Advertisement

ಶಾ ಮುಂದಿನ ಟಾರ್ಗೆಟ್‌ ಕರ್ನಾಟಕ

03:45 AM Apr 16, 2017 | Team Udayavani |

ಭುವನೇಶ್ವರ: ಒಂದೊಂದೇ ರಾಜ್ಯಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಾ, ಕಾಂಗ್ರೆಸ್‌-ಮುಕ್ತ ಭಾರತದ ಕನಸನ್ನು ನನಸು ಮಾಡುತ್ತಿರುವ ಬಿಜೆಪಿ ಇದೀಗ ಕರ್ನಾಟಕದತ್ತ ದೃಷ್ಟಿ ನೆಟ್ಟಿದೆ. ಕರ್ನಾಟಕದಲ್ಲಿ ನಡೆಯಲಿರುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೇರಿಸಲು ನಾಯಕರು ಪಣತೊಟ್ಟಿದ್ದಾರೆ.

Advertisement

ಇದು ಒಡಿಶಾದ ಭುವನೇಶ್ವರದಲ್ಲಿ ಶನಿವಾರ ಆರಂಭವಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರತಿಧ್ವನಿಸಿದೆ. “ಬಿಜೆಪಿ ಇನ್ನೂ ತುತ್ತತುದಿಗೆ ತಲುಪಿಲ್ಲ. ಅದನ್ನು ಸಾಧಿಸಲು ಇನ್ನು ಕೆಲವೇ ರಾಜ್ಯಗಳು ಬಾಕಿಯಿವೆ. ಕರ್ನಾಟಕ, ಕೇರಳ, ತಮಿಳುನಾಡಿಗೂ ಕೇಸರಿ ಅಲೆ ವ್ಯಾಪಿಸಬೇಕಿದೆ,’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನುಡಿದಿದ್ದಾರೆ. ಜತೆಗೆ, ಪ್ರತಿಯೊಂದು ರಾಜ್ಯಗಳಲ್ಲೂ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಹೊಂದಬೇಕು ಎಂದಿದ್ದಾರೆ. ಈ ಮೂಲಕ ತಮ್ಮ ಮುಂದಿನ ಗುರಿ ಕರ್ನಾಟಕ ಎಂಬುದನ್ನು ಶಾ ಸ್ಪಷ್ಟವಾಗಿ ನುಡಿದಿದ್ದಾರೆ.

ಇದೇ ವೇಳೆ, ಕನಿಷ್ಠ 25 ದಿನಗಳನ್ನಾದರೂ ಬೂತ್‌ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಕಳೆಯಿರಿ ಎಂದು ಕಾರ್ಯಕಾರಿಣಿಯ ಸದಸ್ಯರಿಗೆ ಅಮಿತ್‌ ಶಾ ಸೂಚಿಸಿದ್ದಾರೆ. ಜತೆಗೆ, ಸೆಪ್ಟೆಂಬರ್‌ವರೆಗೆ ಅಂದರೆ 95 ದಿನಗಳ ಕಾಲ ತಾವು ಕೇರಳ, ಅಂಡಮಾನ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುವುದಾಗಿಯೂ ಘೋಷಿಸಿದ್ದಾರೆ.

ಎಲ್ಲೆಲ್ಲೂ ಕಮಲ ಅರಳಬೇಕು ಎಂದಿರುವ ಶಾ, ಉತ್ತರಪ್ರದೇಶ ಚುನಾವಣೆಯ ಫ‌ಲಿತಾಂಶವು ಎಲ್ಲ ರಾಜಕೀಯ ವಿಶ್ಲೇಷಣೆಗಳನ್ನು ಸುಳ್ಳಾಗಿಸಿದೆ. ಪ್ರಾದೇಶಿಕ ಪಕ್ಷಗಳನ್ನು ಸೋಲಿಸುವ ಶಕ್ತಿ ಬಿಜೆಪಿಗಿದೆ ಎಂಬುದನ್ನು ತೋರಿಸಿದೆ ಎಂದಿದ್ದಾರೆ. ಒಟ್ಟಿನಲ್ಲಿ, ಚುನಾವಣಾ ಕಾರ್ಯತಂತ್ರ ರೂಪಿಸುವುದರಲ್ಲಿ ಚಾಣಕ್ಯ ಎಂದೇ ಕರೆಯಲ್ಪಡುವ ಅಮಿತ್‌ ಶಾ ಅವರು ಕರ್ನಾಟಕದತ್ತ ಮುಖ ಮಾಡಿದ್ದಾರೆ ಎನ್ನುವುದಕ್ಕೆ ಕಾರ್ಯಕಾರಿಣಿಯಲ್ಲಿ ಅವರು ಆಡಿರುವ ಮಾತುಗಳೇ ಸಾಕ್ಷಿ.

ಎರಡು ದಿನಗಳ ಕಾರ್ಯಕಾರಿಣಿ:
ವಿಶೇಷವೆಂದರೆ, ಈ ಬಾರಿ ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಒಡಿಶಾದಲ್ಲಿ ಹಮ್ಮಿಕೊಂಡಿದೆ. ಇಲ್ಲಿನ ಪಂಚಾಯತ್‌ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ತೋರಿ ಬೀಗುತ್ತಿರುವ ಬಿಜೆಪಿ ಒಡಿಶಾವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದಲೇ ಈ ತಂತ್ರ ರೂಪಿಸಿದೆ. ಜತೆಗೆ, ಬಿಜು ಜನತಾದಳಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿರುವ ಬಿಜೆಪಿ, 2019ರ ಚುನಾವಣೆಯಲ್ಲಿ ಒಡಿಶಾದಲ್ಲಿ ಅಧಿಕಾರಕ್ಕೇರುವ ಗುರಿಯನ್ನೂ ಹಾಕಿಕೊಂಡಿದೆ.

Advertisement

ಪ್ರಧಾನಿ ಮೋದಿ ರೋಡ್‌ಶೋ:
ಶನಿವಾರ ಕಾರ್ಯಕಾರಿಣಿಯಲ್ಲಿ ಭಾಗವಹಿಸಲೆಂದು ಬಂದ ಪ್ರಧಾನಿ ಮೋದಿ ಅವರು ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನೇರವಾಗಿ ರಾಜಭವನದತ್ತ ಪ್ರಯಾಣ ಬೆಳೆಸಿದರು. ಅವರನ್ನು ಸ್ವಾಗತಿಸಲೆಂದು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಪ್ರಧಾನಿ ಮೋದಿ ಅವರು ತಾವಿದ್ದ ಕಾರಿನಿಂದ ಹೊರಕ್ಕೆ ಬಗ್ಗಿ, ಜನರತ್ತ ಕೈಬೀಸಿದರು. ಕೆಲವೆಡೆ, ಕಾರಿನಿಂದ ಇಳಿದು ಜನರಿದ್ದಲ್ಲಿಗೆ ತೆರಳಿದಿದ್ದೂ ಕಂಡುಬಂತು. ಶಿಷ್ಟಾಚಾರವನ್ನು ಬದಿಗೊತ್ತಿ ಅವರು ರೋಡ್‌ಶೋ ನಡೆಸಿದರು. ಇದನ್ನು, “ರಾಜ್ಯ ರಾಜಕೀಯದ ಹೊಸ ಯುಗ’ ಎಂದು ಒಡಿಶಾ ಬಿಜೆಪಿ ಅಧ್ಯಕ್ಷ ಬಸಂತ ಪಾಂಡಾ ಬಣ್ಣಿಸಿದ್ದಾರೆ.

ರಾಮಮಂದಿರಕ್ಕೆ ಬಿಜೆಪಿ ಬದ್ಧ:
ಪ್ರತಿಯೊಂದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ರಾಮಮಂದಿರ ನಿರ್ಮಾಣ ವಿಚಾರವೇ ಚರ್ಚೆಯಾಗಬೇಕೆಂದೇನೂ ಇಲ್ಲ. ಏಕೆಂದರೆ, ರಾಮಮಂದಿರ ನಿರ್ಮಾಣವು ಬಿಜೆಪಿಯ ಬದ್ಧತೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಇದೇ ವೇಳೆ, ಇವಿಎಂ ತಿರುಚುವಿಕೆಗೆ ಸಂಬಂಧಿಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ನೀಡಿರುವ ಹೇಳಿಕೆ ಬಗ್ಗೆ ಕಿಡಿಕಾರಿದ ಅವರು, “ರಾಜ್ಯವೊಂದರ ಮುಖ್ಯಮಂತ್ರಿಯಾದವರು ತಮ್ಮನ್ನು ತಾವೇ ಹ್ಯಾಕಿಂಗ್‌ ತಜ್ಞ ಎಂದು ಹೇಳಿಕೊಳ್ಳುತ್ತಿದ್ದಾರೆ,’ ಎಂದರು. ಶುಕ್ರವಾರವಷ್ಟೇ ಕೇಜ್ರಿವಾಲ್‌ ಅವರು, “ನಾನು ಐಐಟಿ ಎಂಜಿನಿಯರ್‌ ಆಗಿದ್ದು, ಇವಿಎಂ ತಿರುಚುವ 10 ವಿಧಾನಗಳನ್ನು ಹೇಳಬಲ್ಲೆ’ ಎಂದಿದ್ದರು. ಇದೇ ವೇಳೆ, ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧವೂ ವಾಗ್ಧಾಳಿ ನಡೆಸಿದ ಪ್ರಸಾದ್‌, “ಬಿಜೆಪಿಯು ಹತ್ಯೆಯ ರಾಜಕೀಯಕ್ಕೆ ಬೆದರುವುದಿಲ್ಲ,’ ಎಂದು ಖಾರವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next