ಕೋಲ್ಕತಾ: ದ್ವೇಷ ಹರಡುವಿಕೆ, ಜನರ ವಿಭಜನೆ- ಇವು ಬಿಜೆಪಿಯ ಡಿಎನ್‌ಎಯಲ್ಲಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
“ದ್ವೇಷ ಬಿತ್ತನೆ ಕಾಂಗ್ರೆಸ್‌ನ ಡಿಎನ್‌ಎ. ಡೆವಲಪ್ ಮೆಂಟ್, ನ್ಯಾಶನಲಿಸಂ, ಆತ್ಮನಿರ್ಭರ ಭಾರತ್- ಇವು ಬಿಜೆಪಿಯ ಡಿಎನ್‌ಎ’ ಎಂದು ಹೇಳಿದ್ದಾರೆ.
ಪ. ಬಂಗಾಲದ ಬರಕು³ರ, ಕೃಷ್ಣ ನಗರ ಉತ್ತರ ಕ್ಷೇತ್ರ ಮುಂತಾದೆಡೆ ಶುಕ್ರವಾರ ರೋಡ್ ಶೋ ನಡೆಸಿ, ಮಾತನಾಡಿದ ಶಾ, “ರಾಹುಲ್ ಗಾಂಧಿ ಒಬ್ಬ ಟೂರಿಸ್ಟ್ ಲೀಡರ್. ಚುನಾವಣೆ ಮುಗಿಯುತ್ತಾ ಬಂದರೂ, ರಾಹುಲ್ ಬಾಬಾ ಪ್ರತ್ಯಕ್ಷವಾಗಿರಲಿಲ್ಲ. ಇತ್ತೀಚೆಗೆ ರ್ಯಾಲಿಯೊಂದಕ್ಕೆ ಬಂದು ಬಿಜೆಪಿಯ ಡಿಎನ್‌ಎ ಬಗ್ಗೆ ಮಾತಾಡುತ್ತಾರೆ. ಇಂಥ ಟೂರಿಸ್ಟ್ ನಾಯಕರನ್ನು ಜನತೆ ದೂರ ಇಡಬೇಕು’ ಎಂದು ಕರೆಕೊಟ್ಟರು.
ದೀದಿ ಗರಂ: ಏತನ್ಮಧ್ಯೆ, ಸರ್ವಪಕ್ಷ ಸಭೆಯಲ್ಲೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿಯ ನಾಯಕರ ಮೇಲೆ ಹರಿಹಾಯ್ದರು. “ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಿರುವ ಗುಜರಾತ್ ನಂಥ ರಾಜ್ಯಗಳಿಂದ ಔಟ್ ಸೈಡರ್ ಪ್ರಚಾರಕರು ಇಲ್ಲಿಗೆ ಬಂದು ಸೋಂಕು ಹಬ್ಬಿಸುತ್ತಿದ್ದಾರೆ. ಇಂಥ ಔಟ್ ಸೈಡರ್‌ಗಳಿಗೆ ನಿರ್ಬಂಧ ವಿಧಿಸಬೇಕು’ ಎಂದು ಸಲಹೆ ನೀಡಿದರು.
ಇಂದು 5ನೇ ಹಂತ: ಶುಕ್ರವಾರದ 5ನೇ ಹಂತದಲ್ಲಿ 45 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 1.13 ಕೋಟಿ ಮತದಾರರು 342 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಉತ್ತರ 24 ಪರಗಣ, ಪೂರ್ವ ವರ್ಧಮಾನ್, ನಾದಿಯಾ, ಜಲ್ಪಾಯಿಗುರಿ, ಡಾರ್ಜಿಲಿಂಗ್, ಕಲೀಂಪಾಂಗ್ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಇನ್ನೊಂದೆಡೆ, “ಸಿತಾಲ್ಕುಚಿಯಲ್ಲಿ ನಮ್ಮ ಆಟ ತೋರಿಸಿದ್ದೇವೆ. ನಾಲ್ವರಿಗೆ ಸ್ವರ್ಗದ ದಾರಿ ತೋರಿಸಿದ್ದೇವೆ’ ಎಂದು ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಸಯಾಂತನು ಬಸು ಅವರಿಗೆ ಚುನಾವಣ ಆಯೋಗ 24 ಗಂಟೆ ಮತಪ್ರಚಾರದಿಂದ ದೂರ ಉಳಿಯುವಂತೆ ನಿಷೇಧ ವಿಧಿಸಿದೆ.
ದೀದಿ ವಿರುದ್ಧ ಎಫ್ಐಆರ್
ಕೇಂದ್ರ ಪಡೆಗಳಿಗೆ ಘೇರಾವ್ ಹಾಕುವಂತೆ ಜನ ರನ್ನು ಪ್ರಚೋದಿಸಿದ ಆರೋಪದಡಿ ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಚುನಾವಣ ಆಯೋಗ ಎಫ್ಐ ಆರ್ ದಾಖಲಿಸಿದೆ. ಸಿತಾಲ್ಕುಚಿ ಗೋಲಿಬಾರ್ ಸಂಬಂಧ ಮಮತಾ ಈ ವಿವಾದಿತ ಹೇಳಿಕೆ ನೀಡಿದ್ದರು.