Advertisement

ಕಾಂಗ್ರೆಸ್‌ ಕೋಟೆ ಸಂಡೂರಿಗೆ ನಾಳೆ ಅಮಿತ್‌ ಶಾ ಆಗಮನ

12:45 PM Feb 22, 2023 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಬಾರಿ ಕಾಂಗ್ರೆಸ್‌ ಜಯಗಳಿಸಿರುವ ಸಂಡೂರು ಕ್ಷೇತ್ರಕ್ಕೆ ಗುರುವಾರ ಬಿಜೆಪಿಯ ಚುನಾವಣಾ “ಚಾಣಕ್ಯ’ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ಸಂಡೂರು ಕ್ಷೇತ್ರ ಇಂದಿಗೂ ಕಾಂಗ್ರೆಸ್‌ ಭದ್ರ ಕೋಟೆ. ರಾಜಮನೆತನದ ಘೋರ್ಪಡೆ ಕುಟುಂಬ ಆರಂಭದಿಂದಲೂ ಹಿಡಿತ ಸಾಧಿಸಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ 1957ರ ಮೊದಲ ಚುನಾವಣೆಯಿಂದ ಹಿಡಿದು 2018ರವರೆಗೆ ನಡೆದ ಒಟ್ಟು 15 ಚುನಾವಣೆಗಳಲ್ಲಿ ಕಾಂಗ್ರೆಸ್‌ 13 ಬಾರಿ ಜಯಗಳಿಸಿ ದಾಖಲೆ ನಿರ್ಮಿಸಿದೆ. 1985ರಲ್ಲಿ ಸಿಪಿಎಂ ಪಕ್ಷದ ಯು. ಭೂಪತಿ ಹಾಗೂ 2004ರಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವ ಎಸ್‌. ಸಂತೋಷ್‌ ಲಾಡ್‌ ಇಲ್ಲಿ ಗೆದ್ದಿ ದ್ದರು. ಮರುವಿಂಗಡಣೆ ಬಳಿ ಕ ಎಸ್‌ಟಿ ಮೀಸಲು ಕ್ಷೇತ್ರ ವಾಗಿದ್ದು 2008, 2013, 2018ರಲ್ಲಿ ನಡೆದ ಚುನಾವಣೆಗಳಲ್ಲಿ ಸಂತೋಷ್‌ ಲಾಡ್‌ ಆಪ್ತ ಈ. ತುಕಾರಾಂ ಹ್ಯಾಟ್ರಿಕ್‌ ಗೆಲುವು ದಾಖಲಿಸಿ ಕಾಂಗ್ರೆಸ್‌ ಗೆಲುವಿನ ಪರಂಪರೆ ಮುಂದುವರಿಸಿದ್ದಾರೆ. ಈಗ ಅಮಿತ್‌ ಶಾ ಭೇಟಿ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿಸಲು ರಣತಂತ್ರ ರೂಪಿಸಲಾಗುತ್ತಿದೆ.

Advertisement

ರಾಜ್ಯ ವಿಧಾನಸಭೆಗೆ ಶೀಘ್ರದಲ್ಲೇ ನಡೆಯಲಿರುವ ಸಾರ್ವತ್ರಿಕ ಚುನಾವಣೆ ದೃಷ್ಟಿಕೋನದಿಂದ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಗುರುವಾರ ಸಂಡೂರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಬಳ್ಳಾರಿ-ವಿಜಯನಗರ ಜಿಲ್ಲೆಗಳ ಪದಾಧಿ ಕಾರಿಗಳು, ಬೂತ್‌ ಸಮಿತಿ ಸದಸ್ಯರು, ಕಾರ್ಯಕರ್ತರು ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಅಮಿತ್‌ ಶಾ ಆಗಮನದಿಂದ ಅಖಂಡ ಬಳ್ಳಾರಿ ಜಿಲ್ಲೆಯ ಪಕ್ಷದ ಕಾರ್ಯಕರ್ತರಿಗೆ ಹೊಸ ಹುರುಪು, ಶಕ್ತಿ ತುಂಬಿದಂತಾಗಲಿದೆ.
ಗೋನಾಳ್‌ ಮುರಹರಗೌಡ, ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷರು

ಗುಜರಾತ್‌ ಮಾದರಿಯ ತಂತ್ರ

ಶೀಘ್ರದಲ್ಲೇ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಗುಜರಾತ್‌ ಮಾದರಿ ತಂತ್ರಗಾರಿಕೆ ಅನುಸರಿಸಿ ಎದುರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಡೂರಿನಲ್ಲಿ ಬೃಹತ್‌ ಬಹಿರಂಗ ಸಭೆ ನಡೆಸಲಿರುವ ಅಮಿತ್‌ ಶಾ, ಈ ಸಭೆಗೆ ಜನಸಾಮಾನ್ಯರ ಬದಲಿಗೆ ಬೂತ್‌ ಕಮಿಟಿ ಸದಸ್ಯರು, ಪೇಜ್‌ ಪ್ರಮುಖರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಂತೆ ಸೂಚಿಸಿದ್ದಾರೆ.

ಇದರಿಂದ ಸಭೆ-ಸಮಾರಂಭಗಳಿಗೆ ಜನರನ್ನು ಕರೆತರುವ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕುವುದರ ಜತೆಗೆ ಸ್ಥಳೀಯ ಮುಖಂಡರು ಪಕ್ಷವನ್ನು ತಳಮಟ್ಟದಲ್ಲಿ ಎಷ್ಟರ ಮಟ್ಟಿಗೆ ಸಂಘಟಿಸಿದ್ದಾರೆ ಎಂಬುದೂ ತಿಳಿಯಲಿದೆ. ಬೂತ್‌ ಕಮಿಟಿ ಅಧ್ಯಕ್ಷರು, ಪೇಜ್‌ ಪ್ರಮುಖರು ಒಂದಷ್ಟು ಶ್ರಮವಹಿಸಿದರೆ ರಾಜ್ಯದಲ್ಲೂ ಪಕ್ಷವನ್ನು ಗುಜರಾತ್‌ ಮಾದರಿಯಲ್ಲಿ ಅಧಿಕಾರಕ್ಕೆ ತರಬಹುದು ಎಂಬುದು ಕೇಂದ್ರದ ವರಿಷ್ಠರ ಲೆಕ್ಕಾಚಾರ. ಹಾಗಾಗಿ ಅವರೇ ನೇರವಾಗಿ ಕಣಕ್ಕಿಳಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇದೇ ವೇಳೆ ಜಿಂದಾಲ್‌ನ ಹಯಾತ್‌ ಹೋಟೆಲ್‌ನಲ್ಲಿ ಅಮಿತ್‌ ಶಾ ಕೋರ್‌ಕಮಿಟಿ ಸಭೆ ನಡೆಸಲಿದ್ದು, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಬಿಜೆಪಿಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಶ್ರೀರಾಮುಲು ಹೆಸರು ಕೇಳಿಬರುತ್ತಿರುವುದು, ಅಮಿತ್‌ ಶಾ ಆಗಮನದಿಂದ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

~ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next