Advertisement

ರಾಜಕೀಯ ಲೆಕ್ಕಾಚಾರ: ಬಿಜೆಪಿ ಚಿಂತನಾ ಬೈಠಕ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೈರು?

01:05 PM Jan 04, 2022 | Team Udayavani |

ಬೆಂಗಳೂರು:ರಾಜ್ಯ ಬಿಜೆಪಿ ವಲಯದಲ್ಲಿ ಭಾರಿ ನಿರೀಕ್ಷೆ ಹಾಗೂ ಚರ್ಚೆಗೆ ಕಾರಣವಾಗಿದ್ದ ಚಿಂತನಾ ಬೈಠಕ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಸಾಧ್ಯತೆ ಈಗ ಕ್ಷೀಣವಾಗಿದೆ. ಜ 7, 8 ರಂದು ಬೆಂಗಳೂರು ಹೊರ ವಲಯದ ನಂದಿಬೆಟ್ಟದ ತಪ್ಪಲಿನಲ್ಲಿ ಎರಡು ದಿನಗಳ ಚಿಂತನಾ ಬೈಠಕ್ ನ್ನು ಬಿಜೆಪಿ ಆಯೋಜಿಸಿತ್ತು.

Advertisement

ಪದಾಧಿಕಾರಿಳು, ಶಾಸಕರು, ಸಂಸದರು, ಕಳೆದ ಚುನಾವಣೆ ಪರಾಜಿತ ಅಭ್ಯರ್ಥಿ ಗಳು, ಸಚಿವರು ಸೇರಿದಂತೆ ೪೦೦ಕ್ಕೂ ಅಧಿಕ ಅಪೇಕ್ಷಿತರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಲಾಗಿತ್ತು. ಅಮಿತ್ ಶಾ ಮೂಲಕ ಬಿಜೆಪಿ ನಾಯಕರಿಗೆ ” ಕ್ಲಾಸ್” ತೆಗೆದುಕೊಳ್ಳುವುದಕ್ಕೆ ಬಿಜೆಪಿ ಸಂಘಟನಾ ಮುಖಂಡರು ಯೋಜನೆ ರೂಪಿಸಿದ್ದರು.

ಆದರೆ ಕೋವಿಡ್ ನಿಯಂತ್ರಣಕ್ಕೆ ರೂಪಿಸುತ್ತಿರುವ ಕಠಿಣ ನಿಯಮಗಳು ಈ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದೆ. ಸಿಎಂ ಹಾಗೂ ಸಚಿವರು ಸೇರಿ ಆಯ್ದ ನಲವತ್ತು ಜನರು ಮಾತ್ರ ಈ ಸಭೆಯಲ್ಲಿ ಭಾಗವಹಿಸುತ್ತಾರೆ. ಮೂಲಗಳ ಪ್ರಕಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಚಿಂತನಾ ಬೈಠಕ್ ನ ಮುಂದಾಳತ್ವ ವಹಿಸಲಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭಾಗವಹಿಸುವ ಸಾಧ್ಯತೆ ಇದೆ.

ಸಂಪುಟದ ಕೆಲ ಸಚಿವರ ಸಾಧನೆ ಬಗ್ಗೆ ಬಿಜೆಪಿ ಹೈಕಮಾಂಡ್ ಸಂಪೂರ್ಣ ತೃಪ್ತಿ ಹೊಂದಿಲ್ಲ. ಸಂಘಟನಾತ್ಮಕವಾಗಿ ಪಕ್ಷವೂ ಬಲಗೊಂಡಿಲ್ಲ. ಪಕ್ಷ ಹಾಗೂ ಸರಕಾರದ ನಡುವಿನ ಅಂತರವೂ ಕಡಿಮೆಯಾಗಿಲ್ಲ. ಕೆಲವೇ ಕೆಲವು ಸಚಿವರನ್ನು ಬಿಟ್ಟರೆ ಉಳಿದವರು ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ.

ಪಕ್ಷದ ಅಜೆಂಡಾಗಳ ಜಾರಿ ವಿಚಾರದಲ್ಲೂ ವಿಳಂಬವಾಗುತ್ತಿದೆ ಎಂಬ ಬೇಸರವನ್ನು ಸಂಘ ಪರಿವಾರದ ಮುಖಂಡರು ಹೊಂದಿದ್ದಾರೆ. ಹೀಗಾಗಿ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನಾ ಬೈಠಕ್ ನಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.ಆದರೆ ಸಚಿವ ಸಂಪುಟ ವಿಸ್ತರಣೆ, ಸಚಿವರ ನಡುವಿನ ಅಸಮಾಧಾನ ಇತ್ಯಾದಿ ವಿಚಾರಗಳ ಬಗ್ಗೆ ಯಾವುದೇ ಚರ್ಚೆ ಸಾಧ್ಯತೆ ಇಲ್ಲ. ಆದರೆ ಸಂಪುಟ ಪುನಾರ್ರಚನೆ ಕಾಲಕ್ಕೆ ಯಾರು ಅಧಿಕಾರ ಕಳೆದುಕೊಳ್ಳಬಹುದೆಂಬ ಪಟ್ಟಿಯನ್ನು ವರಿಷ್ಠರಿಗೆ ರವಾನಿಸುವಲ್ಲಿ ಈ ಸಭೆ ಮಹತ್ವದ ಪಾತ್ರ ವಹಿಸಬಹುದು.

Advertisement

ತಂತ್ರ :ಅದೇ ರೀತಿ ಚಿಂತನಾ ಬೈಠಕ್ ನಲ್ಲಿ ಭಾಗಿಯಾಗುವವರ ಗಾತ್ರ ಕುಗ್ಗಿಸುವ ಮೂಲಕ ಕಾಂಗ್ರೆಸ್ ಪಾದಯಾತ್ರೆ‌ ನಿಯಂತ್ರಣಕ್ಕೂ ಸರಕಾರ ಕೈ ಹಾಕಬಹುದು ಎನ್ನಲಾಗುತ್ತಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಿತ್ತಿರುವಾಗ ನಾವು ರಾಜಕೀಯ ಕಾರ್ಯಕ್ರಮ ಕಡಿಮೆ ಮಾಡಿದ್ದೇವೆ, ನೀವು ಸಹಕರಿಸಿ ಎಂಬ ಸಂದೇಶ ರವಾನಿಸುವ ಲೆಕ್ಕಾಚಾರವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next