Advertisement
“ಪ್ರಜ್ಞಾನಂದ ಇಂದು ಈ ಎತ್ತರಕ್ಕೆ ಏರಬೇಕಾದರೆ ಅವನ ತಾಯಿಯೇ ಕಾರಣ. ನನ್ನ ಪತ್ನಿ ನಾಗಲಕ್ಷ್ಮೀ ಪ್ರಜ್ಞಾ ನಂದನ ಪಾಲಿನ ವಿಜಯಲಕ್ಷ್ಮೀ. ಅವನ ಅಕ್ಕ ವೈಶಾಲಿಯ ಚೆಸ್ ಯಶಸ್ಸಿಗೂ ಅಮ್ಮನೇ ಪ್ರೇರಣೆ’ ಎಂಬುದಾಗಿ ರಮೇಶ್‌ಬಾಬು ಯಾವುದೇ ಮುಲಾಜಿಲ್ಲದೆ ಹೇಳಿದರು.
Related Articles
Advertisement
ಬ್ಯಾಂಕ್ ಮೆನೇಜರ್ ಆಗಿರುವ ರಮೇಶ್‌ಬಾಬು ಅವರಿಗೆ ಚೆಸ್ ಬಗ್ಗೆ ತಿಳಿದದ್ದು ಅತ್ಯಲ್ಪ. ಮಕ್ಕಳಿಬ್ಬರಿಗೂ ಅಂಟಿದ ಟಿವಿ ಹುಚ್ಚನ್ನು ಬಿಡಿಸುವ ಸಲು ವಾಗಿ ಚೆಸ್‌ಬೋರ್ಡ್ ತಂದು ಕೊಟ್ಟಿ ದ್ದರು. ನೀವು ಚೆಸ್ ಆಡುತ್ತ ಉಳಿಯಿರಿ ಎಂದು ಆಜ್ಞೆ ಮಾಡಿದ್ದರು. ಈ ರೀತಿಯಾಗಿ ಮಕ್ಕಳಿಬ್ಬರಿಗೆ ಅಂಟಿಕೊಂಡ ಚೆಸ್ ನಂಟು ಇಂದು ಇವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಪ್ರತಿಭಾವಂತೆಯಾಗಿರುವ ವೈಶಾಲಿ ವುಮೆನ್ಸ್ ಗ್ರ್ಯಾನ್‌ಮಾಸ್ಟರ್ ಎಂಬುದನ್ನು ಮರೆಯುವಂತಿಲ್ಲ.
“ಪ್ರಾಮಾಣಿಕವಾಗಿ ಹೇಳುತ್ತೇನೆ, ನನಗೆ ಚೆಸ್ ಬಗ್ಗೆ ವಿಶೇಷವಾಗಿ ಏನೂ ತಿಳಿದಿಲ್ಲ. ಆದರೆ ಪ್ರತಿಯೊಂದು ಪಂದ್ಯಾವಳಿಯಲ್ಲೂ ಅವನ ಪ್ರಗತಿಯನ್ನು ಗಮನಿಸುತ್ತ ಬರುತ್ತಿದ್ದೆ. ಪ್ರಜ್ಞಾ (ಅಪ್ಪ ಪ್ರೀತಿಯಿಂದ ಕರೆಯುವುದು) ಸಾಧನೆ ನಮ್ಮೆಲ್ಲ ಪಾಲಿಗೊಂದು ಹೆಮ್ಮೆ’ ಎಂದು ರಮೇಶ್‌ಬಾಬು ಹೇಳಿದರು.
“ನಾವು ದಿನವೂ ಮಗನೊಂದಿಗೆ ಸಂಪರ್ಕದಲ್ಲಿರುತ್ತೇವೆ. ಆದರೆ ನಿನ್ನೆಯ ಸೆಮಿಫೈನಲ್ ಗೆಲುವಿನ ಬಳಿಕ ಮಗನೊಂದಿಗೆ ಮಾತನಾಡಲಿಲ್ಲ. ಮ್ಯಾರಥಾನ್ ಸ್ಪರ್ಧೆಯ ಬಳಿಕ ಅವನು ಬಹಳ ಬಳಲಿರುತ್ತಾನೆ. ನಾವು ಅವನ ಆಟದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅದೇನಿದ್ದರೂ ಕೋಚ್‌ಗೆ ಸಂಬಂಧಪಟ್ಟದ್ದು. ಹೊತ್ತಿಗೆ ಸರಿಯಾಗಿ ತಿಂದು ಆರೋಗ್ಯ ಕಾಪಾಡಿಕೊ ಎಂದಷ್ಟೇ ಸಲಹೆ ಮಾಡುತ್ತೇನೆ…’ ಎಂದರು.
ಚೆನ್ನೈಯಲ್ಲಿ “ಬ್ಲೂಮ್ ಚೆಸ್ ಅಕಾಡೆಮಿ’ ನಡೆಸುತ್ತಿರುವ ಪ್ರಜ್ಞಾನಂದ ಅವರ ಮೊದಲ ಕೋಚ್ ಎಸ್. ತ್ಯಾಗರಾಜನ್ ಕೂಡ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾನಂದ-ಕಾರ್ಲ್ಸನ್ ಮೊದಲ ಪಂದ್ಯ ಡ್ರಾಬಾಕು (ಅಜರ್‌ಬೈಜಾನ್): ಭಾರತದ ಜಿಎಂ ಆರ್. ಪ್ರಜ್ಞಾನಂದ ಮತ್ತು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ನಡುವೆ ಮಂಗಳವಾರ ನಡೆದ ಫಿಡೆ ವಿಶ್ವಕಪ್ ಚೆಸ್ ಫೈನಲ್‌ನ ಮೊದಲ ಪಂದ್ಯ ಡ್ರಾಗೊಂಡಿದೆ. ಬಿಳಿ ಕಾಯಿಗಳೊಂದಿಗೆ ಆಟ ಆರಂಭಿಸಿದ 18 ವರ್ಷದ ಪ್ರಜ್ಞಾನಂದ, ಅನುಭವಿ ಹಾಗೂ ಉನ್ನತ ರೇಟಿಂಗ್‌ನ ಎದುರಾಳಿ, 5 ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್ಸನ್ ವಿರುದ್ಧ ಪರಿಣಾಮಕಾರಿ ಪ್ರದರ್ಶನವನ್ನೇ ನೀಡಿದರು. 35 ನಡೆಗಳ ಬಳಿಕ ಡ್ರಾ ಸಾಧಿಸಿದರು. ಇದು 2 ಸುತ್ತುಗಳ ಕ್ಲಾಸಿಕಲ್ ಸೀರಿಸ್ ಆಗಿದ್ದು, ಬುಧವಾರ ದ್ವಿತೀಯ ಸುತ್ತಿನ ಪಂದ್ಯ ನಡೆಯಲಿದೆ. ಕಾರ್ಲ್ಸನ್ ಬಿಳಿ ಕಾಯಿಯೊಂದಿಗೆ ಆಡಲಿಳಿಯಲಿದ್ದಾರೆ. ಫೈನಲ್ ನಿರೀಕ್ಷೆಯೇ ಇರಲಿಲ್ಲ “ನಾನಿಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎದುರಿಸುತ್ತೇನೆಂದು ಭಾವಿಸಿರಲೇ ಇಲ್ಲ. ಏಕೆಂದರೆ ಅವರನ್ನು ಎದುರಿಸುವುದೇನಿದ್ದರೂ ಫೈನಲ್‌ನಲ್ಲಿ ಮಾತ್ರವೇ ಸಾಧ್ಯವಿತ್ತು. ನಿಜ ಹೇಳಬೇಕೆಂದರೆ ನಾನಿಲ್ಲಿ ಫೈನಲ್ ನಿರೀಕ್ಷೆಯನ್ನೇ ಹೊಂದಿರಲಿಲ್ಲ. ಆದರೆ ಈವರೆಗೆ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದಿದ್ದೇನೆ. ಮುಂದೇನಾಗುತ್ತದೊ ನೋಡೋಣ…’ ಎಂಬುದು ಪ್ರಜ್ಞಾನಂದ ಅವರ ಅನಿಸಿಕೆ. ಕ್ಯಾಂಡಿಡೇಟ್ಸ್ ಚೆಸ್‌ಗೆ ಆಯ್ಕೆ
ವಿಶ್ವಕಪ್ ಫೈನಲ್‌ಗೆ ಲಗ್ಗೆ ಇರಿಸುವ ಮೂಲಕ ಪ್ರಜ್ಞಾನಂದ ಪ್ರತಿಷ್ಠಿತ “ಕ್ಯಾಂಡಿಡೇಟ್ಸ್ ಚೆಸ್’ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಈ ಟೂರ್ನಿಯಲ್ಲಿ ಆಡಲಿರುವ ಭಾರತದ ಕೇವಲ 2ನೇ ಆಟಗಾರ. ವಿಶ್ವನಾಥನ್ ಆನಂದ್ ಮೊದಲಿಗ. ಕ್ಯಾಂಡಿಡೇಟ್ಸ್ ಚೆಸ್ ಕೇವಲ 8 ಆಟಗಾರರು ಪಾಲ್ಗೊಳ್ಳುವ ಪಂದ್ಯಾವಳಿ. ವಿಶ್ವ ಚೆಸ್ ಪಂದ್ಯಾವಳಿ ಯಲ್ಲಿ ಮೊದಲ 3 ಸ್ಥಾನ ಪಡೆಯು ವವರು ಈ ಕೂಟಕ್ಕೆ ಪ್ರವೇಶ ಪಡೆಯು ತ್ತಾರೆ. ಇದಕ್ಕಾಗಿ ಇನ್ನೂ ಕೆಲವು ಅರ್ಹತಾ ಪಂದ್ಯಾವಳಿ ಇರುತ್ತದೆ. ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ 2024ರ ಎ. 2ರಿಂದ 25ರ ತನಕ ಕೆನಡಾದ ಟೊರಂಟೊದಲ್ಲಿ ನಡೆಯಲಿದೆ. ಚದುರಂಗ ಚತುರನಿಗೆ ಕ್ಯಾಸ್ಪರೋವ್ ಅಭಿನಂದನೆ
ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿರುವ ಜಿಎಂ ಆರ್. ಪ್ರಜ್ಞಾನಂದ ಅವರಿಗೆ ಎಲ್ಲ ಕಡೆಗಳಿಂದ ಪ್ರಶಂಸೆಗಳ ಸುರಿಮಳೆ ಹರಿದುಬಂದಿದೆ. ಇದರಲ್ಲಿ “64 ಚೌಕ’ಗಳ ಲೆಜೆಂಡ್ರಿ ಆಟಗಾರ ಗ್ಯಾರಿ ಕ್ಯಾಸ್ಪರೋವ್, ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಮೊದಲಾದವರು ಸೇರಿದ್ದಾರೆ. “ಪ್ರಜ್ಞಾನಂದ ಮತ್ತು ಅವರ ಅಮ್ಮ ನಿಗೆ ಅಭಿನಂದನೆಗಳು. ಪ್ರತಿಯೊಂದು ಪಂದ್ಯಾವಳಿಯ ವೇಳೆಯೂ ಹೆಮ್ಮೆಯ ತಾಯಿ ಅವರೊಂದಿಗೆ ಇರುತ್ತಾರೆ. ಇದು ಅವರಿಗೆ ವಿಶೇಷ ರೀತಿಯ ಬೆಂಬಲವಾಗಿದೆ. ಚೆನ್ನೈ ಇಂಡಿಯನ್ ನ್ಯೂಯಾರ್ಕ್‌ನ ಇಬ್ಬರು ಕೌಬಾಯ್‌ಗಳನ್ನು ಸೋಲಿಸಿದ್ದಾರೆ. ಕಠಿನ ಸನ್ನಿವೇಶದಲ್ಲೂ ದೃಢಚಿತ್ತದಿಂದ ಆಡುವುದು ಪ್ರಜ್ಞಾನಂದ ಅವರ ಹೆಗ್ಗಳಿಕೆ’ ಎಂಬುದಾಗಿ ಕ್ಯಾಸ್ಪರೋವ್ ಪ್ರಶಂಸಿಸಿದ್ದಾರೆ. “ಎಂಥ ಅದ್ಭುತ ಆಟ. ನೀವು ಭಾರತಕ್ಕೆ ಹೆಮ್ಮೆ ಮೂಡಿಸಿದ್ದೀರಿ. ಅತ್ಯಂತ ಯಶಸ್ವಿ ಚೆಸ್ ವೃತ್ತಿಜೀವನ ನಿಮ್ಮದಾಗಲಿ’ ಎಂಬುದು ತೆಂಡುಲ್ಕರ್ ಅವರ ಹಾರೈಕೆ ಆಗಿದೆ.
ಸೆಮಿಫೈನಲ್‌ನಲ್ಲಿ ವಿಶ್ವದ 3ನೇ ರ್‍ಯಾಂಕಿಂಗ್ ಆಟಗಾರ ಅಮೆರಿಕದ ಜಿಎಂ ಫೇಬಿಯಾನೊ ಕರುವಾನ ಅವರನ್ನು ಮಣಿಸುವ ಮೂಲಕ 18 ವರ್ಷದ ಆರ್. ಪ್ರಜ್ಞಾನಂದ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಈ ಹಂತಕ್ಕೇರಿದ ಭಾರತದ ಅತೀ ಕಿರಿಯ ಚೆಸ್‌ಪಟು ಎಂಬ ಹಿರಿಮೆ ಇವರದಾಗಿದೆ.