ಕುರುಗೋಡು: ಇಷ್ಟು ದಿನ ದೇಶದ ಜನರ ಕಿವಿಗೆ ಹೂ ಹುಡುತ್ತಾ ಬಂದವರು ಮೊನ್ನೆ ರಾಜ್ಯ ಸರಕಾರ ಕೊನೆಯ ಬಜೆಟ್ ನಲ್ಲಿ ಕಾಂಗ್ರೆಸ್ ಶಾಸಕರು ತಮ್ಮ ಕಿವಿಗೆ ಹೂ ಹಿಟ್ಟುಕೊಂಡು ಬಂದಿದ್ದಾರೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯ ವಾಡಿದರು.
ಪಟ್ಟಣದ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಅವರ ನಿವಾಸನದ ಶ್ರೀ ದೊಡ್ಡ ಬಸವೇಶ್ವರ ನಿಲಯದಲ್ಲಿ ಫೆ.23ಕ್ಕೆ ಸಂಡೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಗಮನ ಹಿನ್ನಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಯೊಂದಿಗೆ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತಂಡದ ವೈಖರಿ ವಿಭಿನ್ನವಾಗಿದೆ. ಮೊಟ್ಟಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಡೂರಿಗೆ ಇದೇ ತಿಂಗಳ 23ರಂದು ಆಗಮಿಸುವ ಮೂಲಕ ಬೃಹತ್ ಸಮಾವೇಶದ ನೇತೃತ್ವವಹಿಸಲಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಸಂಡೂರಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಸಂಘಟನಾತ್ಮಕವಾಗಿ ರೂಪಿಸುವ ಜತೆಗೆ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ. ಈ ನಿಟ್ಟಿನಲ್ಲಿ ಕುರುಗೋಡು ತಾಲೂಕು ಸೇರಿದಂತೆ ಕಂಪ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಆಗಮಿಸಿ ಯಶಸ್ಸಿಗೆ ಕಾರಣೀಭೂತರಾಗಬೇಕೆಂದು ಹೇಳುವ ಜತೆಗೆ ಕಲ್ಯಾಣ ಕರ್ನಾಟಕ ಭಾಗದ 41 ಕ್ಷೇತ್ರಗಳ ಪೈಕಿ, 35 ಸ್ಥಾನಗಳು ಬರುವ ಚುನಾವಣೆಯಲ್ಲಿ ಬಿಜೆಪಿ ಪಾಲಾಗಲಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ನಲ್ಲಿ ಕಂಪ್ಲಿ ಕ್ಷೇತ್ರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನಗಳನ್ನು ಮೀಸಲಿಟ್ಟಿದ್ದಾರೆ. ಹೀಗಾಗಿ ಬರುವ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ 5 ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವ ಜತೆಗೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕೇಂದ್ರ ಮತ್ತು ಸರ್ಕಾರದ ಜನಪರ ಯೋಜನೆಗಳೇ ಮುಂದಿನ ಚುನಾವಣೆಗೆ ಶ್ರೀರಕ್ಷೆ. ಕಂಪ್ಲಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ, ಈ ಬಾರಿಯ ಚುನಾವಣೆಯಲ್ಲಿ ಸುರೇಶ್ ಬಾಬು ಅವರನ್ನು ಗೆಲ್ಲಿಸಿ, ವಿಧಾನಸೌಧಕ್ಕೆ ಕಳುಹಿಸುವ ಜವಾಬ್ದಾರಿ ಕಾರ್ಯಕರ್ತರು ಒತ್ತುಕೊಳ್ಳಬೇಕು. ರಾಮುಲು ನೀಡಿರುವ ಭರವಸೆಗಳು ಹುಸಿಯಾಗಿಲ್ಲ. ಈಗಾಗಲೇ ಕಾಂಗ್ರೆಸ್ ಗೆ ಸೋಲಿನ ಭಯ ಸುರುವಾಗಿದೆ ಎಂದರು.
ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಮಾತನಾಡಿ, ಪಕ್ಷಾತೀತವಾಗಿ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಕಂಪ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ನೀಡಿದೆ. ಕಂಪ್ಲಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರು ಪಡೆ ಇದೆ. ನಮ್ಮನ್ನು ಈ ಮಟ್ಟದಲ್ಲಿ ಬೆಳೆಸುವ ಜತೆಗೆ ಎರಡುಬಾರಿ ಶಾಸಕರನ್ನಾಗಿ ಮಾಡುವ ಮೂಲಕ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಕಾರ್ಯಕರ್ತರ ಹುಮ್ಮಸ್ಸು, ಉತ್ಸಾಹ ಕಡಿಮೆಯಾಗಿಲ್ಲ. ಇನ್ನೇರಡು ತಿಂಗಳಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಜನರು ನಮ್ಮನ್ನು ಆರಿಸಿ ತಂದರೆ, ಜನರೇ ಶಾಸಕರಾದಂತೆ. ಫೆ.23ರಂದು ಉಕ್ಕಿನ ಮನುಷ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಡೂರಿಗೆ ಆಗಮಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಜವಳಿ ಮತ್ತು ಕೈಮಗ್ಗ ನಿಗಮದ ಅಧ್ಯಕ್ಷ ಗುತ್ತಿಗೆನೂರು ವಿರೂಪಾಕ್ಷಪ್ಪ, ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವಿರೇಶ, ಮಾಜಿ ಸಂಸದೆ ಜೆ.ಶಾಂತಾ, ಕುರುಗೋಡು ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜು, ಮಹಿಳಾ ಘಟಕ ಅಧ್ಯಕ್ಷೆ ಸುಗುಣ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.