ಸೇಡಂ: ನಾಡಿನ ಹೆಸರಾಂತ ಸಾಹಿತಿಗಳಿಗೆ ರಾಜ್ಯ ಮಟ್ಟದ “ಅಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೊಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಪ್ರಶಸ್ತಿ ಪ್ರದಾನ ಮಾಡಿದರು.
ಕೆ.ಎ. ದಯಾನಂದ ಅವರ ಹಾದಿಗಲ್ಲು(ಆತ್ಮಕಥನ), ಕಿರಣ್ ಭಟ್ ಅವರ ರಂಗ ಕೈರಳಿ (ಪ್ರವಾಸ ಕಥನ), ಕಲಬುರಗಿಯ ಶ್ರೀನಿವಾಸಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ (ವೈಚಾರಿಕ ಸಂಕಲನ), ನದೀಂ ಸನದಿ ಅವರ “ಹುಲಿಯ ನೆತ್ತಿಯ ನೆರಳು’ ಮತ್ತು ಡಾ|ಸತ್ಯಮಂಗಲ ಮಹಾದೇವ ಅವರ “ಪಂಚವರ್ಣದ ಹಂಸ’ ಕವನ ಸಂಕಲನಕ್ಕೆ 20ನೇ ವರ್ಷದ “ಅಮ್ಮ’ಪ್ರಶಸ್ತಿ ಲಭಿಸಿದೆ.
ಜೊತೆಗೆ ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ, ರೇಖಾಬಾಯಿ ಅರಗಲಮನಿ ಅವರಿಗೆ “ಅಮ್ಮ’ ಗೌರವ ಪುರಸ್ಕಾರ ನೀಡಿಸತ್ಕರಿಸಲಾಯಿತು. ನಾಗಪ್ಪಮುನ್ನೂರ ಸ್ಮರಣಾರ್ಥ ಇಬ್ಬರು ಮಹಿಳೆಯರಿಗೆ ಸ್ವಾವಲಂಬಿ ಬದುಕು ಸಾಗಿಸಲು ಹೊಲಿಗೆ ಮಷಿನ್ ವಿತರಿಸಲಾಯಿತು.
ಇದೇ ವೇಳೆ ಹಾಡು ಕರ್ನಾಟಕ ಖ್ಯಾತಿಯ ಬಸವಪ್ರಸಾದ ಕಾಚೂರ ತಮ್ಮ ಹಾಡಿನ ಮೋಡಿ ಮೂಲಕ ಮನರಂಜಿಸಿದರು. ಅಮ್ಮನ ಹಾಡು ಹಾಡುವ ಮೂಲಕ ನೆರೆದವರ ಮನತಣಿಸಿದರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ| ಶರಣಪ್ರಕಾಶ ಪಾಟೀಲ, ನಾಗೇಂದ್ರಪ್ಪ ಅಲ್ಲೂರ, ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರ ವೇದಿಕೆಯಲ್ಲಿದ್ದರು. ಶ್ರೀ ಕೊತ್ತಲಬಸವೇಶ್ವರ ಸಂಸ್ಥಾನದ ಪೀಠಾಧಿ ಪತಿ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಸಿದ್ಧಪ್ರಸಾದರೆಡ್ಡಿ ಮುನ್ನೂರ ವಂದಿಸಿದರು.