Advertisement

ಹೈದ್ರಾಬಾದ್‌ ಕರ್ನಾಟಕದಲ್ಲಿ ಇಂದಿನಿಂದ ಅಮಿತ ಯಾತ್ರೆ

06:00 AM Feb 25, 2018 | Team Udayavani |

ಕಲಬುರಗಿ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ದೃಷ್ಟಿ ಇಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಫೆ.25 ಹಾಗೂ 26ರಂದು ಎರಡು ದಿನಗಳ ಕಾಲ ಹೈದರಾಬಾದ್‌ ಕರ್ನಾಟಕದ ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.

Advertisement

ಕಾಂಗ್ರೆಸ್‌ ಮುಕ್ತ ಕರ್ನಾಟಕ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಕಲ್ಪದ ಧ್ಯೇಯದೊಂದಿಗೆ ಅಮಿತ್‌ ಶಾ ಕಾಂಗ್ರೆಸ್‌ನ ಭದ್ರಕೋಟೆ ಹೈ.ಕ ಭಾಗದಲ್ಲಿ ಪ್ರವಾಸ ಕೈಗೊಂಡು ಹತ್ತಾರು ಕಾರ್ಯಕ್ರಮಗಳ ಮೂಲಕ ಪಕ್ಷದ ಸಂಘಟನೆಯಲ್ಲದೇ ಹಲವು ಕಾರ್ಯತಂತ್ರ ರೂಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಪರಿವರ್ತನಾ ಯಾತ್ರೆ ಬಂದು ಹೋದ ನಂತರ ಈಗ ರಾಷ್ಟಿÅàಯ ಅಧ್ಯಕ್ಷರೇ ಆಗಮಿಸುತ್ತಿದ್ದು, ರಣಕಹಳೆಗೆ ವೇದಿಕೆ ಸಿದ್ಧಗೊಂಡಿದೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಹೈದರಾಬಾದ್‌ ಕರ್ನಾಟಕ ಭಾಗದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಹೆಚ್ಚಿನ 20 ಸ್ಥಾನ ಗೆದ್ದು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವಲ್ಲಿ ಕೊಡುಗೆ ನೀಡಿತ್ತು. ಆದರೆ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮರಳಿ ತನ್ನ ಸ್ಥಾನಗಳನ್ನು ಭದ್ರಪಡಿಸಿಕೊಂಡಿತ್ತು. ಆ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ ಕಾಂಗ್ರೆಸ್‌ 23, ಬಿಜೆಪಿ 5, ಜೆಡಿಎಸ್‌ 5, ಕೆಜೆಪಿ 3, ಬಿಎಸ್‌ಆರ್‌ 2, ಕರ್ನಾಟಕ ಮಕ್ಕಳ ಪಕ್ಷ ಒಂದು ಹಾಗೂ ಪಕ್ಷೇತರರೊಬ್ಬರು ಗೆಲುವು ಸಾಧಿಸಿದ್ದರು.

2008ರ ಚುನಾವಣೆಯಲ್ಲಿ ಗೆದ್ದಿದ್ದ 20 ಸ್ಥಾನಗಳ ಜತೆಗೆ ಹೆಚ್ಚುವರಿಯಾಗಿ ಕನಿಷ್ಠ 7-8 ಸ್ಥಾನಗಳನ್ನು ಸೇರಿ ಒಟ್ಟಾರೆ 28ರಿಂದ 30 ಸ್ಥಾನಗಳನ್ನಾದರೂ ಗೆಲ್ಲಲೇಬೇಕು ಎಂಬುದು ಬಿಜೆಪಿ ಗುರಿ ಹೊಂದಿದೆ. ಆ ಮೂಲಕ 150 ಮಿಷನ್‌ ಗುರಿ ತಲುಪಿಸುವಲ್ಲಿ ತಂತ್ರಗಾರಿಕೆ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಶಾ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಹೈ.ಕ ಭಾಗದ ಜಿಲ್ಲೆಗಳಿಗೆ ಭೇಟಿ ಸಂದರ್ಭ ಶಕ್ತಿ ಕೇಂದ್ರಗಳ ಸಭೆ ನಡೆಸಲಿರುವ ಶಾ, ಬಿಜೆಪಿ ಜಿಲ್ಲಾ ಘಟಕದ ಕಾರ್ಯವೈಖರಿಯನ್ನು ಓರೆಗಲ್ಲಿಗೆ ಹಚ್ಚಲಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಮಾಡಲಾಗಿರುವ ಪ್ರತಿಭಟನೆ ಹಾಗೂ ಆಯಾ ಕ್ಷೇತ್ರಗಳಲ್ಲಿ ಶಾಸಕರ ವಿರುದ್ಧ ಹೇಳಿಕೆಗಳನ್ನು ನೀಡಲಾಗಿದೆಯೇ ಎಂಬುದರ ಕುರಿತಾಗಿಯೂ ವಿವರಣೆ ಪಡೆಯಲಿದ್ದಾರೆ ಎನ್ನಲಾಗಿದೆ.

Advertisement

ಇನ್ನು ಸಮೀಕ್ಷೆ ಮೇರೆಗೆ ಟಿಕೆಟ್‌ ನೀಡಲಾಗುತ್ತದೆ ಎಂದು ಈಗಾಗಲೇ ಶಾ ಅವರು ಹೇಳಿದ್ದಾರೆ. ಹಾಗಾಗಿ ಸ್ಪರ್ಧಾಕಾಂಕ್ಷಿಗಳು ದಂಡನಾಯಕನ ಗಮನ ಸೆಳೆಯಲು ಕಸರತ್ತಿಗೆ ಮುಂದಾಗಿದ್ದಾರೆ.

ಅಮಿತ್‌ ಶಾ ಪ್ರವಾಸ ವಿವರ
ಫೆ. 25ರಂದು ಬೆಳಗ್ಗೆ 8:45ಕ್ಕೆ ಬೀದರ ಅತಿಥಿ ಗೃಹದಿಂದ ನಿರ್ಗಮನ. 9:45ಕ್ಕೆ ಇತಿಹಾಸ ಪ್ರಸಿದ್ಧ ನರಸಿಂಹ ಝರಾ ದೇವಸ್ಥಾನಕ್ಕೆ ಭೇಟಿ. 10:15ಕ್ಕೆ ಮಂಗಲಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಶಿವರಾಜ ಮನೆಗೆ ಭೇಟಿ. 11:00ಕ್ಕೆ ಹುಮನಾಬಾದ್‌ನದಲ್ಲಿ ಕಬ್ಬು ಬೆಳೆಗಾರರೊಂದಿಗೆ ಚರ್ಚೆ. 12:40ಕ್ಕೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನವಶಕ್ತಿ ಸಮಾವೇಶ. ಮಧ್ಯಾಹ್ನ 3:15ಕ್ಕೆ ಯಾನಾಗುಂದಿ ದೇವಸ್ಥಾನಕ್ಕೆ ಭೇಟಿ. ಕೋಲಿ ಸಮಾಜದ ಮುಖಂಡರೊಂದಿಗೆ ಚರ್ಚೆ. ಸಂಜೆ 4:50ಕ್ಕೆ ಕಲಬುರಗಿ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಎಸ್‌ಸಿ ಮೋರ್ಚಾ ಸಮಾವೇಶ. ಸಂಜೆ 6:00ಕ್ಕೆ ಶರಣಬಸವೇಶ್ವರ ಮಂದಿರಕ್ಕೆ ಭೇಟಿ. ರಾತ್ರಿ 7:45ಕ್ಕೆ ಪಿಡಿಎ ಇಂಜನಿಯರಿಂಗ್‌ ಕಾಲೇಜ್‌ನಲ್ಲಿ ವ್ಯಾಪಾರಸ್ಥರು-ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ. ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ.

ಫೆ. 26ರಂದು ಬೆಳಗ್ಗೆ 9:25ಕ್ಕೆ ಮಳಖೇಡ ಉತ್ತರಾದಿಮಠಕ್ಕೆ ಭೇಟಿ. 10:15ಕ್ಕೆ ಗ್ರಾÂಂಡ್‌ ಹೊಟೇಲ್‌ದಲ್ಲಿ ಪತ್ರಿಕಾಗೋಷ್ಠಿ. 10:50ರಿಂದ ಗೋಲ್ಡ್‌ ಹಬ್‌ನಲ್ಲಿ ಓಬಿಸಿ ಮುಖಂಡರೊಂದಿಗೆ ಸಂವಾದ. ಮಧ್ಯಾಹ್ನ 12:00ಕ್ಕೆ ಸೇಡಂನಲ್ಲಿ ಶಕ್ತಿ ಕೇಂದ್ರಗಳಿಗೆ ಭೇಟಿ. ಮಧ್ಯಾಹ್ನ 2:30ಕ್ಕೆ ಸೇಡಂನಲ್ಲಿ ಸೇಡಂ, ಚಿತ್ತಾಪುರ ತಾಲೂಕಿನ ನವಶಕ್ತಿ ಸಮಾವೇಶ. ಸಂಜೆ 4:40ಕ್ಕೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿ. ಸಂಜೆ 5:45ಕ್ಕೆ ಹುಮನಾಬಾದ್‌ನಲ್ಲಿ ನವಶಕ್ತಿ ಸಮಾವೇಶ. ರಾತ್ರಿ 7:45ಕ್ಕೆ ಬೀದರನ‌ಲ್ಲಿ ಗುರುದ್ವಾರಕ್ಕೆ ಭೇಟಿ. ರಾತ್ರಿ. 8:25ಕ್ಕೆ ಬೀದನಿದಿಂದ ದೆಹಲಿಗೆ ಪ್ರಯಾಣ.

Advertisement

Udayavani is now on Telegram. Click here to join our channel and stay updated with the latest news.

Next