Advertisement

ಆಮ್ಲ, ಡುಸೆನ್‌ಫಿಫ್ಟಿ: 241ಕ್ಕೆ ನಿಂತ ಆಫ್ರಿಕಾ ಓಟ

12:06 AM Jun 20, 2019 | Team Udayavani |

ಬರ್ಮಿಂಗ್‌ಹ್ಯಾಮ್‌: ನ್ಯೂಜಿಲ್ಯಾಂಡ್‌ ಎದುರು ಮಹತ್ವದ ವಿಶ್ವಕಪ್‌ ಪಂದ್ಯವನ್ನು ಆಡುತ್ತಿರುವ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 241 ರನ್‌ ಗಳಿಸಿ ಸವಾಲೊಡ್ಡಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಈ ಪಂದ್ಯ ಮಳೆಯಿಂದಾಗಿ 49 ಓವರ್‌ಗಳಿಗೆ ಸೀಮಿತಗೊಂಡಿದೆ.

Advertisement

ಬ್ಯಾಟಿಂಗಿಗೆ ತುಸು ಕಠಿನವಾದ ಟ್ರ್ಯಾಕ್‌ನಲ್ಲಿ ದಕ್ಷಿಣ ಆಫ್ರಿಕಾ ತೀರಾ ನಿಧಾನ ಹಾಗೂ ಎಚ್ಚರಿಕೆಯ ಆಟವಾಡಿತು. ಬಿಗ್‌ ಹಿಟ್ಟರ್‌ ಕ್ವಿಂಟನ್‌ ಡಿ ಕಾಕ್‌ ಕೇವಲ 5 ರನ್‌ ಮಾಡಿ ನಿರ್ಗಮಿಸಿದ್ದು ಹರಿಣಗಳ ವೇಗಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಡಿ ಕಾಕ್‌ ಅವರನ್ನು ಬೌಲ್ಟ್ ಕ್ಲೀನ್‌ಬೌಲ್ಡ್‌ ಮಾಡಿದರು. ಆಗ ಸ್ಕೋರ್‌ 9 ರನ್‌ ಆಗಿತ್ತು.

ಆಮ್ಲ, ಡುಸೆನ್‌ ಆಧಾರ
ಹಾಶಿಮ್‌ ಆಮ್ಲ, ಮತ್ತು ರಸ್ಸಿ ವಾನ್‌ ಡರ್‌ ಡುಸೆನ್‌ ಅರ್ಧ ಶತಕ ಬಾರಿಸುವ ಮೂಲಕ ತಂಡಕ್ಕೆ ಆಧಾರವಾದರು. ಆಮ್ಲ 83 ಎಸೆತಗಳಿಂದ 55 ರನ್‌ ಹೊಡೆದರೆ (4 ಬೌಂಡರಿ), ಡುಸೆನ್‌ 64 ಎಸೆತ ಎದುರಿಸಿ ಔಟಾಗದೆ 67 ರನ್‌ ಬಾರಿಸಿದರು (2 ಬೌಂಡರಿ, 3 ಸಿಕ್ಸರ್‌).

ದ್ವಿತೀಯ ವಿಕೆಟಿಗೆ ಜತೆಗೂಡಿದ ಆಮ್ಲ ಮತ್ತು ನಾಯಕ ಫಾ ಡು ಪ್ಲೆಸಿಸ್‌ (23) ಭರ್ತಿ 50 ರನ್‌ ಒಟ್ಟುಗೂಡಿಸಿದರು. ಡು ಪ್ಲೆಸಿಸ್‌ ಅವರನ್ನು ಬೌಲ್ಡ್‌ ಮಾಡಿದ ಫ‌ರ್ಗ್ಯುಸನ್‌ ಈ ಜೋಡಿಯನ್ನು ಬೇರ್ಪಡಿಸಿದರು.

ಹಾಶಿಮ್‌ ಆಮ್ಲ-ಐಡನ್‌ ಮಾರ್ಕ್‌ರಮ್‌ 3ನೇ ವಿಕೆಟಿಗೆ 52 ರನ್‌ ಪೇರಿಸಿದರು. ಮಾರ್ಕ್‌ರಮ್‌ ಗಳಿಕೆ 38 ರನ್‌. 55 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಸೇರಿತ್ತು.

Advertisement

ರಸ್ಸಿ ವಾನ್‌ ಡರ್‌ ಡುಸೆನ್‌ ಮತ್ತು ಡೇವಿಡ್‌ ಮಿಲ್ಲರ್‌ ಸೇರಿಕೊಂಡು ಕ್ರೀಸ್‌ ಆಕ್ರಮಿಸಿಕೊಳ್ಳುವುದರೊಂದಿಗೆ ಆಫ್ರಿಕಾ ನಿಧಾನವಾಗಿ ಚೇತರಿಕೆ ಕಾಣ ತೊಡಗಿತು. ಇವರಿಬ್ಬರಿಂದ 5ನೇ ವಿಕೆಟಿಗೆ 72 ರನ್‌ ಒಟ್ಟುಗೂಡಿತು. ಮಿಲ್ಲರ್‌ 37 ಎಸೆತ ಎದುರಿಸಿ 36 ರನ್‌ ಹೊಡೆದರು (2 ಬೌಂಡರಿ, 1 ಸಿಕ್ಸರ್‌).

ಈ ಪಂದ್ಯದ ವೇಳೆ ಹಾಶಿಮ್‌ ಆಮ್ಲ ಏಕದಿನದಲ್ಲಿ 8 ಸಾವಿರ ರನ್‌ ಪೂರ್ತಿಗೊಳಿಸಿದರು. ಅವರು ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದ ವಿಶ್ವದ 2ನೇ ಕ್ರಿಕೆಟಿಗ. ಇದಕ್ಕಾಗಿ ಆಮ್ಲ 176 ಇನ್ನಿಂಗ್ಸ್‌ ತೆಗೆದುಕೊಂಡರು. ವಿರಾಟ್‌ ಕೊಹ್ಲಿ 175 ಇನ್ನಿಂಗ್ಸ್‌ಗಳಿಂದ ಈ ಸಾಧನೆ ಮಾಡಿದ್ದು ದಾಖಲೆಯಾಗಿದೆ. ಕಾಕತಾಳೀಯವೆಂಬಂತೆ, ಕೊಹ್ಲಿ 2 ವರ್ಷಗಳ ಹಿಂದೆ ಇದೇ ಅಂಗಳದಲ್ಲಿ 8 ಸಾವಿರ ರನ್‌ ಪೂರೈಸಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next