ ಸೇವೆಗಳನ್ನು ನಿರ್ವಹಿಸುವರು.
ಹೊಸ ತೇರು: ಪ್ರತಿ ಸಲದ ಜಾತ್ರೆಗೆ ಹೊಸದಾಗಿ ಕಟ್ಟಿಗೆಯ ಗಡ್ಡಿತೇರು(ರಥ) ಸಿದ್ಧಪಡಿಸಿಯೇ ರಥೋತ್ಸವ ನಡೆಸಬೇಕಾಗುತ್ತದೆ. ಪ್ರಸ್ತುತ ಜಾತ್ರಾ ಮಹೋತ್ಸವಕ್ಕೆ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಗೆಯ ಗಡ್ಡಿತೇರು ಸಿದ್ಧಗೊಳ್ಳುತ್ತಿದೆ. ಈ ಹೊಸ ರಥದಲ್ಲಿಯೇ ದೇವಿಯರ ಕಟ್ಟಿಗೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ರಥೋತ್ಸವವನ್ನು ಜರುಗಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜೂ.
28ರಂದು ನಡೆಯುವ ರಥೋತ್ಸವ ಗ್ರಾಮದ ಕೊನೆ ಹಂತದಲ್ಲಿರುವ ಗ್ರಾಮದೇವಿಯರ ಪಾದಗಟ್ಟಿಯಲ್ಲಿ ಸಂಪನ್ನಗೊಳ್ಳುತ್ತದೆ. ಅಲ್ಲಿಯೇ ಜು. 8ರ ವರೆಗೆ ನಿತ್ಯವೂ ಅಲಂಕಾರ ಪೂಜೆ ಜರುಗುತ್ತದೆ.
ಉಡಿತುಂಬುವ ಕಾರ್ಯ: 11 ದಿನಗಳ ಕಾಲ ನಿತ್ಯವೂ ಉಡಿ ತುಂಬುವ ಕಾರ್ಯ ಸಡಗರದಿಂದ ಜರುಗುತ್ತದೆ. ಜೂ. 29ರಿಂದ ಜು. 4ರ ವರೆಗೆ ಅಮ್ಮಿನಬಾವಿ ಗ್ರಾಮದ ಎಲ್ಲ ಓಣಿಗಳ ಭಕ್ತರು, ನಂತರ ಜು. 5ರಿಂದ 8ರ ವರೆಗೆ ಮರೇವಾಡ, ತಿಮ್ಮಾಪುರ, ಕರಡಿಗುಡ್ಡ ಹಾಗೂ ಕೌಲಗೇರಿ ಗ್ರಾಮಗಳ ಭಕ್ತ ಸಂಕುಲ ಉಡಿ ತುಂಬಲಿದೆ.
ಶಿಥಿಲಗೊಂಡಿದ್ದ ಗ್ರಾಮದೇವಿಯವರ ದೇವಾಲಯದ ಕಟ್ಟಡ ತೆರವುಗೊಳಿಸಿ 28 ಲಕ್ಷ ರೂ. ವೆಚ್ಚದಲ್ಲಿ ಶಿಲಾಮಯ ದೇವಾಲಯ ನಿರ್ಮಿಸಿದ್ದು, ಜಾತ್ರಾ ಮಹೋತ್ಸವಕ್ಕೆ ಮತ್ತಷ್ಟು ಮೆರಗು ತುಂಬಿದೆ. ಈ ಹಿಂದಿನ ಜಾತ್ರಾ ಮಹೋತ್ಸವ 1991ರ ಜೂ. 26ರಂದು ಜರುಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.