ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 30-31ರಂದು ಮತ್ತೆ ಪಶ್ಚಿಮ ಬಂಗಾಲಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಬಹುದು ಎನ್ನಲಾಗಿದೆ. ಅಮಿತ್ ಶಾ ಕಳೆದ ತಿಂಗಳಷ್ಟೇ ಪಶ್ಚಿಮ ಬಂಗಾಲಕ್ಕೆ ತೆರಳಿದ್ದರು, ಆ ವೇಳೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸುವೇಂದು ಅಧಿಕಾರಿ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸಹ ಜನವರಿ 9ರಂದು ಪಶ್ಚಿಮ ಬಂಗಾಲಕ್ಕೆ ತೆರಳುವ ಸಾಧ್ಯತೆ ಇದೆ. ಕಳೆದ ತಿಂಗಳು ಅವರು ರಾಜ್ಯದಲ್ಲಿ ರೋಡ್ ಶೋ ನಡೆಸಿದ್ದಾಗ, ಕಿಡಿಗೇಡಿಗಳು ಅವರ ಕಾರಿನ ಮೇಲೆ ಇಟ್ಟಿಗೆಗಳಿಂದ ದಾಳಿ ಮಾಡಿದ್ದರು. ಆಗ ತೃಣ ಮೂಲ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಮುಂಬರಲಿರುವ ಪಶ್ಚಿಮ ಬಂಗಾಲದ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳಿಂದ ಸಿದ್ಧತೆ ಭರದಿಂದ ಸಾಗಿದೆಯಾದರೂ, ಬಿಜೆಪಿ ಪ್ರಚಾರ ಕಾರ್ಯಗಳಲ್ಲಿ, ಕಾರ್ಯತಂತ್ರ ರಚನೆಯಲ್ಲಿ ಸದ್ಯಕ್ಕೆ ಬಹಳ ಮುಂದಿದೆ.
ಕಟ್ಟಡದಲ್ಲಿ 22 ಕಚ್ಚಾ ಬಾಂಬ್ ಪತ್ತೆ
ಕೋಲ್ಕತಾದಲ್ಲಿ ಶನಿವಾರ ಕಟ್ಟಡವೊಂದರಲ್ಲಿ ಭಾರೀ ಪ್ರಮಾಣದ ಕಚ್ಚಾ ಬಾಂಬ್‌ಗಳು ಪತ್ತೆಯಾಗಿವೆ. ಸೇನಾ ಗುಪ್ತಚರ ಮಾಹಿತಿಯ ಆಧಾರದಲ್ಲಿ ಕಟ್ಟಡವೊಂದರ ಪರಿಶೀಲನೆ ನಡೆಸಿದ ಕೋಲ್ಕತಾ ಪೊಲಿಸರು ಈ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸರ್ ಸೈಯ್ಯದ್ ಅಹ್ಮದ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನುಮಾನಾಸ್ಪದ ಚಲನವಲನಗಳು ನಡೆಯುತ್ತಿವೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಒಂದು ರೂಮಿನಲ್ಲಿ 22 ಕಚ್ಚಾ ಬಾಂಬ್‌ಗಳು ಪತ್ತೆಯಾಗಿವೆ. ಈ ಬಾಂಬ್‌ಗಳನ್ನೆಲ್ಲ ಸುರಕ್ಷಿತ ಜಾಗಕ್ಕೊಯ್ದು ನಿಷ್ಕ್ರಿಯಗೊಳಿಸಲಾಗಿದ್ದು, ಕೃತ್ಯದಲ್ಲಿ ಶಾಮೀಲಾದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.