ಹನೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಕೇಂದ್ರದಿಂದ ಬಂದ ಅನುದಾನದ ಬಗ್ಗೆ ಲೆಕ್ಕ ಕೇಳುತ್ತಾರೆ. ತನ್ನನ್ನು ಲೆಕ್ಕ ಕೇಳಲು ಅವರ್ಯಾರು. ಇವರಿಗೆ ಕಾನೂನಿನ ಅರಿವಿಲ್ಲ. ಕಾನೂನಾತ್ಮಕವಾಗಿ ತಾನು ಲೆಕ್ಕ ಕೊಡಬೇಕಾಗಿರುವುದು ವಿಧಾನಸಭೆಗೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಹನೂರು ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಅಮಿತ್ ಶಾ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸುತ್ತಾರೆ. ಆದರೆ, ಸ್ವತಃ ಅವರೇ ಜೈಲಿಗೆ ಹೋಗಿ ಬಂದಿರುವಂತಹ ವ್ಯಕ್ತಿ. ಪರಿವರ್ತನಾ ರ್ಯಾಲಿಗಳಲ್ಲಿ ಅವರ ಪಕ್ಕ ಕುಳಿತಿರುವ
ಯಡಿಯೂರಪ್ಪ ಅವರೇ ಭ್ರಷ್ಟಾಚಾರಿ. ಈ ದೇಶದಲ್ಲಿ ನೇರವಾಗಿ ಚೆಕ್ ಮೂಲಕ ಲಂಚ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ.
ಒಟ್ಟಾರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಇಬ್ಬರೂ ಜೈಲಿಗೆ ಹೋಗಿ ಬಂದವರೇ ಇವರಿಗೆ ನಾಚಿಕೆಯಾಗಬೇಕು, ಇನ್ನು ಅಮಿತ್ ಶಾ ಪುತ್ರ ಜಯ್‌ಶಾ ಅವರ ಆಸ್ತಿ ಕಳೆದ 3 ವರ್ಷದಲ್ಲಿ ಬಹುಪಾಲು ಹೆಚ್ಚಾಗಿದೆ. ಅಲ್ಲದೆ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಮೊದಲು ಈ ಹಣದ ಲೆಕ್ಕ ಕೊಡಲಿ ಬಳಿಕ ತಾನು ಲೆಕ್ಕ ನೀಡುತ್ತೇನೆ ಎಂದು ಟೀಕಿಸಿದರು.
ವಾಚ್ ನೀಡಿದ್ದು ತನ್ನ ಆತ್ಮೀಯ ಗೆಳೆಯ: ತನಗೆ ವಾಚ್ ಕೊಡುಗೆ ನೀಡಿದ್ದು ದುಬೈನಲ್ಲಿ ವಾಸಿಸುತ್ತಿರುವ ತನ್ನ ಗೆಳೆಯ ದಾವಣಗೆರೆ ಮೂಲದ ಡಾ.ವರ್ಮಾ. ಆದರೆ, ಈ ವಾಚನ್ನು ಉದ್ಯಮಿಯೊಬ್ಬರು ಲಂಚವಾಗಿ ನೀಡಿದ್ದಾರೆ ಎಂದು ಆರೋಪ ಮಾಡುತ್ತಾರೆ. ಇದು ಸತ್ಯಕ್ಕೆ ದೂರವಾದದು ಎಂದು ಸ್ಪಷ್ಟಪಡಿಸಿದರು.
ಈಶ್ವರಪ್ಪ ನಾಲಿಗೆಗೂ-ಮೆದುಳಿಗೂ ಲಿಂಕಿಲ್ಲ: ರಾಜ್ಯದ ಬಿಜೆಪಿ ನಾಯಕ ಈಶ್ವರಪ್ಪ ಅವರ ಮೆದುಳು ಮತ್ತು ನಾಲಿಗೆಗೂ ಲಿಂಕಿಲ್ಲ, ಲಿಂಕು ತಪ್ಪೋಗಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕೇಂದ್ರದ ಮಂತ್ರಿ ಅನಂತ್ ಕುಮಾರ್ ಹೆಗಡೆ ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿ ಸುವುದಕ್ಕೆ ಎನ್ನುತ್ತಾರೆ. ಈ ಸಚಿವನಿಗೆ ಗ್ರಾಮ ಪಂಚಾಯ್ತಿ ಸದಸ್ಯನಾಗುವ ಕನಿಷ್ಠ ಅರ್ಹತೆಯೂ ಇಲ್ಲ. ಬಿಜೆಪಿ ನಾಯಕರು ಪರಿವರ್ತನಾ ರ್ಯಾಲಿ ನಡೆಸುತ್ತಿದ್ದಾರೆ. ಪರಿವರ್ತನೆಯಾಗ ಬೇಕಿರುವುದು ಬಿಜೆಪಿ ನಾಯಕರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅಶೋಕ್, ಜಗದಿಶ್ ಶೆಟ್ಟರ್ ಅವರಿಗೆ, ಇವರಿಗೆ ಯಾವುದೇ ಸಂಸ್ಕೃತಿಯಿಲ್ಲ ಮನಬಂದಂತೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ಗೇಯ್ಯುವ ಎತ್ತಿಗೆ ಮೇವಾಕಿ?: ರಾಜ್ಯದ ನಾಯಕರು ಮಿಷನ್-150 ಎಂದು 150 ಸ್ಥಾನಗಳನ್ನು ಅವರ ಜೇಬಿನಲ್ಲಿಯೇ ಇಟ್ಟುಕೊಂಡಿರುವ ರೀತಿ ಮಾತನಾಡುತ್ತಾರೆ.
ರಾಜ್ಯದ ಬಿಜೆಪಿ ನಾಯಕರಿಗೆ ಹಿಮದಿನ ಸರ್ಕಾರದ ಯಾವುದೇ ಯೋಜನೆಗಳನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್‌ಕೀಬಾತ್ ಹೇಳುತ್ತಾರೆ. ಆದರೆ, ತಮ್ಮದು ಕಾಮ್ ಕೀ
ಬಾತ್. ಹೀಗಾಗಿ ಹಳ್ಳಿ ಭಾಷೆಯಲ್ಲಿ ಹೇಳುವಂತೆ ಗೇಯ್ಯುವ ಎತ್ತಿಗೆ ಹುಲ್ಲು ಹಾಕಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಪೆಟ್ರೋಲ್ ಡೀಸೆಲ್ ಉಳಿತಾಯ ಹಣದ ಲೆಕ್ಕ ನೀಡಿ: ಕಾರ್ಯಕ್ರಮಕ್ಕೂ ಮುನ್ನ ಹನೂರು ಪಟ್ಟಣದ ಹೆಲಿಪ್ಯಾಡ್‌ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕರು ಅನ್ನಭಾಗ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚ್ಛಾತೈಲದ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್ -ಡೀಸೆಲ್ ಬೆಲೆ ಇಳಿಸುತ್ತಿಲ್ಲ. ಮೊದಲು ಅಮಿತ್ ಶಾ ಅವರು ಹೆಚ್ಚುವರಿಯಾಗಿ ಉಳಿಯುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಯ ಉಳಿತಾಯದ ಲೆಕ್ಕ ನೀಡಲಿ ಎಂದು ಸವಾಲು ಎಸೆದರು.