ಪಾಟ್ನಾ : ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸೆಕ್ಷನ್ 144 ವಿಧಿಸಿರುವುದರಿಂದ ಬಿಹಾರದ ಸಸಾರಂನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ರಾಮ ನವಮಿ ಸಂದರ್ಭದಲ್ಲಿ ನಳಂದಾ ಮತ್ತು ಸಸಾರಾಮ್‌ನಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಾಗಿ ಒಟ್ಟು 45 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ, “ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮವೊಂದಕ್ಕೆ ಸಸಾರಂಗೆ ಬರಬೇಕಿತ್ತು. ಬಿಹಾರ ಸರ್ಕಾರ ಸೆಕ್ಷನ್ 144 ವಿಧಿಸಿರುವುದರಿಂದ ನಾವು ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿದೆ. ಎಂದು ಹೇಳಿದ್ದಾರೆ.
ಎರಡು ಕೋಮುಗಳ ಗುಂಪುಗಳ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ನಳಂದಾದಲ್ಲಿ ಭಾರೀ ಭದ್ರತಾ ಸಿಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ನಳಂದಾ ಮತ್ತು ರೋಹ್ತಾಸ್‌ನಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಸಮಾಜ ವಿರೋಧಿ ಅಂಶಗಳನ್ನು ಗುರುತಿಸಿ ಕ್ರಮವಾಗಿ 27 ಮತ್ತು 18 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಬಿಹಾರ ಷರೀಫ್ ಮತ್ತು ಸಸಾರಾಮ್‌ನಲ್ಲಿ ರಾಮನವಮಿ ಮೆರವಣಿಗೆ ಪೂರ್ಣಗೊಂಡಿದ್ದು. ಎರಡೂ ಸ್ಥಳಗಳಲ್ಲಿ ಸಾಕಷ್ಟು ಸಂಖ್ಯೆಯ ಪಡೆ ಮತ್ತು ಮ್ಯಾಜಿಸ್ಟ್ರೇಟ್ ನಿಯೋಜನೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲಾಗಿದೆ.” ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ರೀತಿಯ ವದಂತಿಗಳನ್ನು ನಂಬದಂತೆ ಪೊಲೀಸರು ನಿವಾಸಿಗಳಿಗೆ ಮನವಿ ಮಾಡಿದ್ದು “ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಆಡಳಿತದೊಂದಿಗೆ ಸಹಕರಿಸಿ” ಎಂದು ಟ್ವೀಟ್ ಮಾಡಲಾಗಿದೆ.
ಆರೋಪ- ಪ್ರತ್ಯಾರೋಪ
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಂದ ಆರೋಪ ಮತ್ತು ಪ್ರತ್ಯಾರೋಪಗಳ ಸುತ್ತು ಪ್ರಾರಂಭವಾಗಿದೆ. ಬಿಜೆಪಿ ಗಲಭೆಗಳನ್ನು ಹರಡುತ್ತಿದೆ ಎಂದು ಆಡಳಿತಾರೂಢ ಆರ್‌ಜೆಡಿ ಆರೋಪಿಸಿದೆ. ಮತ್ತೊಂದೆಡೆ, ಆರ್‌ಜೆಡಿ ಹಿರಿಯ ನಾಯಕ ಮತ್ತು ಶಾಸಕ ಭಾಯಿ ವೀರೇಂದ್ರ ಮಾತನಾಡಿ, ದೇಶ ಅಥವಾ ರಾಜ್ಯಗಳಲ್ಲಿ ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿ ಗಲಭೆಯಲ್ಲಿ ತೊಡಗುತ್ತದೆ ಎಂದಿದ್ದಾರೆ.
ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಎಲ್ಲಾ ಘಟನೆಗಳಿಗೆ ಆರ್ ಜೆಡಿ ನೇರ ಹೊಣೆ ಎಂದು ಆರೋಪಿಸಿದೆ.