ರಜೌರಿ/ಜಮ್ಮು: ಗುಜ್ಜರ್ ಮತ್ತು ಬಕರ್ ವಾಲಾ (ಬುಡಕಟ್ಟು) ಹೊರತಾಗಿ ಪಹಾಡಿ ಜನಾಂಗಕ್ಕೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡ (ಎಸ್ ಟಿ)ದ ಮೀಸಲಾತಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ (ಅ.04) ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಘೋಷಿಸಿದ್ದಾರೆ.
ಇದನ್ನೂ ಓದಿ:ನರಗುಂದದಲ್ಲಿ ಅಪರೂಪದ ಹಕ್ಕಿರೆಕ್ಕೆ ಚಿಟ್ಟೆ; ಬಹುದೂರ, ಎತ್ತರ ಹಾರುವ ಸಾಮರ್ಥ್ಯ
ಒಂದು ವೇಳೆ ಪಹಾಡಿ ಸಮುದಾಯ ಪರಿಶಿಷ್ಟ ಪಂಗಡದ ಸ್ಥಾನಮಾನ ಪಡೆದರೆ, ಭಾಷವಾರು ಸಮುದಾಯ ದೇಶದಲ್ಲಿ ಮೀಸಲಾತಿ ಪಡೆದ ಮೊದಲ ನಿದರ್ಶನವಾಗಲಿದೆ ಎಂದು ಶಾ ಹೇಳಿದರು. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದಿರುವುದಾಗಿ ಹೇಳಿದರು.
ರಜೌರಿಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಾ ಅವರು, ಜಮ್ಮು-ಕಾಶ್ಮೀರದ ಪಹಾಡಿ ಸಮುದಾಯ ಕೂಡಾ ಜಸ್ಟೀಸ್ ಶರ್ಮಾ ಆಯೋಗ ನೀಡಿರುವ ಶಿಫಾರಸ್ಸಿನಂತೆ ಮೀಸಲಾತಿಯ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಪಹಾಡಿ ಸಮುದಾಯದಂತೆ ಗುಜ್ಜರ್ ಮತ್ತು ಬಕರ್ ವಾಲಾ ಸಮುದಾಯ ಕೂಡಾ ಪರಿಶಿಷ್ಟ ಪಂಗಡದ ಪ್ರಯೋಜನವನ್ನು ಪಡೆಯಲಿದೆ. 2019ರಲ್ಲಿ 370ನೇ ಕಲಂ ಅನ್ನು ರದ್ದುಪಡಿಸುವ ಮೂಲಕ ಜಮ್ಮು-ಕಾಶ್ಮೀರದಲ್ಲಿನ ಅಭಿವೃದ್ಧಿ ವಂಚಿತ ಸಮುದಾಯಗಳು ಮೀಸಲಾತಿ ಪ್ರಯೋಜನ ಪಡೆಯುವ ಹಾದಿ ಸುಗಮವಾದಂತಾಗಿದೆ ಎಂದು ಶಾ ಹೇಳಿದರು.
ಜಸ್ಟೀಸ್ ಶರ್ಮಾ ಆಯೋಗ ನೀಡಿರುವ ವರದಿಯಲ್ಲಿ, ಗುಜ್ಜರ್, ಬಕರ್ ವಾಲಾ ಮತ್ತು ಪಹಾಡಿ ಸಮುದಾಯಗಳಿಗೆ ಎಸ್ ಟಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದು, ಶೀಘ್ರದಲ್ಲೇ ಈ ಸಮುದಾಯ ಎಸ್ ಟಿ ಮೀಸಲಾತಿ ಪಡೆಯಲಿದೆ ಎಂದ ಶಾ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಕಲಂ 370ಅನ್ನು ರದ್ದುಪಡಿಸಿದಾಗ ಮಾತ್ರವೇ ಇಂತಹ ಮೀಸಲಾತಿ ನೀಡಲು ಸಾಧ್ಯ ಎಂದು ಹೇಳಿದರು.