ನವದೆಹಲಿ: “ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಸರ್ಕಾರದ ಸಂಕಲ್ಪಕ್ಕೆ ಅಂತಿಮ ರೂಪ ನೀಡಲೆಂದೇ 2019ರ ಜೂ.26ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಭೇಟಿ ನೀಡಿದ್ದರು.’
ಹೀಗೆಂದು ಲೆ.ಜ.(ನಿ) ಕೆ.ಜೆ.ಎಸ್.ಧಿಲ್ಲಾನ್ ಅವರು ಇನ್ನೂ ಬಿಡುಗಡೆಯಾಗದ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಲೆ.ಜ.ಧಿಲ್ಲಾನ್ ಬರೆದಿರುವ “ಕಿತ್ನೆ ಘಾಜಿ ಆಯೆ ಕಿತ್ನೆ ಘಾಜಿ ಗಯೇ’ ಪುಸ್ತಕವು ಫೆ.14ರಂದು ಬಿಡುಗಡೆಯಾಗಲಿದೆ. ದಕ್ಷಿಣ ಕಾಶ್ಮೀರದ ಲೆಥೊರಾ ಬಳಿ 2019ರಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರಿಗೆ ಗೌರವ ಸೂಚಕವಾಗಿ ಅವರು ಈ ಪುಸ್ತಕ ಬರೆದಿದ್ದಾರೆ.
“2019ರ ಜ.26ರಂದು ಶಾ ಶ್ರೀನಗರಕ್ಕೆ ಭೇಟಿ ನೀಡುವ ಹಿಂದಿನ ದಿನ ಮಧ್ಯರಾತ್ರಿ 2 ಗಂಟೆಗೆ ನನಗೆ ಕರೆ ಬಂದಿತ್ತು. ಬೆಳಗ್ಗೆ 7 ಗಂಟೆಗೆ ಶಾ ಅವರೊಂದಿಗೆ ಸಭೆ ಬಗ್ಗೆ ಮಾಹಿತಿ ನೀಡಲಾಯಿತು. ಸಭೆ ಮುಕ್ತಾಯದ ವೇಳೆ 370ನೇ ವಿಧಿ ರದ್ದತಿ ಕುರಿತು ವೈಯಕ್ತಿಕ ಅಭಿಪ್ರಾಯ ಕೇಳಲಾಯಿತು. ಆವಾಗ, “ನಾವು ಇತಿಹಾಸ ನಿರ್ಮಿಸಿದಾಗ ಮಾತ್ರ ಇತಿಹಾಸ ಬರೆಯಲು ಸಾಧ್ಯ’ ಎಂದು ಪ್ರತಿಕ್ರಿಯಿಸಿದ್ದೆ,’ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.
“ಸಭೆಯಲ್ಲಿ ಆಲೂ ಪರೋಟ, ಗುಜರಾತ್‌ನ ಡೋಕ್ಲಾ ಸೇರಿದಂತೆ ಅನೇಕ ಬಗೆಯ ಖಾದ್ಯಗಳನ್ನು ಬಡಿಸಲಾಯಿತು. ರುಚಿಯಾದ ಆಹಾರವನ್ನು ನಾವು ಸವಿದೆವು,’ ಎಂದು ಹೇಳಿದ್ದಾರೆ.
“ನಂತರ 2019ರ ಆ.5ರಂದು 370ನೇ ವಿಧಿ ರದ್ದತಿ ಬಗ್ಗೆ ಘೋಷಿಸಲಾಯಿತು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು,’ ಎಂದು ಕಾಶ್ಮೀರದಲ್ಲಿ ಸೇನೆಯ ಕಮಾಂಡ್ ಆಗಿದ್ದ ಧಿಲ್ಲಾನ್ ತಿಳಿಸಿದ್ದಾರೆ.