Advertisement

ಪುತ್ತೂರು: ಅಣಬೆ ವಿವಾದಕ್ಕೆ ಅಂತ್ಯ ಹಾಡೀತೇ ಶಾ ಎಚ್ಚರಿಕೆ

01:16 AM Feb 16, 2023 | Team Udayavani |

ಪುತ್ತೂರು: ಕೇಂದ್ರ ಗೃಹಸಚಿವ, ಬಿಜೆಪಿಯ ಚುನಾವಣ ಚಾಣಕ್ಯ ಅಮಿತ್‌ ಶಾ ಮಂಗಳೂರಿನಲ್ಲಿ ನಡೆಸಿದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಕೆಲವು ಕ್ಷೇತ್ರ ಗಳಲ್ಲಿ ಶಾಸಕರ ವಿರುದ್ಧ ವ್ಯಕ್ತವಾಗಿರುವ ಅಸಮಾ ಧಾನಗಳನ್ನು ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಉದ್ಭವಿಸಿರುವ ಅಣಬೆ ಹೇಳಿಕೆ ವಿವಾದವನ್ನು ಶಮನಗೊಳಿಸಲೇಬೇಕಾದ ಅನಿವಾರ್ಯ ಬಿಜೆಪಿಗೆ ಎದುರಾಗಿದೆ.

Advertisement

ಫೆ. 11ರಂದು ಪುತ್ತೂರಿಗೆ ಆಗಮಿಸಿದ ಅಮಿತ್‌ ಶಾಗೆ ಶುಭಕೋರಿ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಹೆಸರಿನಲ್ಲಿ ಅವರ ಬೆಂಬಲಿಗರು ಅಳವಡಿಸಿದ್ದ ಬ್ಯಾನರ್‌ಗಳಲ್ಲಿ ಶಾಸಕ ಸಂಜೀವ ಮಠಂದೂರು ಅವರನ್ನು ಹೊರತುಪಡಿಸಿ ಉಳಿದ ಬಿಜೆಪಿ ಮುಖಂಡರ ಭಾವಚಿತ್ರ ಮುದ್ರಿಸಲಾಗಿತ್ತು. ಫೆ. 8ರಂದು ಈ ವಿಚಾರದಲ್ಲಿ ಪತ್ರಕರ್ತರು ಶಾಸಕರನ್ನು ಪ್ರಶ್ನಿಸಿದಾಗ, “ಮಳೆ ಬಂದಾಗ ಅಣಬೆ ಹುಟ್ಟುತ್ತದೆ, ಆದರೆ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ. ಮಳೆ ಹೋದಾಗ ಹೋಗುತ್ತದೆ…’ ಎಂದು ಪ್ರತಿಕ್ರಿಯಿಸಿದ್ದರು. ಇದು ಅರುಣ್‌ ಕುಮಾರ್‌ ಪುತ್ತಿಲ ಅವರನ್ನುದ್ದೇಶಿಸಿ ಹೇಳಿದ್ದು ಎಂದು ಪುತ್ತಿಲ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿಯೂ ಬಳಿಕ ಬಹಿರಂಗವಾಗಿಯೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಉಭಯ ನಾಯಕರ ಬೆಂಬಲಿಗರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಭದ್ರಕೋಟೆಯೊಳಗಿನ ಈ ಬೆಳವಣಿಗೆ ಭಾರೀ ಸಂಚಲನ ಮೂಡಿಸಿತ್ತು.

ಶಾ ಎಚ್ಚರಿಕೆ ಸಂದೇಶ
ಫೆ. 12ರಂದು ಮಂಗಳೂರಿನಲ್ಲಿ ಶಾ ನೇತೃತ್ವದಲ್ಲಿ ನಡೆದ 6 ಜಿಲ್ಲೆಗಳ ಪಕ್ಷದ ನಾಯಕರ ಸಭೆಯಲ್ಲಿ ಕರಾವಳಿಯ ಕೆಲವು ಶಾಸಕರ ಬಗ್ಗೆ ಇರುವ ಅಸಮಾಧಾನ ಪ್ರಸ್ತಾವಿಸಿದ್ದರು. ಅದನ್ನು ಕೂಡಲೇ ಶಮನಗೊಳಿಸುವಂತೆ ಶಾ ಖಡಕ್‌ ಸೂಚನೆ ನೀಡಿದ್ದರು. ಹೀಗಾಗಿ ಪುತ್ತೂರಿನ ಘಟನೆ ಬಗ್ಗೆ ಕೂಡ ಪಕ್ಷದ ವರಿಷ್ಠರು ಕಣ್ಣಿಟಿರುವುದು ದೃಢವಾಗಿದ್ದು, ಭಿನ್ನ ಧ್ವನಿ ಶಮನ ಮಾಡಬೇಕಾದ ಅನಿವಾರ್ಯ ಶಾಸಕರ ಮುಂದಿದೆ. ಪುತ್ತೂರಿನಲ್ಲಿ ನಡೆದ ಅಮಿತ್‌ ಶಾ ಕಾರ್ಯಕ್ರಮದಲ್ಲಿ ಎರಡು ತಂಡದವರೂ ಭಾಗಿಯಾಗಿದ್ದರೂ ಅಣಬೆ ಪದ ಬಳಕೆಯ ಅನಂತರದ ಬೆಳವಣಿಗೆ ಬೂದಿ ಮುಚ್ಚಿದ ಕೆಂಡದಂತಿರುವುದು ಸುಳ್ಳಲ್ಲ. ಶಾ ನಿರ್ಗಮನದ ಬಳಿಕವೂ ಇದೇ ವಿಚಾರವಾಗಿ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸಂಘದ ನೆರವಿನ ಸಾಧ್ಯತೆ?
ಬಿಕ್ಕಟ್ಟು ಶಮನ ಶಾಸಕರಿಂದ ಅಸಾಧ್ಯ ಎಂದೆನಿಸಿದರೆ ಹಿರಿಯರ ನೆರವು ಪಡೆದುಕೊಳ್ಳಿ ಎಂದೂ ಶಾ ಸಲಹೆ ನೀಡಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಎರಡು ಗುಂಪುಗಳು ಮುಖಾಮುಖೀ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವುದು ಅಸಾಧ್ಯ ಎನ್ನುವ ಸ್ಥಿತಿ ಇರುವುದರಿಂದ “ಅಣಬೆ’ ವಿವಾದವನ್ನು ಸರಿಪಡಿಸಲು ಸಂಘ ಪರಿವಾರದ ಹಿರಿಯರ ನೆರವು ಪಡೆಯಲು ಬಿಜೆಪಿ ಪ್ರಯತ್ನಿಸಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next