ಮಂಗಳೂರು: ಈ ವಿಧಾನಸಭಾ ಚುನಾವಣೆ ಕೇವಲ ಓರ್ವ ವ್ಯಕ್ತಿಯನ್ನಾಗಲಿ, ಓರ್ವ ಮಂತ್ರಿಯನ್ನಾಗಲಿ ಅಥವಾ ಕೇವಲ ಮುಖ್ಯ ಮಂತ್ರಿಯನ್ನು ಬದಲಿಸುವ ಚುನಾವಣೆಯಲ್ಲ. ಬದಲಾಗಿ ಇದು ಕರ್ನಾಟಕದ ಭವಿಷ್ಯವನ್ನು ಬದಲಿಸುವ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಅವರ ಪರವಾಗಿ ಕಾವೂರಿನಲ್ಲಿ ಮಂಗಳವಾರ ಸಂಜೆ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ಈ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಚಿತ ಎಂದು ಒತ್ತಿ ಹೇಳಿದ ಅಮಿತ್ ಶಾ, ಬಿಜೆಪಿ ಅಭ್ಯರ್ಥಿಗಳೆಲ್ಲರೂ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸವಿದ್ದು, ಮೇ 15ರಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ. ಸಿದ್ದರಾಮಯ್ಯ ಸೋಲಿನ ಭಯದಿಂದ ಬಾದಾಮಿಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಆರೆ ಅಲ್ಲಿ ಬಿಜೆಪಿಯ ಶ್ರೀರಾಮುಲು ಸ್ಪರ್ಧಿಸುತ್ತಿರುವುದನ್ನು ನೋಡಿ ಮತ್ತೆ ಅವರಿಗೆ ಆತಂಕ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಬಾವಾ ಪ್ರಚಾರ ವಾಹನಕ್ಕೆ ಅಡ್ಡಿ
ಅಮಿತ್ ಶಾ ಭಾಷಣ ಮುಗಿಯುತ್ತಿದ್ದಂತೆಯೇ ಬಿಜೆಪಿ ಬೆಂಬಲಿಗರು ಉತ್ಸಾಹದಿಂದ ಮೋದಿ ಪರ ಘೋಷಣೆ ಕೂಗುತ್ತಾ ತೆರಳುತ್ತಿದ್ದರು. ಇದೇ ವೇಳೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊದೀನ್ ಬಾವಾ ಪರ ಪ್ರಚಾರ ವಾಹನ ಅದೇ ಮಾರ್ಗವಾಗಿ ಸಾಗುತ್ತಿತ್ತು. ಬಿಜೆಪಿ ಬೆಂಬಲಿಗರು ವಾಹನವನ್ನು ಸುತ್ತುವರಿದು ಏರಿದ ಸ್ವರದಲ್ಲಿ ಮೋದಿ ಪರ ಘೋಷಣೆ ಕೂಗತೊಡಗಿದರು. ಗಂಭೀರತೆ ಅರಿತುಕೊಂಡ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ಪ್ರಚಾರ ವಾಹನ ಮುಂದಕ್ಕೆ ಚಲಿಸುವುದಕ್ಕೆ ಅವಕಾಶ ಮಾಡಿಕೊಟ್ಟರು.
ಪ್ರಚಾರ ಸಭೆಗೂ ಮೊದಲು ಶಾ ಕ್ಷೇತ್ರದಲ್ಲಿ ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋ ನಡೆಸಿದರು. ಸಂಸದ ನಳಿನ್ ಕುಮಾರ್, ಕ್ಯಾ|ಗಣೇಶ್ ಕಾರ್ಣಿಕ್, ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ನಾಗರಾಜ ಶೆಟ್ಟಿ ಭಾಗವಹಿಸಿದ್ದರು.